ADVERTISEMENT

ಮುಜರಾಯಿ ದೇಗುಲ ದುರಸ್ತಿಗೆ ಅನುಮತಿ ಅಗತ್ಯ

ಗೌರಮ್ಮನ ಕೆರೆಯ ಗಣೇಶ ದೇವಾಲಯ ಅಭಿವೃದ್ಧಿ l ತಹಶೀಲ್ದಾರ್‌ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 2:12 IST
Last Updated 25 ಸೆಪ್ಟೆಂಬರ್ 2020, 2:12 IST

ಮಾಗಡಿ: ಮುಜರಾಯಿ ಇಲಾಖೆಗೆ ಸೇರಿರುವ ದೇವಾಲಯ ದುರಸ್ತಿ ಮಾಡಿಸುವಾಗ ಭಕ್ತರು ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ತಹಶೀಲ್ದಾರ್‌ ಬಿ.ಜಿ.ಶ್ರೀನಿವಾಸ ಪ್ರಸಾದ್‌ ತಿಳಿಸಿದರು.

ಪಟ್ಟಣದ ಗೌರಮ್ಮನ ಕೆರೆಯ ಗಣೇಶ ದೇವಾಲಯವನ್ನು ಇಲಾಖೆಯ ಗಮನಕ್ಕೆ ತಾರದೆ ಜೀರ್ಣೋದ್ದಾರಗೊಳಿಸುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

ಐತಿಹಾಸಿಕ ದೇವಾಲಯಗಳನ್ನು ಪೂರ್ವಜರು ಆಗಮಶಾಸ್ತ್ರದ ಅನ್ವಯ ನಿರ್ಮಿಸಿರುತ್ತಾರೆ. ಶಿಥಿಲವಾಗಿರುವ ದೇವಾಲಯಗಳನ್ನು ದುರಸ್ತಿ ಮಾಡಿಸುವಾಗ ಗರ್ಭಗೃಹದಲ್ಲಿನ ಮೂಲ ವಿಗ್ರಹವನ್ನು ಕದಲಿಸದೆ, ದೇವಾಲಯ ದುರಸ್ತಿ ಪಡಿಸಬೇಕು. ಗೌರಮ್ಮನಕೆರೆ ಗಣಪತಿ ದೇವಾಲಯದ ಮೂಲ ವಿಗ್ರಹವನ್ನು ತೆಗೆದಿರುವುದು ತಪ್ಪು. ಅಲ್ಲದೆ ಪೂರ್ವಾಭಿಮುಖವಾಗಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಗ್ರಹವನ್ನು ಪಶ್ಚಿಮದ ಕಡೆ ತಿರುಗಿಸಿ ಕಟ್ಟಡ ಕಟ್ಟುತ್ತಿರುವುದು ಸರಿಯಲ್ಲ. ವಿಗ್ರಹವನ್ನು ಮೊದಲಿದ್ದಂತೆ ಪೂರ್ವಾಭಿಮುಖವಾಗಿ ನಿರ್ಮಿಸುವಂತೆ ಭಕ್ತರು ಮನವಿ ಮಾಡಿದ್ದಾರೆ ಎಂದು ಹೇಳಿದರು.

ADVERTISEMENT

ದೇವಾಲಯದ ದುರಸ್ತಿಗೆ ಮುಂದಾಗಿರುವ ವರ್ತಕ ಎಸ್‌.ಎನ್‌.ನಟರಾಜ್‌ ಅವರನ್ನು ಸ್ಥಳಕ್ಕೆ ಕರೆಯಿಸಿದ ಅವರು, ಮುಜರಾಯಿ ಇಲಾಖೆಯ ನಿಯಮಗಳನ್ನು ಉಲ್ಲಂಘಿಸದಂತೆ ತಿಳಿಸಿದರು. ಆಗಿರುವ ಪ್ರಮಾದವನ್ನು ಸರಿಪಡಿಸಲಾಗುವುದು ಎಂದರು.

ವೆಂಕಟರಮಣಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮಾಡಿಸುತ್ತಿರುವ ಶಾರದಾ ಸುರೇಶ್‌, ಪ್ರಸನ್ನ ರುದ್ರೇಶ್ವರ ಸ್ವಾಮಿ ದೇವಾಲಯದ ಅರ್ಚಕ ಕಿರಣ್‌ ದೀಕ್ಷಿತ್‌, ಹಿರಿಯ ವಕೀಲ ಆರ್‌.ಸುರೇಶ್‌ ಹಾಗೂ ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.