ಮಾಗಡಿಯ ಚಕ್ರಬಾವಿ ಜಂಗಮ ಮಠದಲ್ಲಿ ನಡೆದ ಗ್ರಾಮೀಣ ಕೃಷಿ ಕಾರ್ಯಾನುಭಾವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಗಣ್ಯರು
ಮಾಗಡಿ: ತಾಲ್ಲೂಕಿನ ಚಕ್ರಬಾವಿ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆಯ ಅಂತಿಮ ವರ್ಷದ ವಿಎಸ್‌ಸಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಗ್ರಾಮದ ಜಂಗಮ ಮಠದ ಆವರಣದಲ್ಲಿ ವಿದ್ಯಾರ್ಥಿಗಳು ರಾಶಿ ಪೂಜೆ ಹಾಗೂ ರಸು ಹಾಗೂ ಭೂಮಿ ಪೂಜೆ ಸಲ್ಲಿಸಿದರು.
ವಿದ್ಯಾರ್ಥಿ ವಿವೇಚನ್ ಮಾತನಾಡಿ, ರೈತರಿಂದ ಮಾಹಿತಿ ಸಂಗ್ರಹಿಸಿ ಅವರ ಸಮಸ್ಯೆ ಗುರುತಿಸಿ ಅದಕ್ಕೆ ಅನುಗುಣವಾಗಿ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ಪ್ರತಿದಿನ ಇಬ್ಬರು ವಿದ್ಯಾರ್ಥಿಗಳು ಮಾಡಬಾಳ್ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ತಾಂತ್ರಿಕ ಮಾಹಿತಿ ನೀಡಲಾಗುವುದು. ಮುಂದಿನ ದಿನಗಳಲ್ಲಿ ರೈತರ ಜಮೀನಿನ ಮಣ್ಣು ಪರೀಕ್ಷೆ, ಬೀಜೋಪಚಾರ, ಎರೆಹುಳು ಗೊಬ್ಬರದ ಮಹತ್ವ, ಬೆಳೆಗಳಿಗೆ ಬೇಕಾಗಿರುವ ಪೋಷಕಾಂಶಗಳ ಮಹತ್ವ, ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯದ ಮಾಹಿತಿ, ಸಮರ್ಪಕ ನೀರು ನಿರ್ವಹಣೆ, ಅಣಬೆ ಬೇಸಾಯ, ಜೇನು ಕೃಷಿ, ಸಮಗ್ರ ಕೀಟ ನಿರ್ವಹಣೆ ಹಾಗೂ ಸಮಗ್ರ ರೋಗ ನಿರ್ವಹಣೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಕಟಾವಿನ ನಂತರ ದವಸ ಧಾನ್ಯಗಳ ಪೀಡೆ ನಿರ್ವಹಣೆ, ಅಜೋಲಾ ಉತ್ಪಾದನೆ ಮತ್ತು ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದರು.
ಅಕ್ಟೋಬರ್‌ನಲ್ಲಿ ಕೃಷಿ ವಸ್ತುಪ್ರದರ್ಶನ ಮತ್ತು ವಿಜ್ಞಾನಿಗಳು ಮತ್ತು ರೈತರ ವಿಚಾರ ಸಂಕೀರ್ಣ ಆಯೋಜಿಸಲಾಗುವುದು. ಮಂದಿನ ದಿನಗಳಲ್ಲಿ ರೈತರಿಗೆ ಮಾಹಿತಿ ಕೇಂದ್ರವನ್ನು ಸಹ ಸ್ಥಾಪಿಸಲಾಗುವುದು ಎಂದರು.
ಎಪಿಎಂಸಿ ಮಾಜಿ ಜಿಲ್ಲಾಧ್ಯಕ್ಷ ಚಕ್ರಬಾವಿ ಮಾರೇಗೌಡ, ಯೋಗನರಸಿಂಹಯ್ಯ, ರವೀಂದ್ರ, ಸಿ.ಕುಮಾರ್, ಬೈರೇಶ್, ಬಸವರಾಜು, ಪಂಚಾಕ್ಷರಿ, ಶಶಿಕಲಾ, ಜಗದೀಶ್, ರವೀಂದ್ರ, ಶೈಲೇಶ್, ಗಿರೀಶ್, ಡಾ.ಮುತ್ತಪ್ಪ ಚಿಗಡೊಳ್ಳಿ, ಸಿಂಚನ, ಶರಣ್, ತೇಜೀವ್, ಯಶಸ್ವಿನಿ, ವರ್ಷ, ಸುಮಿತ್, ಸ್ಫೂರ್ತಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.