ಚನ್ನಪಟ್ಟಣ: ತಾಲ್ಲೂಕಿನ ಬಹುತೇಕ ಭಾಗದಲ್ಲಿ ಬುಧವಾರ ಹಾಗೂ ಗುರುವಾರ ರಾತ್ರಿ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಕೆಲವೆಡೆ ಮರಗಳು ಧರೆಗುರುಳಿದರೆ, ಕೆಲವೆಡೆ ಬೆಳೆ ನಷ್ಟ ಉಂಟಾಗಿದೆ.
ಪಟ್ಟಣವು ಸೇರಿದಂತೆ ತಾಲ್ಲೂಕಿನ ವಿರೂಪಾಕ್ಷಿಪುರ, ಮಳೂರು ಹಾಗೂ ಕಸಬಾ ಹೋಬಳಿಗಳ ಬಹುತೇಕ ಕಡೆ ಉತ್ತಮ ಮಳೆಯಾಗಿದ್ದರೆ, ಕೆಲವೆಡೆ ಸಾಧಾರಣ ಮಳೆಯಾಗಿದೆ. ರಾತ್ರಿ 7 ಗಂಟೆ ಸುಮಾರಿಗೆ ಆರಂಭಗೊಂಡ ಬಿರುಗಾಳಿ ಮಳೆಗೆ ಇಡೀ ರಾತ್ರಿ ವಿದ್ಯುತ್ ಇಲ್ಲದೆ ಪರಿತಪಿಸುವಂತಾಗಿದೆ. ಯುಗಾದಿಯ ಮಾರನೆಯ ದಿನ ಬುಧವಾರ ಬಿರುಗಾಳಿ ಸಹಿತ ಮಳೆಯಾದ ಕಾರಣ ವಿದ್ಯುತ್ ಇಲ್ಲದೆ ಹಬ್ಬ ಆಚರಿಸುವಂತಾಯಿತು.
ಬಿರುಗಾಳಿ ಮಳೆಗೆ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ದೊಡ್ಡ ಆಲದಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಅದನ್ನು ಶುಕ್ರವಾರ ತೆರವುಗೊಳಿಸಲಾಯಿತು. ಹಾಗೆಯೆಕೆಲವೆಡೆ ತೆಂಗಿನ ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದ ವರದಿಯಾಗಿದೆ. ಅಲ್ಲದೇ ಗಾಳಿಯಿಂದಾಗಿ ಕೆಲವೆಡೆ ಮಾವಿನ ಕಾಯಿಗಳು ಉದುರಿ ಬಿದ್ದಿದ್ದು, ಇದರಿಂದ ಕೆಲವು ರೈತರು ನಷ್ಟ ಅನುಭವಿಸಿದ್ದಾರೆ. ತಾಲ್ಲೂಕಿನ ಬೇವೂರು, ಕೋಡಂಬಹಳ್ಳಿ, ಹೊಂಗನೂರು ಸೇರಿದಂತೆ ಕೆಲವು ಗ್ರಾಮಗಳಲ್ಲಿ ರೈತರ ಜೋಳದ ಬೆಳೆಗಳು ನೆಲಕಚ್ಚಿವೆ.
ತಾಲ್ಲೂಕಿನ ಕೊಂಡಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದ ಗಾಳಿ ಮಳೆಗೆ ಮೂರು ವಿದ್ಯುತ್ ಕಂಬಗಳು ನೆಲಕಚ್ಚಿದ್ದು, ಈ ಭಾಗದಲ್ಲಿ ರಾತ್ರಿಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಬಿದ್ದ ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಬೆಸ್ಕಾಂ ನೌಕರರುದುರಸ್ತಿ ಮಾಡಲು ಸಾಹಸ ಪಡುವಂತಾಯಿತು.
ಬಿರು ಬೇಸಿಗೆಗೆ ಬಣಗುಡುತ್ತಿರುವ ಇಳೆಯನ್ನು ತಂಪುಮಾಡಲು ಮಳೆರಾಯ ಹೊಸ ಸಂವತ್ಸರದ ಆರಂಭದಲ್ಲಿಯೇ ಶುಭಾರಂಭ ಮಾಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.