ADVERTISEMENT

ರಾಮನಗರಜಿಲ್ಲೆಯ 3 ತಾಲ್ಲೂಕುಗಳಲ್ಲಿ ಮಳೆ ಕೊರತೆ, ಕೃಷಿಗೆ ಹಿನ್ನಡೆ

ಈ ತಿಂಗಳು ಮೂರು ತಾಲ್ಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ವರ್ಷಧಾರೆ

​ಪ್ರಜಾವಾಣಿ ವಾರ್ತೆ
Published 22 ಮೇ 2019, 12:34 IST
Last Updated 22 ಮೇ 2019, 12:34 IST
ರಾಮನಗರದ ಕೆಂಪೇಗೌಡನ ದೊಡ್ಡಿ ಬಳಿ ಅಲಸಂದೆ ಹಾಗೂ ಜೋಳದ ಬೆಳೆಯು ಮಳೆಯ ಕೊರತೆಯಿಂದಾಗಿ ಒಣಗುತ್ತಿರುವುದು
ರಾಮನಗರದ ಕೆಂಪೇಗೌಡನ ದೊಡ್ಡಿ ಬಳಿ ಅಲಸಂದೆ ಹಾಗೂ ಜೋಳದ ಬೆಳೆಯು ಮಳೆಯ ಕೊರತೆಯಿಂದಾಗಿ ಒಣಗುತ್ತಿರುವುದು   

ರಾಮನಗರ: ಜಿಲ್ಲೆಯ ಮೂರು ತಾಲ್ಲೂಕಿನಲ್ಲಿ ಈ ತಿಂಗಳು ವರುಣನ ಮುನಿಸು ಮುಂದುವರಿದಿದ್ದು, ಮುಂಗಾರು ಪೂರ್ವ ಬಿತ್ತನೆ ಕಾರ್ಯಕ್ಕೆ ತೀವ್ರ ಹಿನ್ನಡೆ ಆಗಿದೆ.

ಮೇ 1ರಿಂದ ಈವರೆಗೆ ರಾಮನಗರದಲ್ಲಿ ಮಾತ್ರ ವಾಡಿಕೆಯಷ್ಟು ಮಳೆ ಬಿದ್ದಿದ್ದು, ರೈತರು ಹೊಲ ಹದ ಮಾಡಿಕೊಂಡು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಆದರೆ ಕನಕಪುರ, ಚನ್ನಪಟ್ಟಣ ಹಾಗೂ ಮಾಗಡಿ ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದಾಗಿ ಕೃಷಿ ಕಾರ್ಯವು ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ.

ಈ ತಿಂಗಳಲ್ಲಿ ಈವರೆಗೆ ಚನ್ನಪಟ್ಟಣದಲ್ಲಿ 81.3 ಮಿ.ಮೀ. ಗೆ ಪ್ರತಿಯಾಗಿ ಕೇವಲ 46.8 ಮಿ.ಮೀ ಮಳೆ ಸುರಿದಿದ್ದು, ಶೇ 46ರಷ್ಟು ಮಳೆಯ ಕೊರತೆಯಾಗಿದೆ. ಕನಕಪುರ ತಾಲ್ಲೂಕಿನ ಸ್ಥಿತಿ ಸಹ ಇದಕ್ಕಿಂತ ಭಿನ್ನ ಏನಲ್ಲ. ಇಲ್ಲಿ ಈ ತಿಂಗಳು 79.7 ಮಿ.ಮೀ. ಗೆ ಪ್ರತಿಯಾಗಿ 47.1 ಮಿ.ಮೀ. ಮಳೆ ಸುರಿದಿದ್ದು, ಶೇ 41ರಷ್ಟು ಕೊರತೆಯಾಗಿದೆ. ಮಾಗಡಿ ತಾಲ್ಲೂಕಿನಲ್ಲಿ 82.2 ಮಿ.ಮೀ. ಗೆ ಪ್ರತಿಯಾಗಿ 51.8 ಮಿ.ಮೀ ಮಳೆ ಸುರಿದಿದ್ದು, ಶೇ 37ರಷ್ಟು ಕೊರತೆಯಾಗಿದೆ. ರಾಮನಗರದಲ್ಲಿ ಮಾತ್ರ 77.3 ಮಿ.ಮೀಗೆ ಪ್ರತಿಯಾಗಿ 78 ಮಿ.ಮೀ. ಮಳೆಯಾಗಿದ್ದು, ನಿರೀಕ್ಷಿತ ಮಟ್ಟದಲ್ಲಿ ವರ್ಷಧಾರೆಯಿಂದಾಗಿ ರೈತರು ಸಂತಸಗೊಂಡಿದ್ದಾರೆ.

ADVERTISEMENT

ಬಿತ್ತನೆ ಗುರಿ: ಈ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1.14 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ.

ಮುಂಗಾರು ಪೂರ್ವ ಅವಧಿಯಲ್ಲಿ ಎಳ್ಳು, ಅಲಸಂದೆ ಮೊದಲಾದ ಧಾನ್ಯಗಳ ಬಿತ್ತನೆಯಾಗುತ್ತದೆ. ಆದರೆ ಮಳೆಯ ಕೊರತೆಯಾಗಿರುವ ಕಾರಣ ರೈತರು ಹೊಲಕ್ಕೆ ಕಾಳು ಬಿತ್ತುವುದೋ ಬೇಡವೂ ಎನ್ನುವ ಸಂದೇಹದಲ್ಲಿ ಇದ್ದಾರೆ. ಹೀಗಾಗಿಯೇ ಬಿತ್ತನೆ ಕಾರ್ಯಕ್ಕೆ ಹಿನ್ನಡೆ ಆಗಿದೆ. ಬೇಸಿಗೆ ಅವಧಿಯಲ್ಲಿ 1130 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದ್ದು, ಈವರೆಗೆ 240 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆಯಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಮಳೆ ಅಂಕಿ–ಅಂಶ

137.5–ಪೂರ್ವ ಮುಂಗಾರು (ಮಾರ್ಚ್‌ 1ರಿಂದ ಮೇ 22) ಅವಧಿಯಲ್ಲಿನ ವಾಡಿಕೆ ಮಳೆ
98.4–ವಾಸ್ತವ ಮಳೆ
ಶೇ –28: ಕೊರತೆಯ ಪ್ರಮಾಣ

47.6 ಮಿ.ಮೀ–ಏಪ್ರಿಲ್‌ ತಿಂಗಳಲ್ಲಿನ ವಾಡಿಕೆ ಮಳೆ
44.2 ಮಿ.ಮೀ–ವಾಸ್ತವ ಮಳೆ
ಶೇ –7: ಕೊರತೆ ಪ್ರಮಾಣ

80.2–ಮೇ 1ರಿಂದ 22ರವರೆಗಿನ ವಾಡಿಕೆ ಮಳೆ
53.7–ವಾಸ್ತವ ಮಳೆ
ಕೊರತೆ: ಶೇ –33

ಪೂರ್ವ ಮುಂಗಾರು ತಾಲ್ಲೂಕುವಾರು ಮಳೆ ವಿವರ (ಮಾ.1ರಿಂದ ಮೇ 22–ಮಿ.ಮೀ.ಗಳಲ್ಲಿ)
ತಾಲ್ಲೂಕು ವಾಡಿಕೆ ವಾಸ್ತವ ಕೊರತೆ (ಶೇಕಡವಾರು)

ಚನ್ನಪಟ್ಟಣ 137.1 90.3 –34
ಕನಕಪುರ 137.2 95.1 –31
ಮಾಗಡಿ 142.9 91.1 –36
ರಾಮನಗರ 131.4 122.8 –7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.