ADVERTISEMENT

ರಾಮನಗರ: ಭೈರಮಂಗಲ ಕೆರೆಗೂ ಜಿಬಿಡಿಎ ಕಾಯಕಲ್ಪ

ರಾಜಧಾನಿಯ ಕೊಳಚೆ, ಕೈಗಾರಿಕಾ ಪ್ರದೇಶದ ಕಲ್ಮಶ ತುಂಬಿ ನೊರೆ ಸೂಸುವ ಕೆರೆ

ಓದೇಶ ಸಕಲೇಶಪುರ
Published 20 ಮೇ 2025, 6:05 IST
Last Updated 20 ಮೇ 2025, 6:05 IST
ಬಿಡದಿ ಹೋಬಳಿಯ ಭೈರಮಂಗಲ ಗ್ರಾಮದಲ್ಲಿರುವ ಭೈರಮಂಗಲ ಕೆರೆ
ಬಿಡದಿ ಹೋಬಳಿಯ ಭೈರಮಂಗಲ ಗ್ರಾಮದಲ್ಲಿರುವ ಭೈರಮಂಗಲ ಕೆರೆ   

ರಾಮನಗರ: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಡಿಎ) ಬಿಡದಿ ಸಮಗ್ರ ಉಪನಗರ ಯೋಜನೆಯಡಿ ಭೈರಮಂಗಲ ಕೆರೆಗೂ (ಭೈರಮಂಗಲ ಜಲ ಸಂಗ್ರಹಗಾರ) ಕಾಯಕಲ್ಪ ಸಿಗಲಿದೆ. ಯೋಜನಾ ಪ್ರದೇಶದ ಗ್ರಾಮ ಪಂಚಾಯಿತಿ ಕೇಂದ್ರವಾದ ಭೈರಮಂಗಲದಲ್ಲಿರುವ ಕೆರೆ ಶುದ್ಧೀಕರಣವಾಗದ ಹೊರತು, ಈ ಭಾಗಕ್ಕೆ ಎಂತಹದ್ದೇ ಯೋಜನೆ ಬಂದರೂ ಅದು ಯಶಸ್ಸು ಕಾಣವುದಿಲ್ಲ. ಇದೇ ಕಾರಣಕ್ಕಾಗಿ ಪ್ರಾಧಿಕಾರವು ಕೆರೆ ಶುದ್ಧೀಕರಣವನ್ನು ಸಹ ಯೋಜನೆಯ ಪ್ರಮುಖ ಆದ್ಯತೆಯಾಗಿ ಪರಿಗಣಿಸಿದೆ.

ಭೈರಮಂಗಲ ಗ್ರಾಮದ ಹೊರವಲಯದಲ್ಲಿ ಹರಿದು ಹೋಗುತ್ತಿದ್ದ ವೃಷಭಾವತಿ ನದಿ ನೀರನ್ನು ಸ್ಥಳೀಯವಾಗಿ ಕುಡಿಯುವ ನೀರು, ಕೃಷಿ ಮತ್ತು ತೋಟಗಾರಿಕೆ ಉದ್ದೇಶಕ್ಕೆ ಬಳಸುವ ಸಲುವಾಗಿ 1930-40ರ ಅವಧಿಯಲ್ಲಿ, ನದಿಗೆ ಅಡ್ಡವಾಗಿ 416 ಹೆಕ್ಟೇರ್ ಪ್ರದೇಶದಲ್ಲಿ ಕೆರೆ ಕಟ್ಟೆ ನಿರ್ಮಿಸಲಾಗಿತ್ತು. ಅಂದಿನಿಂದ ಈ ಭಾಗದ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗೆ ಉತ್ತೇಜನ ಸಿಕ್ಕಿತ್ತಲ್ಲದೆ, ಈ ಭಾಗದ ಫಲವತ್ತತ್ತೆ ಹೆಚ್ಚಳಕ್ಕೂ ಕೆರೆ ಕಾರಣವಾಗಿತ್ತು.

ಕೊಳಚೆ ನದಿ: ಬೆಂಗಳೂರಿನ ಬಸವನಗುಡಿಯಲ್ಲಿ ಹುಟ್ಟುವ ವೃಷಭಾವತಿ, ರಾಜಧಾನಿ ದಾಟಿ ಭೈರಮಂಗಲ ಕೆರೆ ತಲುಪಿ, ಕನಕಪುರ ಮಾರ್ಗವಾಗಿ ಹರಿದು ಸಂಗಮದಲ್ಲಿ ಕಾವೇರಿ ನದಿ ಸೇರುತ್ತದೆ. ರಾಜಧಾನಿ ಮತ್ತು ಹೊರಗಿನ ಅಭಿವೃದ್ಧಿಯ ಹೊಡೆತಕ್ಕೆ ಹಲವು ವರ್ಷಗಳಿಂದ ಸಿಲುಕಿರುವ ವೃಷಭಾವತಿ ಈಗ ಕೊಳಚೆ ನದಿಯಾಗಿ ಮಾರ್ಪಟ್ಟಿದೆ. ದೇಶದಲ್ಲಿ ಅತಿ ಹೆಚ್ಚು ಮಲೀನವಾಗಿರುವ 16 ನದಿಗಳಲ್ಲಿ ವೃಷಭಾವತಿಯೂ ಒಂದು. ಕೆರೆ ನೀರಷ್ಟೇ ಅಲ್ಲದೆ, ಗ್ರಾಮದ ಸುತ್ತಮುತ್ತಲಿನ ಅಂತರ್ಜಲವೂ ಕಲುಷಿತವಾಗಿದೆ.

ನದಿಗೆ ಬೆಂಗಳೂರು ಮತ್ತು ಬಿಡದಿ ಭಾಗದ ಕಾರ್ಖಾನೆಗಳ ರಾಸಾಯನಿಕ ಕಲ್ಮಶ ಯಥೇಚ್ಛವಾಗಿ ನದಿ ಮತ್ತು ಕೆರೆಯೊಡಲು ಸೇರುವುದರಿಂದ ನೀರು ಹರಿಯವಾಗ ನೊರೆ ಉತ್ಪತ್ತಿಯಾಗುತ್ತಿದೆ. ಒಂದು ಕಾಲದಲ್ಲಿ ಭೈರಮಂಗಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಪಾಲಿಗೆ ಸ್ವರ್ಗದಂತಿಗೆ ಕೆರೆ ಪ್ರದೇಶ, ಇದೀಗ ಶಾಪವಾಗಿ ಪರಿಣಮಿಸಿದೆ. ಇಲ್ಲಿನ ನೀರು ಕೃಷಿ, ತೋಟಗಾರಿಕೆಗೆ ಬಳಸಲು ಹಾಗೂ ಜಾನುವಾರುಗಳಿಗೆ ನೀರು ಕುಡಿಸಲು ಸಹ ಯೋಗ್ಯವಿಲ್ಲದಷ್ಟು ಕಲ್ಮಶವಾಗಿದೆ. ಕಿಲೋಮೀಟರ್‌ಗೂ ಮುಂಚೆಯೇ ಕೆರೆ ಗಬ್ಬು ನಾರುತ್ತದೆ.

ADVERTISEMENT

ಡಿಸಿಎಂ ಕಾಳಜಿ: ‘2006ರಲ್ಲಿ ಬಿಡದಿ ಉಪನಗರ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದಾಗ ಭೈರಮಂಗಲ ಕೆರೆ ಶುದ್ಧೀಕರಣ ಕಾರ್ಯವು ಯೋಜನೆಯ ಭಾಗವಾಗಿರಲಿಲ್ಲ. ಈಗ ಕೆರೆ ಶುದ್ಧೀಕರಣಗೊಳಿಸಿ ಕಾಯಕಲ್ಪ ನೀಡುವುದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಶೇಷ ಕಾಳಜಿ ವಹಿಸಿದ್ದಾರೆ. ಆ ನಿಟ್ಟಿನಲ್ಲಿ ಈಗಾಗಲೇ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಶುದ್ಧೀಕರಣಕ್ಕೆ ನಿರ್ದೇಶನ ನೀಡಿದ್ದಾರೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುಮಾರು 0.7 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಕೆರೆಯ ಮೇಲ್ದಂಡೆ ಮತ್ತು ಕೆಳದಂಡೆ ವ್ಯಾಪಕವಾಗಿದೆ. ರಾಜಧಾನಿ ಮತ್ತು ಹೊರವಲಯದಲ್ಲಿರುವ ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳ ಸುಮಾರು 800-900 ಎಂಎಲ್‌ಡಿ ನೀರು ಕೆರೆ ಮೂಲಕ ಹಾದು ಹೋಗುತ್ತಿದೆ. ಈ ಪೈಕಿ ಕೇವಲ 350 ಎಂಎಲ್‌ಡಿ ಮಾತ್ರ ಸಂಸ್ಕರಣೆಯಾಗುತ್ತಿದೆ. ಹಾಗಾಗಿ, ಕೆರೆಯನ್ನು ಶುದ್ಧೀಕರಿಸಿ ಸಂರಕ್ಷಣೆ ಮಾಡಿ ಅಭಿವೃದ್ಧಿಪಡಿಸಲಾಗುವುದು. ಇದರಿಂದ ಭೈರಮಂಗಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಜನ ಅನುಭವಿಸುತ್ತಿರುವ ನರಕಕ್ಕೆ ಮುಕ್ತಿ ಸಿಗಲಿದೆ’ ಎಂದು ಹೇಳಿದರು.

ತರಕಾರಿಗೆ ಖರೀದಿಗೆ ಹಿಂದೇಟು: ಒಂದು ಕಾಲದಲ್ಲಿ ಭೈರಮಂಗಲ ಗ್ರಾಮವು ಹೆಚ್ಚು ಕಬ್ಬು ಬೆಳೆಯುವ ಪ್ರದೇಶವಾಗಿತ್ತು. ಇಲ್ಲಿನ ಬೆಲ್ಲ ಹೆಸರುವಾಸಿಯಾಗಿತ್ತು. ಕೆರೆ ಮಲೀನವಾದಾಗಿನಿಂದ ಕೆರೆ ಅಚ್ಚುಕಟ್ಟು ಪ್ರದೇಶಗಳಲ್ಲಿ ಬೆಳೆದ ಕೃಷಿ, ತೋಟಗಾರಿಕಾ ಬೆಳೆಗಳನ್ನು ಖರೀದಿಸಲು ಜನ ಈಗ ಹಿಂದೇಟು ಹಾಕುತ್ತಿದ್ದಾರೆ. ಈ ಭಾಗದ ತರಕಾರಿಗಳಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿವೆ. ಬೆಂಗಳೂರಿನ ಕೊಳಚೆ ಮತ್ತು ಕೈಗಾರಿಕಾ ತ್ಯಾಜ್ಯ ನೀರು ಕೆರೆ ಪಾಲಾಗುತ್ತಿರುವುದರಿಂದ ಈ ಪ್ರದೇಶದ ಕೃಷಿ ಮತ್ತು ತೋಟಗಾರಿಕೆಗೂ ಹೊಡೆತ ಬಿದ್ದಿದೆ.

ಈಗಾಗಲೇ ಬಂದು ಹೋಗಿರುವ ಸರ್ಕಾರಗಳು ಕೆರೆ ಶುದ್ಧೀಕರಣದ ಭರವಸೆಯ ಮಾತುಗಳನ್ನಾಡಿವೆಯೇ ಹೊರತು, ಮಾತನ್ನು ಕೃತಿಗಿಳಿಸಿಲ್ಲ. ಉಪನಗರ ಯೋಜನೆ ನೆಪದಲ್ಲಿ ಕೆರೆಗೆ ಶುದ್ಧೀಕರಣದ ಭಾಗ್ಯವೂ ಸಿಕ್ಕಿದೆ. ಈಗ ಬಿಟ್ಟರೆ ಮುಂದೆಂದೂ ಕೆರೆಗೂ ಕಾಯಕಲ್ಪ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಯಾಕೆಂದರೆ, ಸಾವಿರಾರೂ ಕೋಟಿ ಮೊತ್ತದ ಉಪನಗರ ಯೋಜನೆಯ ಯಶಸ್ಸು ಸಹ ಕೆರೆ ಶುದ್ಧೀಕರಣವನ್ನೇ ಅವಲಂಬಿಸಿದೆ.

ಕೆರೆಯಂಗಳದಲ್ಲಿ ಬೆಳೆದಿರುವ ಕಳೆಯಲ್ಲಿ ಕೊಳಚೆ ಕಟ್ಟಿಕೊಂಡಿರುವುದು

ಭೈರಮಂಗಲ ಕೆರೆ ಶುದ್ಧೀಕರಣವು ಬಿಡದಿ ಸಮಗ್ರ ಉಪನಗರ ಯೋಜನೆಯ ಭಾಗವಾಗಿದೆ. ಕೆರೆ ಶುದ್ಧೀಕರಿಸುವ ಜೊತೆಗೆ ಅದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೆರೆ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದು ಅದಕ್ಕಾಗಿ ಡಿಪಿಆರ್ ಕೂಡ ತಯಾರಿಸಲಾಗುವುದು – ಜಿ.ಎನ್. ನಟರಾಜ್ ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಜಿಬಿಡಿಎ ನೇತೃತ್ವದಲ್ಲಿ ವಿವಿಧ ಸಂಸ್ಥೆಗಳ ಸಹಯೋಗ ಉಪನಗರ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿರುವ ಭೈರಮಂಗಲ ಕೆರೆಯನ್ನು ಜಿಬಿಡಿಎ ನೇತೃತ್ವದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹಾಗೂ ಕಾವೇರಿ ನೀರಾವರಿ ನಿಗಮ ಲಿಮಿಟೆಡ್ (ಸಿಎನ್‌ಎನ್‌ಎಲ್) ಸಹಯೋಗದಲ್ಲಿ ಶುದ್ಧೀಕರಿಸಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಕೆರೆಯು ಕಲುಷಿತವಾಗಲು ಬೆಂಗಳೂರಿನಿಂದ ಹರಿದು ಬರುವ ಕೊಳಚೆ ಪ್ರಮುಖ ಕಾರಣವಾಗಿರುವುದರಿಂದ ಬಿಬಿಎಂಪಿ ಸೇರಿದಂತೆ ಪೂರಕವಾಗಿರುವ ಸಂಸ್ಥೆಗಳನ್ನು ಒಳಗೊಂಡು ಅಭಿವೃದ್ಧಿ ಮಾಡಲಾಗುತ್ತದೆ ಎಂದು ಪ್ರಾಧಿಕಾರದ ಸಹಾಯಕ ಆಯುಕ್ತ ಮಾರುತಿ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.