ADVERTISEMENT

ಗೊರವರ ಅಪರೂಪದ ಹಾಡುಗಾರ ಮಲ್ಲಯ್ಯ

ಎಸ್.ರುದ್ರೇಶ್ವರ
Published 12 ಅಕ್ಟೋಬರ್ 2019, 19:31 IST
Last Updated 12 ಅಕ್ಟೋಬರ್ 2019, 19:31 IST
ಜಾನಪದ ಲೋಕದಲ್ಲಿ ಹಾಡುತ್ತಿರುವ ಗಾಯಕ ಮಲ್ಲಯ್ಯ
ಜಾನಪದ ಲೋಕದಲ್ಲಿ ಹಾಡುತ್ತಿರುವ ಗಾಯಕ ಮಲ್ಲಯ್ಯ   

ರಾಮನಗರ: ಜಾನಪದ ಕಲೆಗಳಲ್ಲಿ ಒಂದಾದ ಗೊರವರ ಕುಣಿತವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿರುವ ಕಲಾವಿದರು ಕೆಲವರು ಇದ್ದಾರೆ. ಅವರಲ್ಲಿ ಚನ್ನಪಟ್ಟಣ ತಾಲ್ಲೂಕಿನ ಕರಿಯಪ್ಪನದೊಡ್ಡಿಯ ಮಲ್ಲಯ್ಯ ಒಬ್ಬರು.

50 ವರ್ಷದ ಮಲ್ಲಯ್ಯ ಅವರು 36 ವರ್ಷಗಳಿಂದ ಗೊರವರ ಕುಣಿತದಲ್ಲಿ ಪರಿಣತಿ ಸಾಧಿಸಿದ್ದಾರೆ. ವಂಶಪಾರಂಪರ್ಯವಾಗಿ ಅವರಿಗೆ ಈ ಕಲೆ ಒಲಿದು ಬಂದಿದೆ. ಕರಿಯಪ್ಪನದೊಡ್ಡಿ ಗ್ರಾಮದಲ್ಲಿ 'ಗೊರವರ ಯುವಕರ ಸಂಘ' ಕಟ್ಟಿಕೊಂಡು ಪ್ರದರ್ಶನ ನೀಡುತ್ತಿದ್ದಾರೆ. 1994ರಲ್ಲಿ ಜಾನಪದ ಲೋಕದಲ್ಲಿ ಕಲಾವಿದರಾಗಿ ಉದ್ಯೋಗಕ್ಕೆ ಸೇರಿಕೊಂಡ ಅವರು, ಈಗಲೂ ಅಲ್ಲಿಗೆ ಬರುವ ಪ್ರತಿ ದಿನ ಬರುವ ನೂರಾರು ಪ್ರವಾಸಿಗರಿಗೆ ಗೊರವರ ಹಾಡು ಸೇರಿದಂತೆ ವಿವಿಧ ಬಗೆಯ ಜನಪದ ಗೀತೆಗಳನ್ನು ಹಾಡುವ ಮೂಲಕ ಅವರ ಮನ ಸೂರೆಗೊಳ್ಳುತ್ತಿದ್ದಾರೆ.

ಕೊಳಲ ಮಧುರ ದನಿ, ಢಮರುಗದ ಡುಮು ಡುಮು ನಿನಾದದಲ್ಲಿ ಮೇಳೈಸಿ ಸೂಸಿ ಬರುವ ಮಲ್ಲಯ್ಯನವರ ಅಪೂರ್ವ ಹಾಡುಗಳಿಗೆ ಯಾರಾದರೂ ತಲೆ ದೂಗಬೇಕು. ದನಿಯ ಏರಿಳಿತ, ಎಳೆತ, ಬಿಗಿತಗಳಲ್ಲಿ ಕಥೆಯ ಭಾವ ಪನ್ನೀರ ಝರಿಯಂತೆ ಚಿಮ್ಮಿ ಹರಿಯುತ್ತದೆ. ಕೇಳುಗರನ್ನು ಸೆರೆಹಿಡಿಯುತ್ತದೆ. ವಯಸ್ಸು ೫೦ ಆಗಿದ್ದರೂ ದನಿ ನಡಗದು.

ADVERTISEMENT

ಮೈಲಾರ ಲಿಂಗಪ್ಪ ತುಪ್ಪದ ಮಾಳಮ್ಮನ ಲಗ್ನವಾದ ಕಥೆ, ನಾರಾಯಣಸ್ವಾಮಿ ಅಲಮೇಲ ಮಂಗಮ್ಮುನ ತಂದದ್ದು, ನಂಜುಂಡೇಶ್ವರ ಚಾಮುಂಡಿ ಮನೆಗೆ ಹೋದದ್ದು, ಬಂಜೆ ಕಥೆ, ನೀಲವೇಣಿ ಕಥೆ, ಬಸವಣ್ಣೋರ ಕಥೆ, ಮೈದಾಳ ರಾಮಣ್ಣನ ಕಥೆ, ಶಂಕುಮ್ಮನ ಕಥೆ, ಬಾಲನಾಗಮ್ಮನ ಕಥೆ, ಸಾರಂಗಧರನ ಕಥೆ, ಗಂಗೆ ಗೌರಿ ಕಥೆ, ರಾಮರ ಕಥೆ, ಕೊಡಗಿನ ವೀರರಾಜನ ಕಥೆ, ಮಾದೇಶ್ವರನ ಕಥೆ, ಮಂಟೇಸ್ವಾಮಿ ಕಥೆ, ಬೇವಿನಹಟ್ಟಿ ಕಾಳಮ್ಮನ ಕಥೆ, ಪಿರಿಯಪಟ್ಟಣ ಕಾಳಗ, ಹಾಲಂಬಾಡಿ ಜುಂಜೇಗೌಡನ ಕಥೆಗಳು, ಜೋಗಿ ಹಾಡುಗಳು, ಸಂಕಮ್ಮನ ಕಥೆ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಧಾರ್ಮಿಕ ಲೌಕಿಕ ಕಾವ್ಯಗಳನ್ನು ದಿನಗಟ್ಟಲೆ ಹಾಡುತ್ತಾರೆ.

ನಮ್ಮ ಸಮುದಾಯದ ಸಾಂಪ್ರದಾಯಿಕ ಕಲೆಯಾಗಿರುವ ಗೊರವರ ಕುಣಿತ ವಂಶಪಾರಂಪರ್ಯವಾಗಿ ನನಗೆ ಒಲಿದು ಬಂದಿದೆ. ತಾತಾ ಮೈಲಾರಯ್ಯ, ತಂದೆ ಕೆಂಚ ಮಲ್ಲಯ್ಯ ನವರಿಂದ ಈ ಕಲೆಯನ್ನು 14ನೇ ವಯಸ್ಸಿಗೆ ಕಲಿತುಕೊಂಡೆ. 5ನೇ ತರಗತಿವರೆಗೆ ಓದಿರುವ ನಾನು ಈಗಲೂ ಈ ಕಲೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದೇನೆ ಎನ್ನುತ್ತಾರೆ ಮಲ್ಲಯ್ಯ.

ನನ್ನ ತಂದೆ ಗೊರವರ ಕೆಂಚಮಲ್ಲಯ್ಯ ಅವರು ವೃತ್ತಿ ಗಾಯಕ ಪರಂಪರೆಯಲ್ಲಿ ಧಾರ್ಮಿಕ, ಲೌಕಿಕ ಕಥನ ಕಾವ್ಯಗಳನ್ನು ಹಾಡುತ್ತಿದ್ದರು, ಅವರಿಂದ ಕಲಿತಿರುವ ನಾನು ಹಾಡುತ್ತೇನೆ. ಮಂಟೇಸ್ವಾಮಿ, ಮಹದೇಶ್ವರ ಹಾಗೂ ಮೈಲಾರ ಲಿಂಗನ ಕಥೆಗಳನ್ನು ಏಳು ರಾತ್ರಿಗಳ ಕಾಲ ಹಾಡುತ್ತಿದ್ದರು. ನಾನು ಗೊರವರ ಕುಣಿತದ ಜತೆಗೆ ಸೋಬಾನೆ ಸೇರಿದಂತೆ ಹಲವು ಜನಪದ ಗೀತೆಗಳನ್ನು ಹಾಡುತ್ತೇನೆ ಎಂದು ತಿಳಿಸಿದರು.

'ಮಲ್ಲಯ್ಯನವರ ತಂದೆ ಕೆಂಚಮಲ್ಲಯ್ಯ ಅಪರೂಪದ ಹಾಡುಗಾರರು. ಇವರು ಹಾಡಿರುವ 'ಮೈಲಾರಲಿಂಗನ ಕಾವ್ಯ'ವನ್ನು ಕರ್ನಾಟಕ ಜಾನಪದ ಟ್ರಸ್ಟ್ ಮೂಲಕ 1987 ರಲ್ಲಿ ಸಂಪಾದಿಸಿ ಪ್ರಕಟಿಸಿದ್ದೇನೆ. ಎಲ್ಲ ಧಾರ್ಮಿಕ ವೃತ್ತಿಗಾಯಕರಂತೆಯೆ ಗೊರವರೂ ಸಹ ಅಧಿದೇವರಾದ ಮೈಲಾರಲಿಂಗನ ಮೇಲೆ ಸುದೀರ್ಘವಾದ ಕಥನಕಾವ್ಯವನ್ನು ಹಾಡುತ್ತಾರೆ. ನಾಲ್ಕಾರು ರಾತ್ರಿಗಳ ಕಾಲ ಹಾಡಬಹುದಾದ ಕಥೆ ಇದಾಗಿದೆ ಎಂದು ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ತಿಳಿಸಿದರು.

ಮೈಲಾರಲಿಂಗನ ಅವತಾರದ ಉದ್ದೇಶ, ಅವತಾರದ ಬಗೆ, ಕೈಲಾಸದಿಂದ ಭೂಲೋಕಕ್ಕೆ ಬಂದ ರೀತಿ, ಮನಿಮಲ್ಲಾಸುರನನ್ನು ಕೊಂದದ್ದು, ಹಿರೇಮೈಲಾರದಲ್ಲಿ ನೆಲೆಸಿದ ಪ್ರಸಂಗ ಇವುಗಳನ್ನು ತಾಳುಗತೆ ತಿಳಿಸುತ್ತಿದ್ದು, ಈ ಕಥೆಯ ಪಾಠ ಪ್ರಸ್ತುತದಲ್ಲಿ ದಕ್ಷಿಣ ಕರ್ನಾಟಕದ ಗೊರವರಲ್ಲಿ ಲಭ್ಯವಿಲ್ಲದಿರುವುದು ವಿಷಾದದ ಸಂಗತಿಯಾಗಿದೆ ಎಂದು ತಿಳಿಸಿದರು.

ಮೈಲಾರಲಿಂಗನ ಬಗೆಗೆ ಉತ್ತರ ಕರ್ನಾಟಕ ಹಾಗೂ ಮತ್ತು ದಕ್ಷಿಣ ಕರ್ನಾಟಕ ಈ ಎರಡು ಪ್ರದೇಶಗಳಲ್ಲೂ ಭಿನ್ನ ಪಾಠಾಂತರಗಳು ಲಭ್ಯವಿವೆ. ಅವುಗಳೆಲ್ಲವನ್ನೂ ಸಂಗ್ರಹಿಸಿ ಎರಡು ಪ್ರದೇಶಗಳಲ್ಲಿರುವ, ಮೈಲಾರಲಿಂಗನ ಗುಡ್ಡರಾದ ಗೊರವರ ಬದುಕು, ಆಚರಣೆಗಳನ್ನು ತೌಲನಿಕವಾಗಿ ಅಧ್ಯಯನ ಮಾಡಬೇಕು. ಇದರಿಂದ ಜನಾಂಗ ಅಧ್ಯಯನದ ದಿಕ್ಕಿನಲ್ಲಿ ಒಂದು ಮಹತ್ವಪೂರ್ಣ ಹೆಜ್ಜೆಯನ್ನಿಟ್ಟಂತಾಗುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.