ADVERTISEMENT

ವಚನ ಸಂರಕ್ಷಣೆ: ಹಳಕಟ್ಟಿ ಕೊಡುಗೆ ಅಪಾರ; ಡಾ. ಟಿ. ದೀಪಕ್ ಕುಮಾರ್

ಡಾ. ಫ.ಗು. ಹಳಕಟ್ಟಿ ಜನ್ಮದಿನ: ವಚನ ಸಾಹಿತ್ಯ ಸಂರಕ್ಷಣಾ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 5:40 IST
Last Updated 3 ಜುಲೈ 2025, 5:40 IST
ರಾಮನಗರದ ಕಂದಾಯ ಭವನದಲ್ಲಿ ಬುಧವಾರ ಡಾ. ಫ.ಗು ಹಳಕಟ್ಟಿ ಅವರ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಜರುಗಿತು. ಸಹ ಪ್ರಾಧ್ಯಾಪಕ ಡಾ. ಟಿ. ದೀಪಕ್ ಕುಮಾರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಕುಮಾರ್ ಹಾಗೂ ಇತರರು ಇದ್ದಾರೆ
ರಾಮನಗರದ ಕಂದಾಯ ಭವನದಲ್ಲಿ ಬುಧವಾರ ಡಾ. ಫ.ಗು ಹಳಕಟ್ಟಿ ಅವರ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಜರುಗಿತು. ಸಹ ಪ್ರಾಧ್ಯಾಪಕ ಡಾ. ಟಿ. ದೀಪಕ್ ಕುಮಾರ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಕುಮಾರ್ ಹಾಗೂ ಇತರರು ಇದ್ದಾರೆ   

ರಾಮನಗರ: ‘ವಚನ ಸಾಹಿತ್ಯವನ್ನು ಸಂರಕ್ಷಿಸಿ ಜನಮನಕ್ಕೆ ತಲುಪಿಸುವಲ್ಲಿ ಡಾ. ಫ.ಗು. ಹಳಕಟ್ಟಿ ಅವರ ಕೊಡುಗೆ ಅಪಾರವಾದುದು. ಇಂದು ವಚನ ಸಾಹಿತ್ಯ ದೊಡ್ಡಮಟ್ಟದಲ್ಲಿ ಪ್ರಚಾರವಾಗಿರುವುದಕ್ಕೆ ಹಳಕಟ್ಟಿ ಅವರೇ ಪ್ರಮುಖ ಕಾರಣ’ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಟಿ. ದೀಪಕ್ ಕುಮಾರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಂದಾಯ ಭವನದ ಮೂರನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ: 409ರಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ. ಫ.ಗು ಹಳಕಟ್ಟಿ ಅವರ ಜನ್ಮದಿನ-ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಧಾರವಾಡದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮುಗಿಸಿದ ಹಳಕಟ್ಟಿ ಅವರು, ನಂತರ ಬಿಜಾಪುರದಲ್ಲಿ ವಕೀಲಿಕೆ ವೃತ್ತಿ ಪ್ರಾರಂಭಿಸಿದರು. ವಚನ ಸಾಹಿತ್ಯದ ಮೇಲಿನ ಅಪಾರ ಆಸಕ್ತಿಯಿಂದಾಗಿ ತಾಳೆಗರಿಯಲ್ಲಿದ್ದಂತಹ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಲು ಪ್ರಾರಂಭಿಸಿದರು. ಒಂದು ಯುಗದ ಸಾಕ್ಷ್ಯದಂತಿದ್ದ ವಚನ ಸಾಹಿತ್ಯ ಉಳಿಸುವ ಪಣತೊಟ್ಟರು’ ಎಂದು ತಿಳಿಸಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡದ ಅತ್ಯಮೂಲ್ಯ ವಚನ ಸಾಹಿತ್ಯವನ್ನು ಪ್ರಕಟಿಸುವುದು ಹಳಕಟ್ಟಿ ಅವರಿಗೆ ಸುಲಭದ ಕಾರ್ಯವಾಗಿರಲಿಲ್ಲ. ಹಲವು ಅಡೆತಡೆಗಳನ್ನು ಎದುರಿಸಿದ ಅವರು, ತಾವು ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ಸ್ವಂತ ಮನೆಯನ್ನು ಮಾರಿದರು. ಇದು ವಚನ ಸಾಹಿತ್ಯ ಕುರಿತು ಅವರಿಗಿದ್ದ ಪ್ರೀತಿ, ಮುಂದಿನ ಪೀಳಿಗೆಗೆ ತಲುಪಿಸಬೇಕೆಂಬ ಕಾಳಜಿ ಹಾಗೂ ದೃಢಸಂಕಲ್ಪವನ್ನು ತೋರಿಸುತ್ತದೆ’ ಎಂದರು.

ADVERTISEMENT

‘‌‌ಸಂಶೋಧಕ, ಸಾಹಿತ್ಯ ಪ್ರಚಾರಕ ಹಾಗೂ ಸಂಪಾದಕರಾಗಿದ್ದ ಹಳಕಟ್ಟಿ ಅವರು ತಮ್ಮ ಸಂಶೋಧನೆ ಮೂಲಕ 250ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಅನೇಕ ಹಳ್ಳಿಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸುತ್ತಿ ವಚನಗಳನ್ನು ಸಂಗ್ರಹಿಸಿದರು. ಕನ್ನಡ ಭಾಷೆಯ ಹಿರಿಮೆ ಹೆಚ್ಚಿಸಲು ಅನೇಕ ಸಾಹಿತ್ಯವನ್ನು ಜನರಿಗೆ ತಲುಪಿಸಿದರು. ವಚನಗಳ ಅಧ್ಯಯನ ಮತ್ತು ಪ್ರಚಾರಕ್ಕಾಗಿ ಶಿವಾನುಭವ ಹಾಗೂ ನವ ಕರ್ನಾಟಕ ಎಂಬ ಪತ್ರಿಕೆ ಆರಂಭಿಸಿದ್ದರು’ ಎಂದು ನೆನೆದರು.

‘ಹಳಕಟ್ಟಿ ಅವರು 1920ರ ಸಮಾರಿಗೆ ಗ್ರಂಥಗಳ ಸಂಪಾದನೆ ಜೊತೆಗೆ, ವಚನಗಳ ಸಂಗ್ರಹ ಮಾಡಿದರು. ಸರ್ಕಾರ, ಯುಜಿಸಿ, ಸಾರ್ವಜನಿಕ ಸಂಸ್ಥೆಗಳ ನೆರವಿಲ್ಲದೆ ಶರಣರ ಕಾಲದ ಹಲವು ವಚನಕಾರರನ್ನು ಬೆಳಕಿಗೆ ತರುವಲ್ಲಿ ಹಳಕಟ್ಟಿ ಅವರು ಮಾಡಿದ ಮಹತ್ಕಾರ್ಯ ಸದಾ ಸ್ಮರಿಸುವಂತಹದ್ದು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರು ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.