ADVERTISEMENT

ಕನಕಪುರ: ಜಾರಕಿಹೊಳಿ ಬಂಧನಕ್ಕೆ ವಿಧಾನ ಪರಿಷತ್ ಸದಸ್ಯ ಎಸ್. ರವಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 2:49 IST
Last Updated 29 ಮಾರ್ಚ್ 2021, 2:49 IST
ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್. ರವಿ ಮಾತನಾಡಿದರು
ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್. ರವಿ ಮಾತನಾಡಿದರು   

ಕನಕಪುರ: ‘ರಮೇಶ್‌ ಜಾರಕಿಹೊಳಿ ಮಾಡಬಾರದ ತಪ್ಪು ಮಾಡಿ ಈಗ ಸಮರ್ಥನೆ ಮಾಡಿಕೊಳ್ಳುತ್ತಿದ್ದು, ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿಕೊಂಡು ಆತನನ್ನು ಕೂಡಲೇ ಬಂಧಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ಆಗ್ರಹಿಸಿದರು.

‘ಮಾಡಬಾರದ ತಪ್ಪು ಮಾಡಿದ ಜಾರಕಿಹೊಳಿ, ಮೂರು ತಿಂಗಳ ಹಿಂದೆಯೇ ಸಿ.ಡಿ. ಬಗ್ಗೆ ಗೊತ್ತಿತ್ತು. ಇದರ ಹೆಸರಲ್ಲಿ ಹಣ ಕೇಳುತ್ತಿದ್ದರು ಎನ್ನುತ್ತಾರೆ. ಇನ್ನೊಂದೆಡೆ ಸಿ.ಡಿ.ಯೇ ನಕಲಿ ಎನ್ನುತ್ತಾರೆ. ನಕಲಿ ಎಂದ ಮೇಲೆ ಏಕೆ ಹಣ ಕೊಡಬೇಕಿತ್ತು? ಇವರ ವಿರುದ್ಧ ಐ.ಟಿ. ಮತ್ತು ಇ.ಡಿ. ಏನು ಮಾಡುತ್ತಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಮಂತ್ರಿಯಾಗಿ ಇಂತಹ ಕೃತ್ಯ ಎಸಗಿದ್ದಾರೆ ಎಂದರೆ ಸರ್ಕಾರವೇ ಇದರಲ್ಲಿ ಭಾಗಿಯಾಗಿದೆ ಎಂಬ ಅರ್ಥ ಬರುತ್ತದೆ. ಆದರೆ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ಹೆಸರಲ್ಲಿ ಇಡೀ ಪ್ರಕರಣದ ದಿಕ್ಕು ತಪ್ಪಿಸುತ್ತಿದೆ. ಎಸ್‌ಐಟಿಯವರು ತನಿಕೆ ನಡೆಸುವುದನ್ನು ಬಿಟ್ಟು ಸಂತ್ರಸ್ತೆ ಕುಟುಂಬದವರಿಗೆ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಯುವತಿ ಮಾತನಾಡಿರುವ ವಿಡಿಯೊ ನೋಡಿದ್ದೇನೆ. ಆ ಯುವತಿ ಇವರು ನನ್ನನ್ನು ಕೊಲ್ಲುತ್ತಾರೆ ಎಂದು ಅಂಗಲಾಚುತ್ತಾಳೆ. ಅವರ ತಂದೆ ತಾಯಿ ಒತ್ತಡಕ್ಕೆ ಒಳಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಆಕೆ ಸರ್ಕಾರವನ್ನು ನಂಬಲಾರದ ಸ್ಥಿತಿಯಲ್ಲಿ ಇದ್ದಾಳೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿ ಸಂತ್ರಸ್ಥೆಯ ಸಹಾಯಕ್ಕೆ ಧಾವಿಸಿದರೆ ತಪ್ಪೇನು?’ ಎಂದು ಅವರು ಪ್ರಶ್ನಿಸಿದರು.

‘ಕನಕಪುರಕ್ಕೆ ಬಂದು ಸ್ಪರ್ಧೆ ಮಾಡಿ ಶಿವಕುಮಾರ್‌ಗೆ ಪಾಠ ಕಲಿಸುವುದಾಗಿ ಜಾರಕಿಹೊಳಿ ಹೇಳಿದ್ದಾರೆ. ಹಾಗೇನಾದರೂಅವರು ಇಲ್ಲಿಗೆ ಬಂದರೆ ಇಲ್ಲಿನ ಸ್ವಾಭಿಮಾನಿ ಮಹಿಳೆಯರೇ ಪೊರಕೆ, ಚಪ್ಪಲಿಯಿಂದ ಸೇವೆ ಮಾಡುತ್ತಾರೆ’ ಎಂದರು.

ನಗರಸಭೆ ಅಧ್ಯಕ್ಷ ಮೊಹಮದ್ ಮೊಕ್ಬುಲ್, ಟಿಎಪಿಸಿಎಂಎಸ್ ಅಧ್ಯಕ್ಷ ತಮ್ಮಣ್ಣಗೌಡ , ನಗರಸಭೆ ಸದಸ್ಯರಾದ ಮೋಹನ್, ವಿಜಯ್‌ಕುಮಾರ್, ಕಿರಣ್, ಮುಖಂಡರಾದ ರಾಮಚಂದ್ರಪ್ಪ, ದಿಲೀಪ, ಮಾದೇಶ್, ರಮೇಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.