ADVERTISEMENT

ಬಾಬರಿ ಮಸೀದಿ ಪುನರ್ ನಿರ್ಮಾಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 12:42 IST
Last Updated 6 ಡಿಸೆಂಬರ್ 2018, 12:42 IST
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಗುರುವಾರ ಪ್ರತಿಭಟಿಸಿದರು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಗುರುವಾರ ಪ್ರತಿಭಟಿಸಿದರು   

ರಾಮನಗರ: ಬಾಬರಿ ಮಸೀದಿ ಪುನರ್ ಸ್ಥಾಪಿಸಬೇಕು. ಲಿಬರಾನ್‌ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಗುರುವಾರ ಪ್ರತಿಭಟಿಸಿದರು.

‘1992ರ ಡಿಸೆಂಬರ್ 6ರಂದು ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯಲ್ಲಿರುವ ಸುಮಾರು 500 ವರ್ಷ ಇತಿಹಾಸವುಳ್ಳ ಬಾಬರಿ ಮಸೀದಿಯನ್ನು ದುಷ್ಟರು ಹಾನಿಗೊಳಿಸಿ, ಧ್ವಂಸಗೊಳಿಸಿದರು. ಇದರಿಂದ ದೇಶದ ಸಾಮರಸ್ಯ, ಜಾತ್ಯಾತೀತ ನಿಲುವು ಹಾಗೂ ಸಾಂವಿಧಾನಿಕ ಮೌಲ್ಯಗಳ ಕೊಲೆ ಮಾಡಲು ಯತ್ನಿಸಿದರು. ಇದರಿಂದ ದೇಶದ ಹಲವು ಭಾಗಗಳಲ್ಲಿ ಶಾಂತಿ ಸುವ್ಯವಸ್ಥೆ ಭಂಗವಾಗಿ ಅಲ್ಲಲ್ಲಿ ಕೋಮು ಗಲಭೆ ನಡೆದು, ಅಮಾಯಕರು ತಮ್ಮ ಜೀವನವನ್ನು ಬಲಿ ಕೊಡಬೇಕಾಯಿತು’ ಎಂದು ಪ್ರತಿಭಟನಾಕಾರರು ವಿಷಾದಿಸಿದರು.

‘ಈ ಘಟನೆಯನ್ನು ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನ್ಯಾಯಮೂರ್ತಿ ಎಂ.ಎಸ್. ಲಿಬರಾನ್ ತನಿಖೆ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಅದಾಗಿ 9 ವರ್ಷ ಕಳೆದರೂ ವರದಿ ಅನುಷ್ಠಾನಗೊಂಡಿಲ್ಲ. ಘಟನೆ ನಡೆದು 26 ವರ್ಷಗಳಾಗಿದ್ದರೂ ಆರೋಪಿಗಳು ತಾವು ಎಸಗಿರುವ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಾ, ಒಂದು ನಿರ್ದಿಷ್ಟ ಸಮುದಾಯಕ್ಕೆ ಮತೀಯವಾಗಿ ನೋವುಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದು ಭಾರತೀಯ ಸಂವಿಧಾನದ ಅಪಹಾಸ್ಯವಾಗಿದೆ’ ಎಂದರು.

ADVERTISEMENT

‘ಈ ಕೃತ್ಯಗಳಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆರೋಪಿತರು ರಾಜಕೀಯವಾಗಿ ಯಾವುದೇ ಉನ್ನತ ಸ್ಥಾನದಲ್ಲಿದ್ದರೂ ಅವರನ್ನು ಅಧಿಕಾರದಿಂದ ಉಚ್ಛಾಟನೆ ಮಾಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆಯ ಪದಾಧಿಕಾರಿಗಳಾದ ಅಪ್ಸರ್ ಕೊಡಲಿಪೆಟ್‌, ಸಯ್ಯದ್ ಶಹಬಾಸ್‌, ಶಕೀಲ್ ಪಾಷಾ, ಸಯ್ಯದ್ ಅಸದುಲ್ಲಾ, ಸಯ್ಯದ್ ಮತೀನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.