ADVERTISEMENT

ನಿತ್ಯಬಳಕೆಗೆ ಟ್ಯಾಂಕರ್ ನೀರೇ ಗತಿ!

ವಾರಕ್ಕೆ, ಹತ್ತು ದಿನಕ್ಕೊಮ್ಮೆ ನೀರು ಸರಬರಾಜು: ಜನರ ಪರದಾಟ

ಆರ್.ಜಿತೇಂದ್ರ
Published 29 ಮಾರ್ಚ್ 2019, 19:45 IST
Last Updated 29 ಮಾರ್ಚ್ 2019, 19:45 IST
ರಾಮನಗರದಲ್ಲಿ ಶುಕ್ರವಾರ ಟ್ಯಾಂಕರ್‌ನಲ್ಲಿ ನೀರು ಕೊಂಡೊಯ್ಯುತ್ತಿರುವುದು
ರಾಮನಗರದಲ್ಲಿ ಶುಕ್ರವಾರ ಟ್ಯಾಂಕರ್‌ನಲ್ಲಿ ನೀರು ಕೊಂಡೊಯ್ಯುತ್ತಿರುವುದು   

ರಾಮನಗರ: ಬೇಸಿಗೆಯ ಆರಂಭದಲ್ಲಿಯೇ ನೀರಿಗೆ ಹಾಹಾಕಾರ ಮುಂದುವರಿದಿದ್ದು, ಜನರು ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗುವಂತೆ ಆಗಿದೆ.

ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಸದ್ಯ ವಾರಕ್ಕೆ ಒಮ್ಮೆ ನೀರು ಪೂರೈಕೆ ಆಗುತ್ತಿದೆ. ಕೆಲವು ಕಡೆ ಪರಿಸ್ಥಿತಿ ಕೈಮೀರುತ್ತಿದ್ದು, ಹತ್ತು ದಿನಕ್ಕೆ ಒಮ್ಮೆ ನೀರು ಸರಬರಾಜಾಗುತ್ತಿದೆ. ಜನರ ನಿತ್ಯ ಬಳಕೆಗೆ ಸಾಕಾಗುವಷ್ಟು ನೀರನ್ನು ಜಲಮಂಡಳಿಯು ಪೂರೈಸುತ್ತಿಲ್ಲ. ದಿನಬಳಕೆಗೆ ಹಾಗೂ ಕುಡಿಯಲು ನೀರು ಇಲ್ಲದಂತೆ ಆಗಿದೆ.

ನಗರಸಭೆಯೇ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಜನರ ದಾಹ ತಣಿಸುವ ಪ್ರಯತ್ನ ನಡೆಸಿದೆ. ಆದರೆ ಇದು ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ಜನರು ದುಡ್ಡು ತೆತ್ತು ಖಾಸಗಿ ಟ್ಯಾಂಕರ್‌ಗಳ ಮೂಲಕ ಮನೆಗಳಿಗೆ ನೀರು ಪಡೆಯತೊಡಗಿದ್ದಾರೆ.

ADVERTISEMENT

ಅಂತರ್ಜಲವು ಪಾತಾಳಕ್ಕೆ ಇಳಿಯುತ್ತಿರುವ ಕಾರಣ ಸಾಕಷ್ಟು ಕಡೆ ಕೊಳವೆ ಬಾವಿಗಳು ವಿಫಲವಾಗುತ್ತಿವೆ. ದೊಡ್ಡ ದೊಡ್ಡ ಕಟ್ಟಡಗಳ ಮಾಲೀಕರು, ಹೋಟೆಲ್‌ ಹಾಗೂ ವಸತಿ ಗೃಹಗಳ ನಿರ್ವಾಹಕರಿಗಂತೂ ಇದು ತಲೆನೋವಾಗಿದೆ.

ಬೋರ್‌ವೆಲ್‌ ನೀರು ಸಿಗದಿದ್ದ ಕಡೆ ಅವರೂ ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ. ಸದ್ಯ ನಗರದಲ್ಲಿ ಒಂದು ಟ್ಯಾಂಕರ್‌ನಷ್ಟು ನೀರಿಗೆ ₨400–500 ದರ ಇದೆ. ಪುಟ್ಟ ಸಂಪ್‌ಗಳ ವ್ಯವಸ್ಥೆ ಇರುವ ಮನೆಗಳವರು ಇಬ್ಬರು–ಮೂವರು ಸೇರಿ ಒಂದು ಟ್ಯಾಂಕರ್ ನೀರು ಪಡೆಯುತ್ತಿದ್ದಾರೆ. ಹೊರ ಪ್ರದೇಶಗಳ ಬಡಾವಣೆಗಳ ಜನರಿಗೆ ನೀರಿನ ಬವಣೆಯೂ ಇನ್ನಷ್ಟು ಹೆಚ್ಚಿದೆ.

ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರಿನ ಬೇಡಿಕೆಯ ಪ್ರಮಾಣವು ದುಪ್ಪಟ್ಟಾಗುತ್ತದೆ. ಆದರೆ ನೀರಿನ ಮೂಲಗಳು ಬತ್ತುತ್ತಿರುವುದು ಹಾಗೂ ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದಾಗಿ ಜನರಿಗೆ ಅವಶ್ಯವಾದಷ್ಟು ಪ್ರಮಾಣದಲ್ಲಿ ನೀರನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಜಲಮಂಡಳಿ ಹಾಗೂ ನಗರಸಭೆಯ ಅಧಿಕಾರಿಗಳು.

ಮಾಗಡಿ, ಚನ್ನಪಟ್ಟಣ, ಕನಕಪುರ, ಬಿಡದಿ ಪಟ್ಟಣಗಳಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನ ಏನಿಲ್ಲ. ಬಹುತೇಕ ಕಡೆ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿಲ್ಲ. ಅರ್ಧದಷ್ಟು ಬೋರ್‌ವೆಲ್‌ಗಳಲ್ಲಿ ನೀರು ಸಿಗುತ್ತಿಲ್ಲ. ಹೀಗಾಗಿ ಜಲಮಂಡಳಿ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೂ ನೀರು ಪೂರೈಕೆಯು ತಲೆನೋವಾಗಿ ಪರಿಣಮಿಸಿದೆ.

ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

ಸದ್ಯ ಸ್ಥಳೀಯ ನಗರ ಸಂಸ್ಥೆಗಳ ಆಡಳಿತಾವಧಿಯು ಕೊನೆಗೊಂಡಿದ್ದು, ಮೂರು ನಗರಸಭೆ ಹಾಗೂ ಒಂದು ಪುರಸಭೆಯ ಸದಸ್ಯರು ತಮ್ಮ ಅಧಿಕಾರ ಕಳೆದುಕೊಂಡಿದ್ದಾರೆ. ಹೀಗಾಗಿ ಅಧಿಕಾರಿಗಳ ದರ್ಬಾರಿನಲ್ಲಿ ಕಾರ್ಯ ನಡೆದಿದೆ. ಸಾರ್ವಜನಿಕರೂ ಈಗಲೂ ಜನಪ್ರತಿನಿಧಿಗಳನ್ನೇ ಪ್ರಶ್ನಿಸುತ್ತಿದ್ದಾರೆ. ಉತ್ತರಿಸಲಾಗದ ಸದಸ್ಯರು ತಲೆಮರಿಸಿಕೊಂಡು ಓಡಾಡತೊಡಗಿದ್ದಾರೆ.

ಸ್ಥಳೀಯ ಶಾಸಕಿ ಅನಿತಾ ಕುಮಾರಸ್ವಾಮಿ ಹಾಗೂ ಚನ್ನಪಟ್ಟಣದ ಶಾಸಕರಾದ ಮುಖ್ಯಮಂತ್ರಿ ಕುಮಾರಸ್ವಾಮಿ ಇಬ್ಬರೂ ಮಂಡ್ಯದ ರಾಜಕಾರಣದಲ್ಲೇ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಪ್ರತಿನಿಧಿಸುವ ಎರಡೂ ನಗರಸಭೆಗಳಲ್ಲೂ ನೀರಿನ ಸಮಸ್ಯೆ ತಾರಕಕ್ಕೆ ಏರಿದೆ. ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿ ನಿರ್ವಹಿಸಬೇಕಾದ ಶಾಸಕರು ರಾಜಕೀಯದೊಳಗೆ ಕಳೆದು ಹೋಗಿರುವುದಕ್ಕೆ ಸ್ಥಳೀಯರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ.

*ಕೊಳವೆಬಾವಿಗಳಲ್ಲಿನ ಮೋಟಾರ್‌ ದುರಸ್ತಿ, ವಿದ್ಯುತ್ ಸಮಸ್ಯೆಯಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಐದು ದಿನಕ್ಕೆ ಒಮ್ಮೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು
–ಪುಟ್ಟಯ್ಯ,ಎಇಇ, ಜಲಮಂಡಳಿ

ನಗರ ಪ್ರದೇಶದಲ್ಲಿ ನೀರು ಪೂರೈಕೆ ಸ್ಥಿತಿಗತಿ

ನಗರ/ಪಟ್ಟಣ ಜನಸಂಖ್ಯೆ ನೀರಿನ ಅಗತ್ಯ (ಎಂ.ಎಲ್‌ಡಿ) ಪೂರೈಕೆ ಪ್ರಮಾಣ
ರಾಮನಗರ 1.15 ಲಕ್ಷ 18.4 10.5
ಚನ್ನಪಟ್ಟಣ 90 ಸಾವಿರ 13.5 8.5
ಕನಕಪುರ 60 ಸಾವಿರ 8.1 5.5
ಮಾಗಡಿ 29 ಸಾವಿರ 4.8 3.2
ಪುರಸಭೆ 31 ಸಾವಿರ 4.8 3.8
ಒಟ್ಟು 3.25 ಲಕ್ಷ 49.6 31.5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.