ADVERTISEMENT

ಹದಗೆಟ್ಟ ರಸ್ತೆ: ಜನರ ಪರದಾಟ

ಕೆಸರು ಗುಂಡಿಗಳ ಮೇಲೆ ವಾಹನ ಸವಾರರ ಸರ್ಕಸ್‌: ವಿದ್ಯಾರ್ಥಿಗಳ ಓಡಾಟಕ್ಕೂ ತೊಂದರೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 11:32 IST
Last Updated 22 ಅಕ್ಟೋಬರ್ 2019, 11:32 IST
ಬಿಜಿಎಸ್ ಆಸ್ಪತ್ರೆಯ ವೃತ್ತದಿಂದ ಆಂಜನೇಯಸ್ವಾಮಿ ದೇವಾಲಯಕ್ಕೆ ಹೋಗುವ ರಸ್ತೆಯ ದುಸ್ಥಿತಿ
ಬಿಜಿಎಸ್ ಆಸ್ಪತ್ರೆಯ ವೃತ್ತದಿಂದ ಆಂಜನೇಯಸ್ವಾಮಿ ದೇವಾಲಯಕ್ಕೆ ಹೋಗುವ ರಸ್ತೆಯ ದುಸ್ಥಿತಿ   

ರಾಮನಗರ: ಜಿಲ್ಲಾ ಕೇಂದ್ರವಾದ ರಾಮನಗರದ ಮುಖ್ಯರಸ್ತೆಗಳಲ್ಲಿ ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಆದರೂ ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸದೇ ಮೌನ ವಹಿಸಿರುವುದಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರ ವಾಹನ, ಸಾವಿರಾರು ಸರಕು ಸಾಗಣೆ, ಸಾರ್ವಜನಿಕ ಸಾರಿಗೆ ವಾಹನಗಳು ಸಂಚಾರ ಮಾಡುತ್ತಿವೆ. ಬೆಂಗಳೂರು–-ಮೈಸೂರು ಹೆದ್ದಾರಿಯಲ್ಲಿಯೂ ಅನೇಕ ಕಡೆ ಗುಂಡಿಗಳು ಬಿದ್ದು ವಾಹನ ಚಾಲಕರು ಪರದಾಡುವಂತಾಗಿವೆ. ಇಲ್ಲಿನ ಕೆಂಪೇಗೌಡ ವೃತ್ತದಿಂದ ಚನ್ನೇನಹಳ್ಳಿಯವರೆಗಿನ ರಸ್ತೆ, ಕೆಂಪೇಗೌಡ ವೃತ್ತದಿಂದ ಲಕ್ಷ್ಮೀಪುರದ ರಸ್ತೆ, ವಿವೇಕಾನಂದನಗರದ ಬಿಜಿಎಸ್ ಆಸ್ಪತ್ರೆಯ ವೃತ್ತದಿಂದ ಆಂಜನೇಯಸ್ವಾಮಿ ದೇವಾಲಯದ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಜತೆಗೆ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿ ರಸ್ತೆಗಳು ಹಾಳಾಗಿವೆ. ಕೆಲವು ಕಡೆ ಮಳೆಯ ನೀರಿನಿಂದ ಮಣ್ಣು ಕೊಚ್ಚಿ ಹೋಗಿದ್ದು ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಗಿದೆ.

‘ನಗರದ ರಸ್ತೆಗಳು ಗುಂಡಿಮಯವಾಗಿದ್ದು, ಗುಂಡಿಗಳನ್ನು ಮುಚ್ಚಿ ರಸ್ತೆಯನ್ನು ಸರಿಪಡಿಸುವಂತೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ. ರವಿ 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ಪಾದಚಾರಿ ರಸ್ತೆಗಳಲ್ಲೂ ಗುಂಡಿಗಳು ಬಿದ್ದಿರುವುದರಿದ ಮಳೆ ಮಳೆ ಬಂದರೆ ಗುಂಡಿಗಳಲ್ಲಿ ನೀರು ನಿಂತು ವಾಹನಗಳು ಬಂದಾಗ ಗುಂಡಿಯಲ್ಲಿನ ನೀರು ಅಕ್ಕ ಪಕ್ಕದ ಅಂಗಡಿಗಳಿಗೆ ಸಿಡಿಯುತ್ತವೆ. ರಸ್ತೆಯಲ್ಲಿನ ತಗ್ಗುಗಳಿಂದ ತಪ್ಪಿಸಿಕೊಳ್ಳಲು ರಸ್ತೆಯನ್ನೇ ಬಿಟ್ಟು ಓಡಾಡಬೇಕಾದ ಸ್ಥಿತಿ ಇದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ರಸ್ತೆಯಲ್ಲಿ ತಗ್ಗುಗಳು, ಗುಂಡಿಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇಲ್ಲಿನ ವಿವೇಕಾನಂದನಗರದ ಬಿಜಿಎಸ್ ವೃತ್ತದಿಂದ ಆಂಜನೇಯಸ್ವಾಮಿ ದೇವಾಲಯದವರೆಗಿನ ರಸ್ತೆ ಹದಗೆಟ್ಟು ಮೂರು ತಿಂಗಳಾಗಿದೆ. ಈ ರಸ್ತೆಯಲ್ಲಿ ಎಂ.ಎಚ್. ಶಿಕ್ಷಣ ಸಂಸ್ಥೆ ಇರುವುದರಿಂದ ನೂರಾರು ಮಕ್ಕಳು ಓಡಾಡುತ್ತಾರೆ. ಪೋಷಕರು ಮಕ್ಕಳನ್ನು ಶಾಲೆಗೆ ಬಿಡಲು ಮತ್ತು ಕರೆದುಕೊಂಡು ಹೋಗಲು ದ್ವಿಚಕ್ರವಾಹನಗಳನ್ನು ಬಳಸುತ್ತಾರೆ. ರಸ್ತೆ ಹದಗೆಟ್ಟಿರುವುದರಿಂದ ಬಿಜಿಎಸ್ ಆಸ್ಪತ್ರೆಯ ವೃತ್ತದ ಬಳಿ ವಾಹನ ನಿಲ್ಲಿಸಿ ಮಕ್ಕಳನ್ನು ಕಾಲ್ನಡಿಗೆಯಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದರು.

‘ಇತ್ತೀಚೆಗೆ ಸುರಿದ ಮಳೆಯಿಂದ ಅಲ್ಲಲ್ಲಿ ಗುಂಡಿಗಳಾಗಿದೆ. ಅಧಿಕಾರಿಗಳು ಅವುಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಿಲ್ಲ. ಗುಣಮಟ್ಟದ ಕಾಮಗಾರಿ ಮಾಡಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ’ ಎಂದು ವಿವೇಕಾನಂದನಗರದ ನಿವಾಸಿ ನಾಗರಾಜು ತಿಳಿಸಿದರು.

‘ಮಳೆಯಾದರಂತೂ ಸಮಸ್ಯೆ ಹೆಚ್ಚಾಗುತ್ತದೆ. ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗುತ್ತದೆ. ಕೆಂಪೇಗೌಡ ವೃತ್ತದಿಂದ ರಾಯರದೊಡ್ಡಿ ವೃತ್ತದ ರಸ್ತೆಗೆ ಹಲವು ಬಾರಿ ಡಾಂಬರು ಹಾಕುತ್ತಲೇ ಇರುತ್ತಾರೆ. ಆದರೆ ತಿಂಗಳಿಗೆ ಡಾಂಬರು ಕಿತ್ತು ಹೋಗುತ್ತಿದೆ. ಈ ರಸ್ತೆಯಲ್ಲಿ ನಾಲ್ಕು ಶಾಲೆಗಳ ವಿದ್ಯಾರ್ಥಿಗಳು ಪ್ರತಿನಿತ್ಯ ಓಡಾಡುತ್ತಾರೆ. ಆದ್ದರಿಂದ ಈ ರಸ್ತೆಯಲ್ಲಿ ಇರುವ ಗುಂಡಿಗಳನ್ನು ಮುಚ್ಚಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.