ADVERTISEMENT

ಮಳೆ ಕೊರತೆ: ಕೃಷಿಗೆ ಹಿನ್ನಡೆ

ಕೈಕೊಟ್ಟ ಮುಂಗಾರು: ಒಣಗುತ್ತಿರುವ ಬೆಳೆಗಳು

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 15:35 IST
Last Updated 20 ಜೂನ್ 2019, 15:35 IST
ಮಾಗಡಿ ತಾಲ್ಲೂಕಿನ ಗವಿನಾಗಮಂಗಲ ಗ್ರಾಮದಲ್ಲಿನ ಹೊಲದಲ್ಲಿ ಒಣಗುತ್ತಿವ ಜೋಳದ ಬೆಳೆ
ಮಾಗಡಿ ತಾಲ್ಲೂಕಿನ ಗವಿನಾಗಮಂಗಲ ಗ್ರಾಮದಲ್ಲಿನ ಹೊಲದಲ್ಲಿ ಒಣಗುತ್ತಿವ ಜೋಳದ ಬೆಳೆ   

ರಾಮನಗರ: ಈ ಬಾರಿ ಮುಂಗಾರು ತೀವ್ರ ವಿಳಂಬವಾಗುತ್ತಿದ್ದು, ಕೃಷಿ ಕಾರ್ಯಕ್ಕೆ ಹಿನ್ನಡೆ ಆಗಿದೆ. ಹೊಲಗಳಲ್ಲಿನ ಅಲ್ಪಸ್ವಲ್ಪ ಬೆಳೆಯೂ ಒಣಗುತ್ತಿದೆ.

ಈ ವರ್ಷದ ಮುಂಗಾರು ಪೂರ್ವ ಮಳೆಯು ಉತ್ತಮವಾಗಿದ್ದು, ರೈತರಲ್ಲಿ ಭರವಸೆ ಮೂಡಿಸಿತ್ತು. ಜಿಲ್ಲೆಯ ವಿವಿಧೆಡೆ ಎಳ್ಳು, ದ್ವಿದಳ ಧಾನ್ಯಗಳು, ಜೋಳ ಮೊದಲಾದವುಗಳನ್ನು ಬಿತ್ತನೆ ಮಾಡಿದ್ದರು. ಆದರೆ ಬಹುತೇಕ ಕಡೆ ಬೆಳೆಗಳು ಈಗಾಗಲೇ ಒಣಗಿ ನಿಂತಿವೆ. ಇನ್ನೊಂದು ವಾರದಲ್ಲಿ ಮಳೆಯಾಗದಿದ್ದರೆ ಸಂಪೂರ್ಣ ಬೆಳೆನಷ್ಟವಾಗುವ ಭೀತಿ ಎದುರಾಗಿದೆ.

‘ಮೇ ಆರಂಭದಲ್ಲಿ ಉತ್ತಮ ಮಳೆ ಬಿದ್ದ ಕಾರಣ ಮೇವಿಗಾಗಿ ಹೊಲಕ್ಕೆ ಜೋಳ ಚೆಲ್ಲಿದ್ದೆವು. ಬೆಳೆಯೂ ಉತ್ತಮವಾಗಿ ಬಂದಿತ್ತು. ಆದರೆ ಕಳೆದ ಹದಿನೈದು ದಿನದಿಂದ ಹನಿ ಮಳೆಯಿಲ್ಲದ ಕಾರಣ ಬಹುತೇಕ ಬೆಳೆ ಒಣಗಿ ಹೋಗಿದೆ. ಮಳೆ ಬರದೇ ಹೋದರೆ ಜಾನುವಾರುಗಳಿಗೆ ಮೇವು ಸಿಗುವುದೂ ಅನುಮಾನ’ ಎಂದು ಯರೇಹಳ್ಳಿ ಗ್ರಾಮದ ರೈತ ನಂದೀಶ್‌ ತಿಳಿಸಿದರು.

ADVERTISEMENT

ಮಳೆ ಕೊರತೆ ಹೀಗೆಯೇ ಮುಂದುವರಿದಲ್ಲಿ ಅಂತರ್ಜಲಕ್ಕೂ ತೊಂದರೆ ಆಗಲಿದೆ. ಸಾಕಷ್ಟು ಕೊಳವೆ ಬಾವಿಗಳು ಈ ಬಾರಿಯ ಬೇಸಿಗೆಯಲ್ಲಿ ಬತ್ತಿದ್ದು, ಮಳೆಗಾಲದಲ್ಲಿ ನೀರು ಸಿಗಬಹುದು ಎಂದು ರೈತರು ಕಾದಿದ್ದಾರೆ.

ಮಳೆ ಕೊರತೆ: ಜೂನ್‌ನ ಮೊದಲ ವಾರ ಮುಂಗಾರು ಪೂರ್ವ ಮಳೆಯು ಉತ್ತಮವಾಗಿದ್ದರೂ ನಂತರದಲ್ಲಿ ಮಳೆಯಾಗಿಲ್ಲ. ಕಳೆದೊಂದು ವಾರದ ಅವಧಿಯಲ್ಲಿ ಕೇವಲ 1.7 ಮಿಲಿಮೀಟರ್‌ನಷ್ಟು ಮಳೆಯಾಗಿದೆ. ಭೂಮಿಗೆ ಬೇಕಾದ ಅಲ್ಪ ಪ್ರಮಾಣದ ತೇವಾಂಶವೂ ಸಿಕ್ಕಿಲ್ಲ. ಅದರಲ್ಲೂ ಕನಕಪುರ ಮತ್ತು ಚನ್ನಪಟ್ಟಣ ತಾಲ್ಲೂಕುಗಳು ಹೆಚ್ಚಿನ ಮಳೆ ಕೊರತೆ ಎದುರಿಸುತ್ತಿವೆ. ಇದರಿಂದಾಗಿ ಸಾಕಷ್ಟು ರೈತರು ಇನ್ನೂ ಜಮೀನನ್ನು ಉಳುಮೆ ಮಾಡದೇ ಹಾಗೆಯೇ ಬಿಟ್ಟಿದ್ದಾರೆ.

‘ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರವನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ರಾಜ್ಯಕ್ಕೆ ಇನ್ನೂ ಮುಂಗಾರು ಕಾಲಿಟ್ಟಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಬಹುದು’ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಜಿಲ್ಲೆಯಲ್ಲಿ ಮುಂಗಾರಿನಲ್ಲಿ 1.14 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಈ ವರ್ಷ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 80 ಸಾವಿರ ಹೆಕ್ಟೇರ್‌ನಷ್ಟು ಭೂಮಿಯಲ್ಲಿ ರಾಗಿ ಬಿತ್ತನೆಯಾಗುತ್ತದೆ. ಸಾಮಾನ್ಯವಾಗಿ ಜುಲೈ ಮಧ್ಯ ಭಾಗದಿಂದ ರಾಗಿ ಬಿತ್ತನೆ ಆರಂಭಗೊಳ್ಳುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದಲ್ಲಿ ಬಿತ್ತನೆ ಕಾರ್ಯ ಚುರುಕು ಪಡೆಯಲಿದೆ ಎನ್ನುತ್ತಾರೆ ಅಧಿಕಾರಿಗಳು.

ಕೆರೆಗಳಲ್ಲೂ ನೀರಿಲ್ಲ
ಈ ಬಾರಿ ಬೇಸಿಗೆ ಮಳೆಯಲ್ಲಿ ಕೆರೆಗಳಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ನೀರು ತುಂಬಿಲ್ಲ. ಸಾಕಷ್ಟು ಕಡೆ ಸಣ್ಣ ಹೊಂಡಗಳಲ್ಲಿ ಮಾತ್ರ ನೀರು ನಿಂತಿದೆ. ಕೆಲವು ಕೆರೆಗಳು ಮಾತ್ರ ಅರ್ಧದಷ್ಟು ತುಂಬಿವೆ. ಜಲಮೂಲಗಳ ಪುನಶ್ಚೇತನಕ್ಕೆ ಉತ್ತಮ ಮಳೆಯ ಅಗತ್ಯವಿದೆ. ಕಳೆದ ಆರು ವರ್ಷಗಳ ಪೈಕಿ 5 ವರ್ಷ ಕಾಲ ಜಿಲ್ಲೆಯು ಬರಗಾಲಕ್ಕೆ ತುತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.