ADVERTISEMENT

ಮಿನಿ ವಿಧಾನಸೌಧದ ಮುಂದೆ ಭತ್ತದ ಪೈರು ನಾಟಿ

ಕನಕಪುರದಲ್ಲಿ ರೈತ ಸಂಘದ ಮುಖಂಡರಿಂದ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 19:30 IST
Last Updated 20 ಆಗಸ್ಟ್ 2019, 19:30 IST
ಕನಕಪುರ ಮಿನಿ ವಿಧಾನಸೌಧದ ಮುಂಭಾಗದಲ್ಲಿ ರೈತ ಸಂಘದವರು ಭತ್ತ ನಾಟಿ ಮಾಡಿದರು
ಕನಕಪುರ ಮಿನಿ ವಿಧಾನಸೌಧದ ಮುಂಭಾಗದಲ್ಲಿ ರೈತ ಸಂಘದವರು ಭತ್ತ ನಾಟಿ ಮಾಡಿದರು   

ಕನಕಪುರ: ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಮಳೆ ನೀರಿನಿಂದ ಕೆಸರು ಗದ್ದೆಯಂತಾಗಿದ್ದ ಜಾಗದಲ್ಲಿ ರೈತ ಸಂಘದ ಮುಖಂಡರು ಭತ್ತದ ಪೈರನ್ನು ನಾಟಿ ಮಾಡುವ ಮೂಲಕ ಶೀಘ್ರ ಅಭಿವೃದ್ಧಿ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ರೈತ ಸಂಘದ ಜಿಲ್ಲಾ ಘಟಕ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಅವರು ಮಾತನಾಡಿದರು.

‘ತಾಲ್ಲೂಕು ಕಚೇರಿ ಸೇರಿದಂತೆ ವಿವಿಧ ಹತ್ತಾರು ಇಲಾಖೆಗಳ ಕಚೇರಿಯು ಒಂದೇ ಕಡೆ ಇರಬೇಕೆಂದು ಮಿನಿ ವಿಧಾನಸೌಧವನ್ನು ಹತ್ತಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿ ಎರಡು ವರ್ಷಗಳ ಹಿಂದೆ ಉದ್ಘಾಟನೆ ಮಾಡಲಾಗಿದೆ. ಆದರೆ, ಇದವರೆಗೂ ಮುಂಭಾಗದ ಆವರಣವನ್ನು ಅಭಿವೃದ್ಧಿಗೊಳಿಸಿಲ್ಲ. ಎರಡು ದಿನ ಸಣ್ಣದಾಗಿ ಬಿದ್ದ ಮಳೆಗೆ ಮುಂದಿನ ಜಾಗವೆಲ್ಲಾ ಕೆಸರು ಗದ್ದೆಯಂತಾಗಿ ಜನತೆ ಓಡಾಡಲು ತೊಂದರೆ ಅನುಭವಿಸಬೇಕಾಗಿದೆ. ಜೋರಾಗಿ ಮಳೆ ಬಿದ್ದರೆ ಪರಿಸ್ಥಿತಿ ಏನಾಗಬಹುದು’ ಎಂದು ಪ್ರಶ್ನಿಸಿದರು.

ADVERTISEMENT

‘ಕಚೇರಿಯ ಒಳ ಭಾಗದಲ್ಲೂ ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ಗುತ್ತಿಗೆದಾರರು ಪೂರ್ಣಗೊಂಡಿದೆ ಎಂದು ತೋರಿಸಿ ಕಟ್ಟಡವನ್ನು ಉದ್ಘಾಟನೆ ಮಾಡಿಸಿದ್ದಾರೆ. ಹತ್ತಾರು ಕಚೇರಿಗಳು ಇಲ್ಲಿ ಕೆಲಸ ನಿರ್ವಹಿಸುತ್ತಿರುವುದರಿಂದ ಸಾವಿರಾರು ಜನ ಇಲ್ಲಿಗೆ ಬರುತ್ತಿದ್ದಾರೆ. ಎಂ.ಜಿ.ರಸ್ತೆಯಿಂದ ಕಚೇರಿಗೆ ಬರಲು ಸೂಕ್ತ ಜಾಗವನ್ನು ಮಾಡಿಲ್ಲ. ಮುಂಭಾಗದ ಆವರಣವೆಲ್ಲ ಮಳೆಗೆ ಕೆಸರು ಗದ್ದೆಯಾಗಿದೆ’ ಎಂದು ದೂರಿದರು.

ವಾಹನ ನಿಲುಗಡೆ ಜಾಗವಿಲ್ಲ. ಒಳಗಡೆ ಬರಲು ರಸ್ತೆಯಿಲ್ಲ. ಕಟ್ಟಡ ನಿರ್ಮಾಣದ ಸಮಯದಲ್ಲಿ ಯೋಜನೆ ಮಾಡಿರುವಂತೆ ಗುತ್ತಿಗೆದಾರರು ತ್ವರಿತವಾಗಿ ಕಾಮಗಾರಿ ಮುಗಿಸಿಕೊಡಬೇಕು. ಮಳೆಯ ನೀರು ಸರಾಗವಾಗಿ ಹೊರಗೆ ಹರಿದುಹೋಗುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ತಹಶೀಲ್ದಾರ್‌ ಅವರು ಇತ್ತಕಡೆ ಗಮನ ಹರಿಸಿ ಆಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಆಡಳಿತಕ್ಕೆ ಮನವಿ ಪತ್ರ ನೀಡಿದರು.

ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಶಶಿಕುಮಾರ್‌, ಪದಾಧಿಕಾರಿಗಳಾದ ಅಶೋಕ, ರಾಘವೇಂದ್ರ, ರವಿಚಂದ್ರ, ಕುಮಾರ್‌, ಮುನಿ ಬಸವೇಗೌಡ, ಬಸವರಾಜು, ಹರೀಶ್‌.ಬಿ.ಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.