ADVERTISEMENT

‘ಹಳ್ಳಿ ಅಭಿವೃದ್ಧಿಯಿಂದ ಮಾತ್ರ ದಿಲ್ಲಿಗೆ ಬೆಲೆ’

ಕುದೂರಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ

​ಪ್ರಜಾವಾಣಿ ವಾರ್ತೆ
Published 19 ಮೇ 2019, 14:07 IST
Last Updated 19 ಮೇ 2019, 14:07 IST
ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ಡಾ.ಲಕ್ಷ್ಮೀಶ ಗೌಡ ಅವರನ್ನು ಕೆ.ಬಿ.ವಿಜಯಗುಪ್ತ ಸನ್ಮಾನಿಸಿದರು
ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ಡಾ.ಲಕ್ಷ್ಮೀಶ ಗೌಡ ಅವರನ್ನು ಕೆ.ಬಿ.ವಿಜಯಗುಪ್ತ ಸನ್ಮಾನಿಸಿದರು   

ಕುದೂರು(ಮಾಗಡಿ): ಗ್ರಾಮೀಣ ಭಾಗದಲ್ಲಿ ಅವಕಾಶ ವಂಚಿತ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುವುದು ಎಂದು ನೀಲಮ್ಮ ಕುದೂರು ಕೆ.ಎ.ಸತ್ಯನಾರಾಯಣ ಶೆಟ್ಟಿ ಸೇವಾ ಟ್ರಸ್ಟಿನ ಅಧ್ಯಕ್ಷ ಕೆ.ಬಿ.ವಿಜಯಗುಪ್ತ ತಿಳಿಸಿದರು.

ಸೇವಾ ಟ್ರಸ್ಟಿನ ವತಿಯಿಂದ ನಡೆದ ‘ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ಖಾಜಿಪಾಳ್ಯದ ಬಂಗಾರ ಪದಕ ವಿಜೇತ ತಜ್ಞ ವೈದ್ಯ ಡಾ. ಲಕ್ಷ್ಮೀಶ ಗೌಡ.ಕೆ.ಜಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

‘ನೀಲಮ್ಮ ಕೆ.ಎ.ಸತ್ಯನಾರಾಯಣ ಶೆಟ್ಟರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಟ್ಟಡ ಕಟ್ಟಿಸಿ, ಉಚಿತವಾಗಿ ನೀಡಿದರು. ಹಳ್ಳಿಗಾಡಿನ ಮಕ್ಕಳು ವಿದ್ಯಾವಂತರಾಗಬೇಕು ಎಂದು ಪ್ರತಿವರ್ಷವೂ ಪ್ರತಿಭಾ ಪುರಸ್ಕಾರ ನೀಡಿ ರೈತರ ಮಕ್ಕಳ ಪ್ರಗತಿಗೆ ಬೆಂಬಲ ನೀಡುತ್ತಿದ್ದಾರೆ. ಸಮಾಜದ ಋಣ ತೀರಿಸಲು ನಾವೆಲ್ಲರೂ ಬಡವರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ, ಸಂವಿಧಾನದ ಆಶಯದಂತೆ ಬಾಳು, ಬಾಳಗೊಡು ಎಂಬುದನ್ನು ಜೀವನದಲ್ಲಿ ಅಳವಡಿಸಿಕೊಂಡು ಸರ್ವರೂ ಸಹೋದರರಂತೆ ನೆಮ್ಮದಿಯಿಂದ ಬದುಕಬೇಕು’ ಎಂದರು.

ADVERTISEMENT

ಟ್ರಸ್ಟಿನ ಕಾರ್ಯದರ್ಶಿ ಎ.ದೀಪಾ ಅರವಿಂದ ಮಾತನಾಡಿ, ಹಳ್ಳಿಗಾಡಿನ ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಡಾ.ಲಕ್ಷ್ಮೀಶ ಗೌಡ.ಕೆ.ಜಿ. ಸನ್ಮಾನಿತರಾಗಿ ಮಾತನಾಡಿ, ‘ನಾವೆಲ್ಲರೂ ಕೃಷಿಮೂಲದಿಂದ ಬಂದವರು. ನಾವೆಷ್ಟೇ ದೊಡ್ಡವರಾದರೂ ನಮ್ಮ ಮೂಲ ನೆಲೆಯನ್ನು ಮರೆಯಬಾರದು. ಹಳ್ಳಿಗಳ ಅಭಿವೃದ್ಧಿಯಾದಾಗ ಮಾತ್ರ ದಿಲ್ಲಿಗೆ ಬೆಲೆ ಬರುತ್ತದೆ. ಗ್ರಾಮೀಣ ಮಕ್ಕಳು ವಿದ್ಯೆಯನ್ನು ತಪಸ್ಸು ಎಂದು ತಿಳಿದುಕೊಂಡು ಜ್ಞಾನಸಂಪನ್ನರಾಗಬೇಕು’ ಎಂದರು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಉಮಾಪತಿ, ಗುರುಕುಲವಿದ್ಯಾಮಂದಿರದ ಮುಖ್ಯಶಿಕ್ಷಕ ಕೇಶವಮೂರ್ತಿ. ಟ್ರಸ್ಟಿನ ಖಜಾಂಚಿ ಸುಮಾವಿಜಯಗುಪ್ತ, ಪುಟ್ಟರಾಜು, ಆರ್ಯವೈಶ್ಯ ಮಂಡಳಿಯ ಪದಾಧಿಕಾರಿಗಳು ಇದ್ದರು. ಸತ್ಯನಾರಾಯಣ ಸ್ವಾಮಿ ಪೂಜೆ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.