ADVERTISEMENT

ಚೀಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಪದಚ್ಯುತಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 2:39 IST
Last Updated 8 ಜೂನ್ 2022, 2:39 IST
ಚೀಲೂರು ಗ್ರಾಮ ಪಂಚಾಯಿತಿಯಲ್ಲಿ ಉಪ ವಿಭಾಗಾಧಿಕಾರಿ ಮಂಜುನಾಥ್‌ ಅವಿಶ್ವಾಸ ನಿರ್ಣಯದ ಸಭೆ ನಡೆಸಿದರು. ತಹಶೀಲ್ದಾರ್‌ ವಿಶ್ವಾನಾಥ್‌ ಉಪಸ್ಥಿತರಿದ್ದರು
ಚೀಲೂರು ಗ್ರಾಮ ಪಂಚಾಯಿತಿಯಲ್ಲಿ ಉಪ ವಿಭಾಗಾಧಿಕಾರಿ ಮಂಜುನಾಥ್‌ ಅವಿಶ್ವಾಸ ನಿರ್ಣಯದ ಸಭೆ ನಡೆಸಿದರು. ತಹಶೀಲ್ದಾರ್‌ ವಿಶ್ವಾನಾಥ್‌ ಉಪಸ್ಥಿತರಿದ್ದರು   

ಕನಕಪುರ: ತಾಲ್ಲೂಕಿನ ಚೀಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ರವಿಗೌಡ ವಿರುದ್ಧ ಮಂಗಳವಾರ ಸದಸ್ಯರು ಅವಿ‍ಶ್ವಾಸ ನಿರ್ಣಯ ಮಂಡಿಸಿ ಪದಚ್ಯುತಿ
ಗೊಳಿಸಿದ್ದಾರೆ.

ಪಂಚಾಯಿತಿಯಲ್ಲಿ ಒಟ್ಟು 21 ಸದಸ್ಯರಿದ್ದಾರೆ. ಈ ಪೈಕಿ 10 ಜೆಡಿಎಸ್‌ ಬೆಂಬಲಿತ, 10 ಕಾಂಗ್ರೆಸ್‌ ಬೆಂಬಲಿತ ಹಾಗೂ ಒಬ್ಬರು ಸ್ವತಂತ್ರ ಸದಸ್ಯ ಇದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್‌ ಪಕ್ಷದವರು ಸ್ವತಂತ್ರ ಸದಸ್ಯನ ಬೆಂಬಲ ಪಡೆದು ಪಂಚಾಯಿತಿಯಲ್ಲಿ ಅಧ್ಯಕ್ಷ ಗಾದಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಅಧಿಕಾರ ಹಂಚಿಕೆ ಸೂತ್ರ ಪಾಲನೆಯಾಗಿತ್ತು. ಮೊದಲು ಅಧ್ಯಕ್ಷರಾದವರು ಸ್ವತಂತ್ರ ಅಭ್ಯರ್ಥಿಗೆ 6 ತಿಂಗಳ ನಂತರ ರಾಜೀನಾಮೆ ನೀಡಿ ಅವಕಾಶ ಮಾಡಿಕೊಡುವಂತೆ
ಸೂಚಿಸಲಾಗಿತ್ತು.

ADVERTISEMENT

ಈ ಒಪ್ಪಂದದನ್ವಯ ಕಾಂಗ್ರೆಸ್‌ ಬೆಂಬಲಿತ ಶೋಭಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷವಾದರೂ ರಾಜೀನಾಮೆ ನೀಡಿರಲಿಲ್ಲ.

ಈ ನಡುವೆತಮಗೆ ಅಧ್ಯಕ್ಷ ಸ್ಥಾನ ಸಿಗದಿದ್ದಾಗ ಸ್ವತಂತ್ರ ಸದಸ್ಯ ಲಕ್ಷ್ಮಣ್‌ಗೌಡ ಪಂಚಾಯಿತಿ ಮುಂಭಾಗ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಈ ವೇಳೆ ಜೆಡಿಎಸ್‌ ಬೆಂಬಲಿತ 10 ಸದಸ್ಯರ ಜತೆಗೆ ಕಾಂಗ್ರೆಸ್‌ ಬೆಂಬಲಿತ ಐವರು ಸದಸ್ಯರು ಲಕ್ಷ್ಮಣಗೌಡಗೆ ಬೆಂಬಲ
ಸೂಚಿಸಿದ್ದರು.

ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸದಸ್ಯರು ರಾಮನಗರ ಜಿಲ್ಲಾ ಉಪ ವಿಭಾಗಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಸಭೆಯಲ್ಲಿಪಂಚಾಯಿತಿ ಉಪಾಧ್ಯಕ್ಷೆ ಸುಧಾ ನಾಗೇಶ್‌‌ ಸೇರಿದಂತೆ ಜೆಡಿಎಸ್‌ ಬೆಂಬಲಿತ 10 ಸದಸ್ಯರು, ಒಬ್ಬ ಸ್ವತಂತ್ರ ಸದಸ್ಯ ಹಾಗೂ ನಾಲ್ವರು ಕಾಂಗ್ರೆಸ್ ಬೆಂಬಲಿತರು ಸೇರಿ ಒಟ್ಟು 15 ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಿದರು. ಅಧ್ಯಕ್ಷೆಶೋಭಾ ಗೈರು ಹಾಜರಾಗಿದ್ದರು.

ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌, ಪ್ರಭಾರಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಮಾದನಾಯ್ಕ, ದ್ವಿತೀಯ ದರ್ಜೆ ಸಹಾಯಕ ಕೆ. ಕುಮಾರ್‌, ಕರ ವಸೂಲಿಗಾರ ಸಿ.ಪಿ. ಪ್ರದೀಪ್‌ಕುಮಾರ್‌ ಉಪಸ್ಥಿತರಿದ್ದರು.

ಮುಂಜಾಗ್ರತೆಯಾಗಿ ಹಾರೋಹಳ್ಳಿ ಠಾಣೆಯ ಸರ್ಕಲ್‌ ಇನ್‍ಸ್ಪೆಕ್ಟರ್‌ ಕೆ. ಮಲ್ಲೇಶ್‌ ನೇತೃತ್ವದಡಿ ಬಿಗಿ ಬಂದೋಬಸ್ತ್‌ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.