ADVERTISEMENT

ಪರಿಸರ ಪ್ರಜ್ಞೆ ಜಾಗೃತಿಗೊಳಿಸಿದ ತಿಮ್ಮಕ್ಕ: ಸಾಹಿತಿ ಜಿ.ಎಚ್. ರಾಮಯ್ಯ

ಸಾಹಿತ್ಯ ಪರಿಷತ್‌ನಿಂದ ಸಾಲುಮರದ ತಿಮ್ಮಕ್ಕಗೆ ನುಡಿ ನಮನದ ಶ್ರದ್ಧಾಂಜಲಿ ಸಭೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 4:42 IST
Last Updated 18 ನವೆಂಬರ್ 2025, 4:42 IST
ರಾಮನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಸಾಲುಮರದ ತಿಮ್ಮಕ್ಕ ನುಡಿನಮನ ಶ್ರದ್ದಾಂಜಲಿ ಸಭೆ ನಡೆಯಿತು. ಸಾಹಿತಿಗಳಾದ ಜಿ.ಎಚ್. ರಾಮಯ್ಯ, ಡಾ. ಎಂ. ಬೈರೇಗೌಡ, ಉಪನ್ಯಾಸಕ ಡಾ. ನರಸಿಂಹಸ್ವಾಮಿ, ಪರಿಷತ್‌ನ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ, ಸಂಚಾಲಕ ಬಿ.ಟಿ. ರಾಜೇಂದ್ರ ಹಾಗೂ ಇತರರು ಇದ್ದಾರೆ
ರಾಮನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಸಾಲುಮರದ ತಿಮ್ಮಕ್ಕ ನುಡಿನಮನ ಶ್ರದ್ದಾಂಜಲಿ ಸಭೆ ನಡೆಯಿತು. ಸಾಹಿತಿಗಳಾದ ಜಿ.ಎಚ್. ರಾಮಯ್ಯ, ಡಾ. ಎಂ. ಬೈರೇಗೌಡ, ಉಪನ್ಯಾಸಕ ಡಾ. ನರಸಿಂಹಸ್ವಾಮಿ, ಪರಿಷತ್‌ನ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್, ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ, ಸಂಚಾಲಕ ಬಿ.ಟಿ. ರಾಜೇಂದ್ರ ಹಾಗೂ ಇತರರು ಇದ್ದಾರೆ   

ರಾಮನಗರ: ‘ಸಾಲುಮರದ ತಿಮ್ಮಕ್ಕ ಅವರದ್ದು ಪರಿಸರ ಪ್ರಜ್ಞೆಯ ಮಹಾನ್ ವ್ಯಕ್ತಿತ್ವವಾಗಿದೆ. ಮಕ್ಕಳಿಲ್ಲದಿದ್ದರೂ ರಸ್ತೆ ಬದಿಯ ಮರಗಳನೇ ಮಕ್ಕಳಂತೆ ಬೆಳೆಸಿ ಪರಿಸರ ಉಳಿಸುವ ಕೆಲಸ ಮಾಡಿ, ಸಮಾಜದಲ್ಲಿ ಪರಿಸರ ಪ್ರಜ್ಞೆಯನ್ನು ಜಾಗೃತಿಗೊಳಿಸಿದ್ದಾರೆ. ನಿಸ್ವಾರ್ಥ ಮನಸ್ಸಿನಿಂದ ಅವರು ಮಾಡಿದ ಕಾಯಕವು, ಜಗತ್ತಿನಲ್ಲಿ ಎಷ್ಟೋ ಮನಸ್ಸುಗಳಿಗೆ ಪರಿಸರ ಕಾಳಜಿಯ ದೀಕ್ಷೆ ಕೊಟ್ಟಿದೆ’ ಎಂದು ಸಾಹಿತಿ ಜಿ.ಎಚ್. ರಾಮಯ್ಯ ಬಣ್ಣಿಸಿದರು.

ನಗರದ ಹಳೆ ಬಸ್ ನಿಲ್ದಾಣ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನರಾದ ಸಾಲುಮರದ ತಿಮ್ಮಕ್ಕ ನುಡಿನಮನ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ‘ಸಾವಿರಾರು ಆಲದ ಮರಗಳನ್ನು ನೆಟ್ಟು ಬೆಳೆಸಿದ ತಿಮ್ಮಕ್ಕ ಅವರ ಕಾರ್ಯವು, ಮುಂದಿನ ತಲೆಮಾರಿಗೆ ಪರಿಸರ ಸಂರಕ್ಷಣೆಗೆ ಮಾರ್ಗದರ್ಶಿಯಾಗಿದೆ’ ಎಂದರು.

ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ನರಸಿಂಹಸ್ವಾಮಿ ಮಾತನಾಡಿ, ‘ಇಂದಿನ ನಮ್ಮೆಲ್ಲರ ಸ್ವಾರ್ಥ ಬದುಕಿನ ನಡುವೆ ಓದು, ಬರಹ ಗೊತ್ತಿಲ್ಲದಿದ್ದರೂ ಸಮಾಜಕ್ಕೆ ಉಪಯೋಗವಾಗುವ ಕೆಲಸವನ್ನು ತಿಮ್ಮಕ್ಕ ಅವರು ಮಾಡಿದರು. ಇಂದಿನ ಕುಲಷಿತ ಪರಿಸರ ಉಳಿಸುವ ನಿಟ್ಟಿನಲ್ಲಿ ಅವರು ಮಾಡಿದ ಕೆಲಸವು ಶಾಶ್ವತವಾಗಿ ಉಳಿಯುವಂತಹದ್ದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಪರಿಸರ ಸಂರಕ್ಷಣೆ ಹೊಣೆ ಎಲ್ಲರದ್ದೂ ಆಗಬೇಕು. ಆ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಸಹ ತಿಮ್ಮಕ್ಕ ಅವರ ಹೆಸರಿನಲ್ಲಿ ಗಿಡ ನೆಡುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳಿಗೆ ಅಂತಹ ಮಹಾನ್ ಸಾಧಕಿ ಕುರಿತು ಉಪನ್ಯಾಸ ನೀಡಬೇಕು. ಆ ಮೂಲಕ, ವಿದ್ಯಾರ್ಥಿಗಳಲ್ಲಿ ಈಗಿನಿಂದಲೇ ಪರಿಸರ ಪ್ರಜ್ಞೆಯನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ ಮಾತನಾಡಿ, ‘ವೃಕ್ಷಮಾತೆಯ ಹೆಸರಿನಲ್ಲಿ ಅರಣ್ಯ ಇಲಾಖೆಯು ದೊಡ್ಡ ಮೊತ್ತದ ಹಣವನ್ನು ದತ್ತಿ ನಿಧಿ ಇಟ್ಟು ಪ್ರತಿ ವರ್ಷ ಪರಿಸರ ಪ್ರೇಮಿಗಳನ್ನು ಗುರುತಸಿ ಗೌರವಿಸಿದರೆ ಯುವಜನರಿಗೆ ಸ್ಪೂರ್ತಿಯಾಗುತ್ತದೆ. ನಮ್ಮ ಜಿಲ್ಲೆಯ ಹಿರಿಯರು ಪರಿಸರ ಪ್ರೇಮಿಗಳು, ಪರಿಸರ ಸಂರಕ್ಷಕರು ಅರೇಹಳ್ಳಿ ಗ್ರಾಮದ ಸಾಲುಮರದ ನಿಂಗಣ್ಣನವರನ್ನು ಹೆಚ್ಚು ಗಣನೆಗೆ ತೆಗೆದುಕೊಂಡು ಅವರಿಗೆ ಸಹಕಾರ ನೀಡಿ ಅವರನ್ನು ಪರಿಸರ ರಾಯಭಾರಿಯನ್ನಾಗಿ ಮಾಡಬೇಕು’ ಎಂದು ಒತ್ತಾಯಿಸಿದರು.

ಪರಿಷತ್‌ನ ಸಂಚಾಲಕ ಬಿ.ಟಿ. ರಾಜೇಂದ್ರ, ಪಶು ಇಲಾಖೆಯ ಮಲ್ಲೇಶ್ ಸೇರಿದಂತೆ ಹಲವು ಗಣ್ಯರು ಮಾತನಾಡಿದರು. ಪರಿಷತ್‌ನ ನಗರ ಘಟಕದ ಅಧ್ಯಕ್ಷ ವೆಂಕಟೇಶ್, ಕೈಲಾಂಚ ಅಧ್ಯಕ್ಷ ಗಿರೀಶ್ ವಡ್ಡರಹಳ್ಳಿ, ಸಿದ್ದರಾಮೇಗೌಡ, ಅರುಣ್ ಅನುಮಾನಹಳ್ಳಿ, ಸಿದ್ದೇಗೌಡ, ಸಿದ್ದೋಜಿರಾವ್ ಹಾಗೂ ಇತರರು ಇದ್ದರು.

ಗಾಯಕ ವಿನಯ್ ಕುಮಾರ್ ಮತ್ತು ಗೋಪಾಲ್ ಬೊಮ್ಮಚ್ಚನಹಳ್ಳಿ ಪರಿಸರ ಗೀತೆಗಳನ್ನು ಹಾಡಿದರು. ತಿಮ್ಮಕ್ಕನವರ ಭಾವಚಿತ್ರದ ಜೊತೆ ಆಲದ ಗಿಡ ಇಟ್ಟು ಪೂಜೆ ಸಲ್ಲಿಸಲಾಯಿತು. ಗಣ್ಯರು ಪುಷ್ಪನಮನ ಸಲ್ಲಿಸಿದರು. ಬಳಿಕ ತಿಮ್ಮಕ್ಕ ಅವರ ಹೆಸರಿನಲ್ಲಿ ರಾಜೀವ್ ಗಾಂಧಿಪುರದ ಸರ್ಕಾರಿ ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು. ಸಾಲುಮರದ ತಿಮ್ಮಕ್ಕ ಅವರು ವಿಶ್ವಕ್ಕೆ ಪರಿಸರದ ಸಂದೇಶ ಸಾರಿ ದೇಶಕ್ಕೆ ಗೌರವ ತಂದಿದ್ದಾರೆ. ಅದೇ ರೀತಿ ಗಿಡಗಳನ್ನು ನೆಡುವ ಪರಿಸರ ಪ್ರೇರಮಿಗಳಿಗೂ ಪ್ರೋತ್ಸಾಹ ಕಕೊಡಬೇಕು. ಅದೇ ತಿಮ್ಮಕ್ಕ ಅವರಿಗೆ ನೀಡುವ ನಿಜವಾದ ಗೌರವ – ಡಾ. ಎಂ. ಬೈರೇಗೌಡ ಸಾಹಿತಿ

ಸಾಲುಮರದ ತಿಮ್ಮಕ್ಕ ಅವರು ವಿಶ್ವಕ್ಕೆ ಪರಿಸರದ ಸಂದೇಶ ಸಾರಿ ದೇಶಕ್ಕೆ ಗೌರವ ತಂದಿದ್ದಾರೆ. ಅದೇ ರೀತಿ ಗಿಡಗಳನ್ನು ನೆಡುವ ಪರಿಸರ ಪ್ರೇರಮಿಗಳಿಗೂ ಪ್ರೋತ್ಸಾಹ ಕಕೊಡಬೇಕು. ಅದೇ ತಿಮ್ಮಕ್ಕ ಅವರಿಗೆ ನೀಡುವ ನಿಜವಾದ ಗೌರವ
– ಡಾ. ಎಂ. ಬೈರೇಗೌಡ ಸಾಹಿತಿ

‘ಹೆರಿಗೆ ಆಸ್ಪತ್ರೆಗಾಗಿ ಪರಿಷ್‌ನಿಂದ ಡಿ.ಸಿ.ಗೆ ಪತ್ರ’

‘ಪರಿಸರ ಕಾಳಜಿ ವಿಷಯದಲ್ಲಿ ಜಗತ್ತಿಗೆ ಸ್ಫೂರ್ತಿದಾಯಕರಾಗಿದ್ದ ಶತಾಯಿಷಿ ಸಾಲುಮರದ ತಿಮ್ಮಕ್ಕ ಅವರು ತಮ್ಮೂರಾದ ಹುಲಿಕಲ್‌ನಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣವಾಗಬೇಕು ಎಂಬ ಮಹದಾಸೆ ಹೊಂದಿದ್ದರು. ಅದಕ್ಕಾಗಿ ಅವರು ವಿವಿಧ ಸರ್ಕಾರಗಳ ಮುಖ್ಯಮಂತ್ರಿಗಳನ್ನು ಸಚಿವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಕೊಟ್ಟಿದ್ದರು. ಆದರೆ ಅವರ ಕನಸು ಈಡೇರಲಿಲ್ಲ. ಅವರ ಆಸೆಯಂತೆ ಹುಲಿಕಲ್‌ನಲ್ಲಿ ಹೆರಿಗೆ ಆಸ್ವತ್ರೆ ನಿರ್ಮಾಣ ಮಾಡಬೇಕು. ಅದಕ್ಕಾಗಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು’ ಎಂದು ಪರಿಷತ್‌ನ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.