ADVERTISEMENT

‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಬಳಗದಿಂದ ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2025, 8:11 IST
Last Updated 16 ಫೆಬ್ರುವರಿ 2025, 8:11 IST
<div class="paragraphs"><p>‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆ ವತಿಯಿಂದ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ&nbsp; ಸಹಯೋಗದಲ್ಲಿ ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ‘ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರ’ವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಉದ್ಘಾಟಿಸಿದರು.&nbsp;&nbsp;</p></div>

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆ ವತಿಯಿಂದ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ  ಸಹಯೋಗದಲ್ಲಿ ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ‘ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರ’ವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಉದ್ಘಾಟಿಸಿದರು.  

   

ರಾಮನಗರ: ‘ಇದುವರೆಗೆ ಪರೀಕ್ಷೆಗೆ ಗಂಭೀರವಾದ ತಯಾರಿ ನಡೆಸಿರಲಿಲ್ಲ. ತಂದೆ–ತಾಯಿ ಹಾಗೂ ಗುರುಗಳ ಮಾತನ್ನೂ ಸರಿಯಾಗಿ ಆಲಿಸಿರಲಿಲ್ಲ. ನನ್ನ ತಪ್ಪುಗಳ ಅರಿವಾಗಿದೆ. ಇಂದಿನಿಂದ ಮೊಬೈಲ್, ಟಿ.ವಿ.ಯಿಂದ ದೂರವಿರುವೆ. ಅನಗತ್ಯವಾಗಿ ಕಾಲಹರಣ ಮಾಡದೆ ಗಂಭೀರವಾಗಿ ಓದುವೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ತಂದೆ–ತಾಯಿ, ಗುರುಗಳು ಹಾಗೂ ಕಾಲೇಜಿಗೆ ಗೌರವ ತರುವೆ...’

‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆ ವತಿಯಿಂದ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶನಿವಾರ ಹಮ್ಮಿಕೊಂಡಿದ್ದ ‘ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರ’ದಲ್ಲಿ ಪಾಲ್ಗೊಂಡಿದ್ದ ಬಹುತೇಕ ವಿದ್ಯಾರ್ಥಿಗಳ ಅಭಿಪ್ರಾಯವಿದು.

ADVERTISEMENT

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಕಾರ್ಯಾಗಾರದಲ್ಲಿ ಅತಿಥಿಗಳ ಅನುಭವದ ನುಡಿಗಳು ಹಾಗೂ ವಿಷಯ ತಜ್ಞರ ಸ್ಪೂರ್ತಿದಾಯಕ ಮಾತುಗಳು, ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಆತಂಕ– ಒತ್ತಡ ನಿವಾರಿಸಿ, ಆತ್ಮವಿಶ್ವಾಸದ ಕಿಡಿ ಹೊತ್ತಿಸಿತು. ‘ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆ ಮಾಡಬಲ್ಲೆ’ ಎಂಬ ಚೈತನ್ಯವನ್ನು ತುಂಬಿತು.

ಕಿಚ್ಚು ಹೊತ್ತಿಸಿದ ಮಾತು:

ಹೈಕೋರ್ಟ್ ವಕೀಲರೂ ಆಗಿರುವ ಸ್ಫೂರ್ತಿದಾಯಕ ಮಾತುಗಾರ ಕೋಲಾರದ ಬಿ. ಸುರೇಶ್ ಗೌಡ ಅವರ ಮಾತುಗಳು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದವು. ಮಕ್ಕಳಿಗಾಗಿ ತಮ್ಮ ಬದುಕನ್ನು ಗಂಧದ ಕೊರಡಿನಂತೆ ತೇಯುವ ತಂದೆ–ತಾಯಿ ಹಾಗೂ ಗುರುಗಳ ಪರಿಶ್ರಮವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ ಅವರು, ಹೆತ್ತವರು ಹಾಗೂ ಕಲಿಸಿದವರಿಗೆ ಕೀರ್ತಿ ತರುವಂತಹ ಫಲಿತಾಂಶದತ್ತ ವಿದ್ಯಾರ್ಥಿಗಳು ಚಿತ್ತ ಹರಿಸುವಂತೆ ಹುರಿದುಂಬಿಸಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಿಂದಿಡಿದು ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಗಮನ ಸೆಳೆಯುವಂತಹ ಸಾಧನೆ ಮಾಡಿದವರ ಹಿಂದಿರುವ ಕರುಣಾಜನ ಕಥೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸುರೇಶ್ ಗೌಡ, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಾಧನೆಯ ಬೀಜವನ್ನು ಬಿತ್ತಿದ್ದರು.

ಸುರೇಶ್ ಗೌಡ ಅವರು ನೀಡುತ್ತಿದ್ದ ಜ್ವಲಂತ ನಿದರ್ಶನಗಳಿಗೆ ವಿದ್ಯಾರ್ಥಿಗಳು ಸೇರಿದಂತೆ ಸಭಾಂಗಣದಲ್ಲಿದ್ದವರ ಕಣ್ಣುಗಳು ಸಹ ಒದ್ದೆಯಾದವು. ಅವರ ಮಾತುಗಳು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯಲ್ಲಿ ಸಾಧನೆ ಮಾಡುವ ಕಿಚ್ಚನ್ನು ಹೊತ್ತಿಸುವ ಜೊತೆಗೆ, ಇದುವರೆಗಿನ ಬೇಜವಾಬ್ದಾರಿಯ ಕುರಿತು ಪಶ್ಚಾತ್ತಾಪದ ಅರಿವನ್ನೂ ಮೂಡಿಸಿತು. ಮನಸ್ಸನ್ನು ಎಲ್ಲೆಂದರಲ್ಲಿ ಹರಿಬಿಡದೆ ಸಾಧನೆಯತ್ತ ಕೇಂದ್ರೀಕರಿಸುವಂತೆ ಮಾಡಿತು.

ವಿಷಯವಾರು ಟಿಪ್ಸ್: ಕಾರ್ಯಗಾರದಲ್ಲಿ ಭಾಗವಹಿಸಿದ್ದ ವಿಷಯವಾರು ಸಂಪನ್ಮೂಲ ವ್ಯಕ್ತಿಗಳು ಸುಲಭವಾಗಿ ಅಂಕ ಗಳಿಸಲು ವಿದ್ಯಾರ್ಥಿಗಳು ಏನು ಮಾಡಬೇಕೆಂಬುದರ ಕುರಿತು ಟಿಪ್ಸ್‌ಗಳನ್ನು ನೀಡಿದರು. ಉತ್ತೀರ್ಣಕ್ಕೆ ಬೇಕಾದ ಅಂಕಗಳ ಗಡಿ ದಾಟಿಯೂ ಹೆಚ್ಚಿನ ಅಂಕಗಳನ್ನು ಹೇಗೆ ಗಳಿಸಬಹುದು ಎಂಬುದನ್ನು ಮನಮುಟ್ಟವಂತೆ ಸಂಕ್ಷಿಪ್ತವಾಗಿ ವಿವರಿಸಿದರು.

ಭೌತವಿಜ್ಞಾನ ವಿಷಯದ ಕುರಿತು ಮೈಲನಾಯಕನಹೊಸಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಮಹೇಶ್, ವಾಣಿಜ್ಯಶಾಸ್ತ್ರ ವಿಷಯ ಕುರಿತು ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಸವೇಗೌಡ, ಇಂಗ್ಲಿಷ್ ವಿಷಯದ ಕುರಿತು ಹಾರೋಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಅಶ್ವಿನಿ, ರಸಾಯನವಿಜ್ಞಾನ ಕುರಿತು ಚನ್ನಪಟ್ಟಣ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಡಾ. ಶ್ರೀನಿವಾಸ್ ವಿ. ಹಾಗೂ ಕನ್ನಡ ವಿಷಯ ಕುರಿತು ಕನಕಪುರದ ರೂರಲ್ ಕಾಲೇಜಿನ ಗದಿಗೆಪ್ಪ ಹಿತ್ತಲಮನಿ ವಿದ್ಯಾರ್ಥಿಗಳಿಗೆ ಅತ್ಯಮೂಲ್ಯ ಟಿಪ್ಸ್‌ಗಳನ್ನು ನೀಡಿದರು.

ಪರೀಕ್ಷೆಗೆ ತಯಾರಿಗೆ ಸಮಯದ ಹೊಂದಾಣಿಕೆ ಹೇಗೆ? ಪ್ರಶ್ನೆಪತ್ರಿಕೆಯನ್ನು ಅವಲೋಕಿಸಿ ಸಮಯದ ಅಭಾವವಾಗದಂತೆ ಯಾವ ರೀತಿ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವ ಚಾಕಚಕ್ಯತೆ ಬೆಳೆಸಿಕೊಳ್ಳಬೇಕು ಎಂಬುದರ ಕುರಿತು, ಉಪನ್ಯಾಸಕರೂ ಆಗಿರುವ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ. ಶಿವಣ್ಣ ಕಿವಿಮಾತು ಹೇಳಿದರು.

‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಬಳಗದ ಪ್ರಸರಣ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಜಗನ್ನಾಥ ಜೋಯಿಸ್ ಹಾಗೂ ‘ಪ್ರಜಾವಾಣಿ’ ಬೆಂಗಳೂರು ಗ್ರಾಮಾಂತರ ಬ್ಯುರೊ ಮುಖ್ಯಸ್ಥ ಗವಿಸಿದ್ದಪ್ಪ ಬ್ಯಾಳಿ ಇದ್ದರು. ಶಿಕ್ಷಕ ಶಿವಸ್ವಾಮಿ ನಿರೂಪಣೆ ಮಾಡಿದರು.

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಕಾರ್ಯಾಗಾರದಲ್ಲಿ ‘ಪ್ರಜಾವಾಣಿ’ ದಿನಪತ್ರಿಕೆ ಓದುವುದರಲ್ಲಿ ತಲ್ಲೀನರಾಗಿದ್ದ ವಿದ್ಯಾರ್ಥಿನಿಯರು

ವಿದ್ಯಾರ್ಥಿಗಳ ಅಭಿಪ್ರಾಯ

ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಗಣ್ಯರ ನುಡಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ಕಿವಿಮಾತುಗಳು ಪರೀಕ್ಷಾ ತಯಾರಿಗೆ ಹೊಸ ಚೈತನ್ಯ ತುಂಬಿತು. ಯಾವ ರೀತಿ, ಎಷ್ಟು ಓದಬೇಕು? ಸಮಯ ನಿರ್ವಹಣೆ ಹೇಗಿರಬೇಕೆಂಬುದು ಗೊತ್ತಾಯಿತು

ಮಹಮ್ಮದ್ ಯಾಸಿರ್ ಅರಾಫತ್, ಎಂ.ಎಂ.ಯು ಪಿಯು ಕಾಲೇಜು, ರಾಮನಗರ

‘ಪ್ರಜಾವಾಣಿ’ – ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯು ನಡೆಸಿದ ಕಾರ್ಯಾಗಾರಕ್ಕೆ ನಾನೇನಾದರೂ ತಪ್ಪಿಸಿಕೊಂಡಿದ್ದರೆ, ನನ್ನ ಜೀವನದಲ್ಲಿ ಅದೊಂದು ದೊಡ್ಡ ನಷ್ಟವಾಗುತ್ತಿತ್ತು. ಕಾರ್ಯಾಗಾರದಲ್ಲಿ ನನಗೆ ಅತ್ಯುಪಯುಕ್ತವಾದ ಮಾಹಿತಿ ಸಿಕ್ಕಿದೆ

ಎಸ್. ವರುಣ್ ರಾವ್, ಸರ್ಕಾರಿ ಪಿಯು ಕಾಲೇಜು, ಚನ್ನಪಟ್ಟಣ

ಕಾರ್ಯಗಾರದಲ್ಲಿ ಅಂತಿಮ ಪರೀಕ್ಷೆಗೆ ನಾವು ಮಾನಸಿಕವಾಗಿ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು, ತಂದೆ– ತಾಯಿ ಹಾಗೂ ಗುರುಗಳನ್ನು ಹೇಗೆ ಗೌರವಿಸಬೇಕೆಂಬುದರ ಕುರಿತು ಅಮೂಲ್ಯ ಸಲಹೆ ಸಿಕ್ಕಿತು. ಪರೀಕ್ಷೆಯಲ್ಲಿ ಸಾಧನೆ ಮಾಡಲು ಸ್ಫೂರ್ತಿ ನೀಡಿತು.

ಜಯಂತ್, ಯೂನಿವರ್ಸಲ್ ಪಿಯು ಕಾಲೇಜು, ರಾಮನಗರ

ಪರೀಕ್ಷೆಯ ಅಂತಿಮ ತಯಾರಿಯ ಸಿದ್ಧತೆಯಲ್ಲಿದ್ದ ನನಗೆ ಕಾರ್ಯಗಾರದಲ್ಲಿ ಅಮೂಲ್ಯ ಸಲಹೆ–ಸೂಚನೆಗಳು ಸಿಕ್ಕವು. ಸುರೇಶ್ ಗೌಡ ಸರ್, ರವೀಂದ್ರ ಭಟ್ ಸರ್, ಶಿವಣ್ಣ ಸರ್ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳ ಮಾತುಗಳು ಸ್ಫೂರ್ತಿ ತುಂಬಿದವು

ಯಶಸ್ವಿನಿ, ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಪಿಯು ಕಾಲೇಜು, ರಾಮನಗರ

ದ್ವಿತೀಯ ಪಿಯುಸಿ ಪರೀಕ್ಷೆ ನಮ್ಮ ಬದುಕಿಗೆ ಹೇಗೆ ತಿರುವು ನೀಡಬಲ್ಲದು ಎಂಬುದು ಕಾರ್ಯಗಾರದಿಂದ ಮನವರಿಕೆಯಾಯಿತು. ಈ ಕಾರ್ಯಾರದಲ್ಲಿ ಭಾಗವಹಿಸಿದ್ದರಿಂದಾಗಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಕಿಡಿಯು ನನ್ನೊಳಗೆ ಹೊತ್ತಿದೆ

ಶ್ರೇಯಾ, ಯೂನಿವರ್ಸಲ್ ಪಿಯು ಕಾಲೇಜು, ರಾಮನಗರ

ಸಾಧಿಸುವ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಗಣ್ಯರು ಹಾಗೂ ಸಂಪನ್ಮೂಲ ವ್ಯಕ್ತಿಗಳು ನಿದರ್ಶನಗಳ ಸಹಿತ ಹೇಳಿದ ಮಾತುಗಳು ನನ್ನನ್ನು ಹೆಚ್ಚು ಪ್ರಭಾವಿಸಿದವು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡುವಂತೆ ಪ್ರೇರೇಪಿಸಿದವು

ಗಾಯತ್ರಿ, ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ರಾಮನಗರ

ಬದುಕಿನ ದಿಕ್ಕು ಬದಲಿಸುವ ಘಟ್ಟ‌

‘ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಜೀವನ ದಿಕ್ಕು ಬದಲಾಯಿಸುವ ಘಟ್ಟ. ಈ ಅವಧಿಯಲ್ಲಿ ನಾವು ಸಮಯ ವ್ಯರ್ಥ ಮಾಡದೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ, ಮುಂದಿನ ಬದುಕು ಸುಂದರವಾಗಿರುತ್ತದೆ. ಮೊಬೈಲ್‌ ದಾಸರಾಗಿರುವ ನೀವು ಇಂದಿನಿಂದಲೇ ಮೊಬೈಲ್ ಪಕ್ಕಕ್ಕಿಟ್ಟು ಪುಸ್ತಕ ಹಿಡಿಯಬೇಕು. ಜಿಲ್ಲೆಗೆ ಅತ್ಯುತ್ತಮ ಫಲಿತಾಂಶ ತರಬೇಕು. ಆಗ ನಾವೇ ನಿಮ್ಮನ್ನು ಕರೆದು ಸನ್ಮಾನಿಸುತ್ತೇವೆ. ಈಗ ಕಷ್ಟಪಟ್ಟರೆ ಜೀವನವಿಡೀ ಸುಖವಾಗಿರಬಹುದು. ನಾನು ಸಹ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿ, ಕೆಎಎಸ್‌ನಲ್ಲಿ 45ನೇ ರ‍್ಯಾಂಕ್ ಪಡೆದೆ. ವಿವಿಧೆಡೆ ಕರ್ತವ್ಯ ನಿರ್ವಹಿಸಿ ಇದೀಗ ನನ್ನ ಜಿಲ್ಲೆಯಲ್ಲೇ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವ ಭಾಗ್ಯ ಸಿಕ್ಕಿದೆ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧನೆಗೆ ದೃಢನಿಶ್ಚಯ ಮಾಡಲು ಇದು ಸರಿಯಾದ ಸಮಯ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಸಾಧನೆಗೆ ಇಂದೇ ಶಪಥ ಮಾಡಿ

‘ತಮ್ಮ ಮಕ್ಕಳು ತಮಗಿಂತಲೂ ಚನ್ನಾಗಿ ಬದುಕಬೇಕೆಂದು ಬಯಸುವ ತಂದೆ–ತಾಯಿ ಹಾಗೂ ನನ್ನ ಶಿಷ್ಯ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಬೇಕೆಂದು ನಿರೀಕ್ಷಿಸುವ ಗುರುಗಳ ಪರಿಶ್ರಮವನ್ನು ವಿದ್ಯಾರ್ಥಿಗಳು ಅರಿತು, ಪರೀಕ್ಷಾ ಸಾಧನೆಗೆ ಶಪಥ ಮಾಡಬೇಕು. ಮಕ್ಕಳಿಗಾಗಿ ತಂದೆ–ತಾಯಿ ಬಿಸಿಲು–ಮಳೆ ಎನ್ನದೆ ದುಡಿಯುತ್ತಾರೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಗಂಟೆಗಟ್ಟಲೆ ನಿಂತು ಪಾಠ ಮಾಡುವ ಗುರುಗಳಿಗೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದ ಉಡುಗೊರೆ ಕೊಡಬೇಕು. ಮೊಬೈಲ್, ಸಿನಿಮಾ ಗೀಳು ಬಿಡಬೇಕು. ಅನಗತ್ಯವಾಗಿ ಕಾಲಹರಣ ಮಾಡದೆ, ಪ್ರೀತಿ-ಪ್ರೇಮದ ಮೋಹಕ್ಕೆ ಸಿಲುಕದೆ, ಚನ್ನಾಗಿ ಓದಿ ಮುಂದಿನ ಬದುಕಿಗೆ ಭದ್ರ ಬುನಾದಿ ಹಾಕಿಕೊಳ್ಳಬೇಕು. ಸಾಧಿಸುವ ಮನಸ್ಸಿದ್ದವರಿಗೆ ಸಾಕಷ್ಟು ಸಮಯ ಬೇಕಿಲ್ಲ. ಕಡಿಮೆ ಸಮಯವಿದೆ ಎಂದು ಸುಮ್ಮನೆ ಕೂರದೆ, ಈಗಿನಿಂದಲೇ ಓದಲು ಶುರು ಮಾಡಿದರೆ ಸಾಧನೆಯ ಶಿಖರ ಏರಬಲ್ಲಿರಿ. ನಿಮ್ಮೊಳಗಿನ ಜ್ಞಾನದ ಬಗ್ಗೆ ನಿವೇ ಅಚ್ಚರಿಪಡುವಂತಹ ಫಲಿತಾಂಶ ನಿಮ್ಮದಾಗಲಿದೆ. ಇದರಿಂದ ನಿಮ್ಮನ್ನು ಹೆತ್ತ ತಂದೆ–ತಾಯಿಗೆ, ಕಲಿಸಿದ ಗುರುಗಳಿಗೂ ಸಾರ್ಥಕವೆನಿಸಲಿದೆ’ ಎಂದು ಹೈಕೋರ್ಟ್ ವಕೀಲರೂ ಆದ ಸ್ಫೂರ್ತಿದಾಯಕ ಮಾತುಗಾರ ಸುರೇಶ್ ಗೌಡ ವಿದ್ಯಾರ್ಥಿಗಳಿಗೆ ಪ್ರೇರಣೆ ತುಂಬಿದರು.

‘ನ್ಯೂನತೆಗಳನ್ನು ಮೀರಿ ಪರಿಶ್ರಮಪಡಿ’

‘ನನ್ನ 35 ವರ್ಷಗಳ ವೃತ್ತಿ ಬದುಕು ಹಾಗೂ 45 ವರ್ಷಗಳ ಪತ್ರಿಕಾ ಓದಿನ ಅನುಭದಲ್ಲಿ ಇದುವರೆಗೆ ಹೊಟ್ಟೆ ಇಲ್ಲದೆ ಹುಟ್ಟಿದ ಮಕ್ಕಳ ಕುರಿತು ನಾನು ಸುದ್ದಿ ಬರೆದಿಲ್ಲ ಮತ್ತು ಓದಿಲ್ಲ. ಅದೇ ರೀತಿ ಕೈ, ಕಾಲು, ಕಣ್ಣು ಇಲ್ಲವೆಂದು ಆತ್ಮಹತ್ಯೆ ಮಾಡಿಕೊಂಡವರ ಸುದ್ದಿಯನ್ನು ಸಹ ಬರೆದಿಲ್ಲ ಹಾಗೂ ಓದಿಲ್ಲ. ಹೊಟ್ಟೆ ಇದ್ದ ಮೇಲೆ ನಮ್ಮ ಅನ್ನವನ್ನು ನಾವೇ ಸಂಪಾದನೆ ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬೇಕು. ನನ್ನ ಮಗನಿಗೆ ಕಿವಿ ಕೇಳುತ್ತಿರಲಿಲ್ಲ, ಮಾತು ಬರುತ್ತಿರಲಿಲ್ಲ. ಆತನಿಗೆ ಮಾತನಾಡಿಸಬೇಕೆಂದು ನಾವು ಮಾಡಿದ ಸತತ ಪ್ರಯತ್ನ ಮಾಡೆದವು. ಅಂತಿಮವಾಗಿ ಆತ ಜೆಇಇ ಪರೀಕ್ಷೆಯಲ್ಲಿ 361 ರ‍್ಯಾಂಕ್ ಪಡೆದ. ಬಿ.ಟೆಕ್ ಮಾಡಿ ಉದ್ಯೋಗ ಗಿಟ್ಟಿಸಿಕೊಂಡು ಬದುಕು ಕಟ್ಟಿಕೊಂಡ. ನ್ಯೂನತೆಯನ್ನು ಪಕ್ಕಕ್ಕಿಟ್ಟು ಸತತ ಪರಿಶ್ರಮಪಟ್ಟರೆ ಫಲ ನಿಶ್ಚಿತ. ವಿದ್ಯಾರ್ಥಿಗಳು ಚನ್ನಾಗಿ ಓದಿ ಧೈರ್ಯದಿಂದ ಪರೀಕ್ಷೆ ಎದುರಿಸಬೇಕು. ಪಠ್ಯ ಪುಸ್ತಕದ ಜೊತೆಗೆ ಪಠ್ಯೇತರ ಪುಸಕ್ತಗಳನ್ನು ಓದಿದರೆ ಬದುಕಿನಲ್ಲಿ ಮತ್ತಷ್ಟು ಮುಂದೆ ಬರಲು ಹಲವು ಹಾದಿಗಳು ತೆರೆದುಕೊಳ್ಳುತ್ತವೆ’ ಎಂದು ‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ಪ್ರಜಾವಾಣಿ’ ಕಾರ್ಯಕ್ಕೆ ಮೆಚ್ಚುಗೆ

ಸುದ್ದಿ, ಮಾಹಿತಿ ಹಾಗೂ ಮನರಂಜನೆಯ ಕರ್ತವ್ಯದೊಂದಿಗೆ ‘ಪ್ರಜಾವಾಣಿ’ಯ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ನೀಡುತ್ತಾ ಬಂದಿರುವ ಕೊಡುಗೆಗೆ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ‘ಉಪನ್ಯಾಸಕನಾಗಿದ್ದ ನನ್ನ ಅರಿವನ್ನು ವಿಸ್ತರಿಸುವಲ್ಲಿ ಹಾಗೂ ನಾನಿಂದು ಒಂದು ಸ್ಥಾನಮಾನ ಗಳಿಸುವಲ್ಲಿ ಪ್ರಜಾವಾಣಿ ಪಾತ್ರವೂ ಇದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ನೆನೆದರು. ‘ನಿಖರ ಸುದ್ದಿಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಪ್ರಜಾವಾಣಿ ಆತ್ಮೀಯ ಸಂಗಾತಿ. ವಿದ್ಯಾರ್ಥಿಗಳು ತಪ್ಪದೆ ಪ್ರಜಾವಾಣಿ ಓದಬೇಕು’ ಎಂದು ವಕೀಲ ಸುರೇಶ್ ಗೌಡ ಸಲಹೆ ನೀಡಿದರು. ‘ನಾಡಿನ ಸುದ್ದಿಗಳನ್ನು ನಿತ್ಯ ಉಣಬಡಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ ಹಮ್ಮಿಕೊಳ್ಳುತ್ತಾ ಬಂದಿರುವ ಪ್ರಜಾವಾಣಿ ನಡೆ ಮಾದರಿಯಾದುದು’ ಎಂದು ಪಿಯು ಇಲಾಖೆಯ ಉಪ ನಿರ್ದೇಶಕ ಎಂ.ಪಿ. ನಾಗಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣವು ಬದುಕನ್ನೇ ಬದಲಿಸಬಲ್ಲದು

ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಯಾರೂ ಕದಿಯಲಾಗದ ಆಸ್ತಿ ಯಾವುದಾದರೂ ಇದ್ದರೆ ಅದು ವಿದ್ಯೆ. ಶಿಕ್ಷಣವು ಬದುಕನ್ನೇ ಬದಲಿಸಬಲ್ಲದು. ದ್ವಿತೀಯ ಪಿಯುಸಿ ಪರೀಕ್ಷೆಗೆ ಅಂತಿಮ ತಯಾರಿಗೆ ಪೂರಕವಾಗಿ ‘ಪ್ರಜಾವಾಣಿ’ಯು ಜಿಲ್ಲಾಡಳಿತ ಹಾಗೂ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡ ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಿದೆ

ಎಂ.ಪಿ. ನಾಗಮ್ಮ, ಉಪ ನಿರ್ದೇಶಕಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)

ಭವಿಷ್ಯದ ದಿಕ್ಸೂಚಿ

ನಮ್ಮ ಕಲಿಕಾಮಟ್ಟ ಹಾಗೂ ವಿದ್ವತ್ತು ಪ್ರಸ್ತುತಪಡಿಸುವಿಕೆಯ ಸಾಮರ್ಥ್ಯವನ್ನು ಅಳೆಯುವ ವಿಧಾನವೇ ಪರೀಕ್ಷೆ. ಮೂರು ಗಂಟೆಗಳ ಪರೀಕ್ಷೆಯು ವಿದ್ಯಾರ್ಥಿಗಳ ಮುಂದಿನ ಬದುಕಿಗೆ ದಿಕ್ಸೂಚಿಯಾಗುತ್ತದೆ. ಎಷ್ಟು ಅಂಕ ಪಡೆಯುತ್ತೀರಿ ಎಂಬುದರ ಆಧಾರದ ಮೇಲೆ, ನಿಮ್ಮ ಬದುಕು ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದು ನಿರ್ಧಾರವಾಗಲಿದೆ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಪರೀಕ್ಷೆಗೆ ತಯಾರಿ ನಡೆಸಿ ಚನ್ನಾಗಿ ಬರೆಯಬೇಕು

ಜಿ. ಶಿವಣ್ಣ, ಜಿಲ್ಲಾಧ್ಯಕ್ಷ, ‍ಪದವಿ ಪೂರ್ವ ಪ್ರಾಂಶುಪಾಲರ ಸಂಘ

ವಿಷಯವಾರು ಟಿಪ್ಸ್

ಕಾರ್ಯಗಾರದಲ್ಲಿ ಭಾಗವಹಿಸಿದ್ದ ವಿಷಯವಾರು ಸಂಪನ್ಮೂಲ ವ್ಯಕ್ತಿಗಳು ಸುಲಭವಾಗಿ ಅಂಕ ಗಳಿಸಲು ವಿದ್ಯಾರ್ಥಿಗಳು ಏನು ಮಾಡಬೇಕೆಂಬುದರ ಕುರಿತು ಟಿಪ್ಸ್‌ಗಳನ್ನು ನೀಡಿದರು. ಉತ್ತೀರ್ಣಕ್ಕೆ ಬೇಕಾದ ಅಂಕಗಳ ಗಡಿ ದಾಟಿಯೂ ಹೆಚ್ಚಿನ ಅಂಕಗಳನ್ನು ಹೇಗೆ ಗಳಿಸಬಹುದು ಎಂಬುದನ್ನು ಮನಮುಟ್ಟವಂತೆ ಸಂಕ್ಷಿಪ್ತವಾಗಿ ವಿವರಿಸಿದರು.

ಭೌತವಿಜ್ಞಾನ ವಿಷಯದ ಕುರಿತು ಮೈಲನಾಯಕನಹೊಸಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಮಹೇಶ್, ವಾಣಿಜ್ಯಶಾಸ್ತ್ರ ವಿಷಯ ಕುರಿತು ಚನ್ನಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಸವೇಗೌಡ, ಇಂಗ್ಲಿಷ್ ವಿಷಯದ ಕುರಿತು ಹಾರೋಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಅಶ್ವಿನಿ, ರಸಾಯನವಿಜ್ಞಾನ ಕುರಿತು ಚನ್ನಪಟ್ಟಣ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಡಾ. ಶ್ರೀನಿವಾಸ್ ವಿ. ಹಾಗೂ ಕನ್ನಡ ವಿಷಯ ಕುರಿತು ಕನಕಪುರದ ರೂರಲ್ ಕಾಲೇಜಿನ ಗದಿಗೆಪ್ಪ ಹಿತ್ತಲಮನಿ ವಿದ್ಯಾರ್ಥಿಗಳಿಗೆ ಅತ್ಯಮೂಲ್ಯ ಟಿಪ್ಸ್‌ಗಳನ್ನು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.