ADVERTISEMENT

ಅಂಡರ್ ಪಾಸ್ ರಸ್ತೆ ನಿರ್ಮಾಣಕ್ಕೆ ಒತ್ತಾಯ

ಚನ್ನಪಟ್ಟಣ: ಪಟ್ಲು ಸುತ್ತಮುತ್ತಲ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 15:57 IST
Last Updated 3 ಜೂನ್ 2020, 15:57 IST
ಚನ್ನಪಟ್ಟಣ ತಾಲ್ಲೂಕಿನ ಪಟ್ಲು ಗ್ರಾಮದ ಬಳಿ ಅಂಡರ್ ಪಾಸ್ ರಸ್ತೆಗೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಚನ್ನಪಟ್ಟಣ ತಾಲ್ಲೂಕಿನ ಪಟ್ಲು ಗ್ರಾಮದ ಬಳಿ ಅಂಡರ್ ಪಾಸ್ ರಸ್ತೆಗೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು   

ಚನ್ನಪಟ್ಟಣ: ತಾಲ್ಲೂಕಿನ ಪಟ್ಲು ಗ್ರಾಮದ ಮೂಲಕ ಕೋಮನಹಳ್ಳಿ, ದೇವರಹೊಸಹಳ್ಳಿಗೆ ಸಾಗುವ ರಸ್ತೆಯನ್ನು ಮುಚ್ಚಿ ರಸ್ತೆ ಮಧ್ಯೆಯೇ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲಾಗುತ್ತಿದೆ. ಇಲ್ಲಿ ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ಈ ಭಾಗದ ಗ್ರಾಮಸ್ಥರು ಬುಧವಾರ ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

ನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಆದರೆ ಇದೀಗ ಈ ರಸ್ತೆಯನ್ನು ಮುಚ್ಚಿ ಹೆದ್ದಾರಿ ಕಾಮಗಾರಿ ನಡೆಸಲಾಗುತ್ತಿದೆ. ಪಟ್ಲು ಭಾಗದಿಂದ ರಾಮನಗರ, ಬೆಂಗಳೂರು ಕಡೆಗೆ ಹೋಗಲು ಈ ರಸ್ತೆ ಬಳಕೆಯಾಗುತ್ತಿದೆ. ರಸ್ತೆ ಇದ್ದರೂ ಯಾವುದೇ ಮುಂದಾಲೋಚನೆ ಇಲ್ಲದೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ರೈತರ ಕೃಷಿಭೂಮಿ ಈ ಭಾಗದಲ್ಲಿ ಹೆಚ್ಚಾಗಿದೆ. ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸಲು ರಸ್ತೆಯನ್ನು ಹೆಚ್ಚಾಗಿ ಬಳಸುತ್ತಾರೆ. ಈ ರಸ್ತೆಯನ್ನು ಮುಚ್ಚಿದರೆ ನಾಲ್ಕೈದು ಕಿ.ಮೀ. ಬಳಸಿ ಹೋಗಬೇಕಾಗುತ್ತದೆ. ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡಬೇಕು. ಅಂಡರ್ ಪಾಸ್ ರಸ್ತೆ ಸೇರ್ಪಡೆ ಮಾಡಿ ನಂತರ ಕಾಮಗಾರಿ ಮುಂದುವರೆಸಬೇಕು’ ಎಂದು ದೇವರಹೊಸಹಳ್ಳಿ ಚೇತನ್ ಒತ್ತಾಯಿಸಿದರು.

ADVERTISEMENT

ವಿಷಯ ತಿಳಿದು ಸ್ಥಳಕ್ಕೆ ಬಂದ ಹೆದ್ದಾರಿ ಕಾಮಗಾರಿ ಸಂಸ್ಥೆಯ ವ್ಯವಸ್ಥಾಪಕರು, ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ರಸ್ತೆ ನಿರ್ಮಾಣ ಮಾಡದಿದ್ದರೆ ಶೀಘ್ರದಲ್ಲಿಯೇ ಭಾರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ ಪ್ರತಿಭಟನೆ ವಾಪಾಸ್ ಪಡೆದರು.

ಗಿರೀಶ್, ರಾಂಪುರ ರಾಜಣ್ಣ, ಸ್ವಾಮಿ, ಕೋಮನಹಳ್ಳಿ ಜಯರಾಜ್, ಗುರು, ಪಟ್ಲು ನಾಗೇಂದ್ರ, ಕಾಂತರಾಜು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.