ರಾಮನಗರ: ‘ಗೃಹಲಕ್ಷ್ಮಿ ಯೋಜನೆಯಡಿ, ಫಲಾನುಭವಿಯ ನೋಂದಣಿ ಪ್ರಕ್ರಿಯೆಯನ್ನು ಜುಲೈ 19ರಿಂದ ಆರಂಭಿಸಲಾಗಿದೆ. ಪಡಿತರ ಚೀಟಿಯಲ್ಲಿ ನಮೂದಾಗಿರುವ ಕುಟುಂಬದ ಯಜಮಾನಿ ಎಂದು ಗುರುತಿಸಿರುವ ಮಹಿಳೆ ಯೋಜನೆಯ ಫಲಾನುಭವಿಯಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು, ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಮಾಜಿ ದೇವದಾಸಿಯರು ಸಹ ಯೋಜನೆಯ ಫಲಾನುಭವಿಯಾಗುತ್ತಾರೆ. ಆದಾಯ ತೆರಿಗೆ ಪಾವತಿಸುವವರು ಯೋಜನೆಗೆ ಅರ್ಹರಲ್ಲ.
ಫಲಾನುಭವಿ ಎರಡು ರೀತಿ ನೋಂದಣಿ ಮಾಡಿಸಬಹುದು. ಮೊದಲನೆಯದಾಗಿ ಈಗಾಗಲೇ ಪಡಿತರ ಚೀಟಿಯಲ್ಲಿ ಗುರುತಿಸಲಾಗಿರುವ ಯಜಮಾನಿ ಮಹಿಳೆಗೆ ದಿನಾಂಕ, ಸಮಯ ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರಗಳನ್ನು ಎಸ್‌ಎಂಎಸ್ ಮೂಲಕ ತಿಳಿಸಲಾಗುವುದು.
ಗ್ರಾಮಾಂತರ ಪ್ರದೇಶದಲ್ಲಿ ಅವರು ವಾಸಿಸುವ ಗ್ರಾಮದ ಸಮೀಪವಿರುವ ಗ್ರಾಮ ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕು. ನಗರ ಪ್ರದೇಶದಲ್ಲಿ ಕರ್ನಾಟಕ ಒನ್, ಬೆಂಗಳೂರು-ಒನ್, ಬಿಬಿಎಂಪಿ ವಾರ್ಡ್ ಕಚೇರಿ ಮತ್ತು ಸ್ಥಳೀಯ ನಗರಾಡಳಿತ ಸಂಸ್ಥೆಯ ಕಚೇರಿಗಳಲ್ಲಿ ಮಾಡಿಸಬಹುದು.
ಅಲ್ಲದೆ, ಸರ್ಕಾರದ ಪ್ರಜಾಪ್ರತಿನಿಧಿ ತಮ್ಮ ಮನೆಗೆ ಭೇಟಿ ನೀಡಿದಾಗ ಅವರಿಂದಲೂ ನೋಂದಣಿ ಮಾಡಿಸಬಹುದು. ಫಲಾನುಭವಿ ನೋಂದಣಿಗೆ ನಿಗದಿ ಮಾಡಿರುವ ದಿನಾಂಕ, ಸಮಯ ಹಾಗೂ ಸ್ಥಳವನ್ನು 1902ಗೆ ಕಾಲ್ ಮಾಡಿ ಅಥವಾ 8147500500 ನಂಬರ್‌ಗೆ ಎಸ್‌ಎಂಎಸ್ ಮೂಲಕ ಸಂದೇಶ ಕಳುಹಿಸಿ ಮಾಹಿತಿ ಪಡೆಯಬಹುದಾಗಿದೆ.
ಒಂದು ವೇಳೆ ನಿಗದಿಪಡಿಸಿದ ದಿನಾಂಕದಂದು ನೋಂದಣಿಗೆ ಹೋಗಲು ಸಾಧ್ಯವಾಗದಿದ್ದಲ್ಲಿ, ಅದೇ ಸೇವಾ ಕೇಂದ್ರಗಳಿಗೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5ರಿಂದ 7 ಗಂಟೆಯೊಳಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ. ಯೋಜನೆಯಡಿ ನೋಂದಣಿಗೆ ಅಂತಿಮ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿಲ್ಲ.
ನೋಂದಣಿಗೆ ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಪತಿಯ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ಪಾಸ್‌ಬುಕ್ (ಆಧಾರ್ ನಂಬರ್ ಜೋಡಣೆಯಾಗಿರಬೇಕು) ಮಾಹಿತಿ ಅಗತ್ಯವಿರುತ್ತದೆ. ನೋಂದಣಿ ಬಳಿಕ ಮಂಜೂರಾತಿ ಪತ್ರವನ್ನು ಕೂಡ ನೀಡಲಾಗುವುದು. ಪ್ರಜಾಪ್ರತಿನಿಧಿಯೊಂದಿಗೆ ನೋಂದಣಿ ಮಾಡಿಕೊಂಡಲ್ಲಿ ಮಂಜೂರಾತಿ ಪತ್ರವನ್ನು ತದನಂತರ ಫಲಾನುಭವಿ ಮನೆಗೆ ತಲುಪಿಸಲಾಗುತ್ತದೆ.
ಈಗಾಗಲೇ ಆಧಾರ್ ಜೋಡಣೆಯಾಗಿರುವ ಫಲಾನುಭವಿ ಬ್ಯಾಂಕ್ ಖಾತೆಗೆ ತಿಂಗಳಿಗೆ ₹2 ಸಾವಿರವನ್ನು ಡಿಬಿಟಿ ಮೂಲಕ ಜಮಾ ಮಾಡಲಾಗುವುದು. ಫಲಾನುಭವಿಗಳು ಇಚ್ಛಿಸಿದ್ದಲ್ಲಿ ಪರ್ಯಾಯ ಬ್ಯಾಂಕ್ ಖಾತೆ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.