ಚನ್ನಪಟ್ಟಣ: ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದ್ದು ಎಂದು ನಟ ಕಮಲ್ ಹಾಸನ್ ನೀಡಿರುವ ಹೇಳಿಕೆಯನ್ನು ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಕಾವೇರಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಕಮಲ್ ಹಾಸನ್ ಅವರ ಭಾವಚಿತ್ರಗಳನ್ನು ಸುಟ್ಟು ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಮಾತನಾಡಿ, ಕನ್ನಡ ಭಾಷೆಗೆ ತನ್ನದೇ ಆದ ಪುರಾತನ ಇತಿಹಾಸವಿದೆ. ಕನ್ನಡ ಭಾಷೆಗೆ ಪ್ರಾಚೀನತೆ ಇದೆ. ಸಾವಿರಾರು ಪ್ರಾಚೀನ ಶಾಸನಗಳಿವೆ. ಕಮಲ್ ಹಾಸನ್ ಕೇವಲ ಒಬ್ಬ ನಟನೇ ಹೊರತು ಅವರೇನು ಭಾಷಾ ತಜ್ಞರಲ್ಲ, ಸಂಶೋಧಕರಲ್ಲ. ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿ ಕ್ಷಮೆ ಕೇಳಲು ಸಹ ಒಪ್ಪದ ಅವರ ಸಿನಿಮಾಗಳನ್ನು ಕನ್ನಡ ನಾಡಿನಲ್ಲಿ ಸಂಪೂರ್ಣವಾಗಿ ಬಹಿಷ್ಕರಿಸಬೇಕು ಎಂದು ಒತ್ತಾಯಿಸಿದರು.
ಹಾಗೆಯೆ ಅದೇ ವೇದಿಕೆಯಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ಪುತ್ರ ಶಿವರಾಜ್ ಕುಮಾರ್ ಅವರು ಇದ್ದರೂ ಅವರು ಈ ಬಗ್ಗೆ ಸ್ಪಷ್ಟ ತಿರುಗೇಟು ನೀಡದೆ ಮೌನವಾಗಿದ್ದದ್ದು ಸಹ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತ ಪ್ರಾಂಶುಪಾಲ ನಿಂಗೇಗೌಡ, ನಿವೃತ್ತ ಉಪಪ್ರಾಂಶುಪಾಲ ಚ.ಶಿ.ವೆಂಕಟೇಗೌಡ, ಡಿಎಸ್‌ಎಸ್ ಸಂಚಾಲಕ ವೆಂಕಟೇಶ್, ಯೋಗೇಶ್ ಗೌಡ, ಮರಿ ಅಂಕೇಗೌಡ, ಕೃಷ್ಣ ಪ್ರಸಾದ್, ಜಯರಾಮು, ರಾಮಕೃಷ್ಣಪ್ಪ, ಚಿನ್ನಪ್ಪ, ಚಿಕ್ಕೇನಹಳ್ಳಿ ಸುರೇಶ್, ರಾಜು, ಬೀರೇಶ್, ರವಿ ಅಪ್ಪಗೆರೆ, ರಾಮಕೃಷ್ಣಪ್ಪ ಮೆಣಸಿಗನಹಳ್ಳಿ, ಡ್ರೈವರ್ ಶಿವಣ್ಣ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.