ADVERTISEMENT

ಅಕ್ರಮ ಮರಳುಗಾರಿಕೆ ತಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 15:00 IST
Last Updated 2 ಏಪ್ರಿಲ್ 2019, 15:00 IST
ಮಾಗಡಿ ತಾಲ್ಲೂಕಿನ ಕಣ್ಣೂರು ಕೆರೆಯಲ್ಲಿ ಅಕ್ರಮವಾಗಿ ಜೆಸಿಬಿ ಬಳಸಿ ಮರಳು, ಮಣ್ಣು ತೆಗೆಯುತ್ರಿರುವುದು
ಮಾಗಡಿ ತಾಲ್ಲೂಕಿನ ಕಣ್ಣೂರು ಕೆರೆಯಲ್ಲಿ ಅಕ್ರಮವಾಗಿ ಜೆಸಿಬಿ ಬಳಸಿ ಮರಳು, ಮಣ್ಣು ತೆಗೆಯುತ್ರಿರುವುದು   

ಕುದೂರು(ಮಾಗಡಿ): ಹೋಬಳಿಯ ಕಣ್ಣೂರು ಕೆರೆಯಲ್ಲಿ ಜೆಸಿಬಿ ಮತ್ತು ಹತ್ತಾರು ಟ್ರಾಕ್ಟರ್‌ ಬಳಸಿ ಮರಳು ಮತ್ತು ಮಣ್ಣನ್ನು ಅಕ್ರಮವಾಗಿ ತೆಗೆದು ಸಾಗಿಸಲಾಗುತ್ತಿದೆ. ಕೆರೆಯಲ್ಲಿದ್ದ ಮರಗಳನ್ನು ಬುಡಮೇಲು ಮಾಡಿ ಕೆಡವಿ ಕಡಿದು ಸಾಗಿಸಲಾಗುತ್ತಿದೆ. ಕೆರೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಬೆಳೆಸಿದ್ದ ಬೆಲೆಬಾಳುವ ಮರಗಳನ್ನು ರಾತ್ರೋರಾತ್ರಿ ಕಡಿದು ಪರಿಸರ ನಾಶಮಾಡಲಾಗುತ್ತಿದೆ ಎಂದು ಪರಿಸರವಾದಿ ರವಿಶಂಕರಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪುರಾಣ ಪ್ರಸಿದ್ದ ಕೆರೆಯಲ್ಲಿದ್ದ ಚಾರಿತ್ರಿಕ ದೇಗುಲವನ್ನು ಕೆಡವಿ ನಾಶ ಮಾಡಲಾಯಿತು. ಈಗ ಜಲಮೂಲದಿಂದ ಕೂಡಿದ್ದ ಕೆರೆಯನ್ನು ನಾಶ ಮಾಡಲಾಗಿದೆ ಎಂದರು.

ಕೆರೆಯಲ್ಲಿ ನೀರು ತುಂಬಿದರೆ ವರ್ಷವಿಡೀ ಕೆರೆಯ ಕೆಳಗಿನ ತೋಟಗಳಿಗೆ ನೀರುಣಿಸಲಾಗುತ್ತಿದೆ. ಅಡಿಕೆ, ತೆಂಗಿನ ಮರಗಳ ಜತೆಗೆ ಸಮೃದ್ದವಾಗಿ ಭತ್ತ, ಇತರೆ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಕೆರೆಯಲ್ಲಿನ ಮರಳು, ಮಣ್ಣನ್ನು ಖಾಸಗಿ ಇಟ್ಟಿಗೆ ತಯಾರಕರು ಅಕ್ರಮವಾಗಿ ತೆಗೆದು ಸಾಗಿಸಿ, ಕೆರೆಯ ವಿನಾಶಕ್ಕೆ ಕಾರಣವಾಗಿದ್ದಾರೆ. ಆದರೂ ಅರಣ್ಯ ಇಲಾಖೆ ಅಥವಾ ಗ್ರಾಮ ಪಂಚಾಯಿತಿ, ನೀರಾವರಿ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಮರಳು ಮತ್ತು ಮಣ್ಣು ಸಾಗಿಸುವವರು ಅಧಿಕಾರಿಗಳನ್ನು ಮೌನಕ್ಕೆ ಶರಣಾಗುವಂತೆ ಮಾಡಿಕೊಂಡಿದ್ದಾರೆ. ತಾಲ್ಲೂಕು ಆಡಳಿತ ಕೆರೆ ಮತ್ತು ಮರಗಳನ್ನು ಉಳಿಸಲು ಅಕ್ರಮ ಮರಳು, ಮಣ್ಣು ಸಾಗಣೆ ತಡೆಗಟ್ಟುವಂತೆ ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.