ರಾಮನಗರದ ನ್ಯೂ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವೃತ್ತಿ ಮಾರ್ಗದರ್ಶನ ಹಾಗೂ ಎಸ್‌ಎಸ್ಎಲ್‌ಸಿ ನಂತರ ಮುಂದೇನು?ಶಾಂತಿನಿಕೇತನ ಸಮೂಹ ಶಿಕ್ಷಣ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಕುಮಾರಸ್ವಾಮಿ ಆರ್. ಉದ್ಘಾಟಿಸಿದರು.
ರಾಮನಗರ: ‘ಸತತ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ಸಾಧನೆಯತ್ತ ಮುನ್ನುಗ್ಗಬೇಕು’ ಎಂದು ಶಾಂತಿನಿಕೇತನ ಸಮೂಹ ಶಿಕ್ಷಣ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಕುಮಾರಸ್ವಾಮಿ ಆರ್. ಸಲಹೆ ನೀಡಿದರು.
ನಗರದ ನ್ಯೂ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಮತ್ತು ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟವು ಇತ್ತೀಚೆಗೆ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವೃತ್ತಿ ಮಾರ್ಗದರ್ಶನ ಹಾಗೂ ಎಸ್‌ಎಸ್ಎಲ್‌ಸಿ ನಂತರ ಮುಂದೇನು? ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹೇಳುವಂತೆ, ಸಣ್ಣ ಕನಸುಗಳನ್ನು ಕಾಣುವುದು ಘೋರ ಅಪರಾಧ. ಕನಸುಗಳು ದೊಡ್ಡದಾಗಿರಬೇಕು. ಅನವಶ್ಯಕ ಆಲೋಚನೆಗಳನ್ನು ಬಿಟ್ಟು ಓದಿನ ಕಡೆಗೆ ಗಮನ ಕೇಂದ್ರೀಕರಿಸಬೇಕು. ಈ ನಿಟ್ಟಿನಲ್ಲಿ ಮೊದಲಿಗೆ ನಮ್ಮನ್ನು ನಾವು ಸುಧಾರಿಸಿಕೊಳ್ಳುಬೇಕು. ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಗುರಿ ತಲುಪಲು ಚಿತ್ತ ಹರಿಸಬೇಕು’ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಟ್ರಸ್ಟ್‌ನ ಜಿಲಾ ಅಧ್ಯಕ್ಷ ಪಟೇಲ್ ಸಿ. ರಾಜು, ‘ಖಾಸಗಿ ಶಾಲೆಯ ಮಕ್ಕಳು ಶಾಲಾ ಶಿಕ್ಷಣ ಇಲಾಖೆ ನಡೆಸುವ ಮಾರ್ಗದರ್ಶನಗಳಿಂದ ವಂಚಿತರಾಗಿದ್ದರು. ಆ ಕೊರತೆ ನೀಗಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಮಹತ್ವದ್ದಾಗಿದೆ’ ಎಂದು ತಿಳಿಸಿದರು.
ಟ್ರಸ್ಟ್‌ನ ಜಿಲ್ಲಾ ಗೌರವಾಧ್ಯಕ್ಷ ಆರ್.ಕೆ. ಬೈರಲಿಂಗಯ್ಯ, ‘ಇಂದಿನ ದಿನಗಳಲ್ಲಿ ಎಲ್ಲಾ ಕಡೆ ಸ್ಪರ್ಧೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈಗಿನಿಂದಲೇ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ತರಗತಿಗಳಲ್ಲಿ ಶಿಕ್ಷಕರು ಹೇಳಿದ್ದನ್ನು ಗಮನವಿಟ್ಟು ಕೇಳಬೇಕು. ಸಮಯಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಶಿಸ್ತುಬದ್ಧವಾದ ಅಧ್ಯಯನ ಮಾಡಿ, ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಆರ್. ರವಿಕುಮಾರ್, ‘ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಏಕಾಗ್ರತೆಗೆ ಭಂಗ ತರುವ ಹಾಗೂ ಅನಗತ್ಯವಾಗಿ ಅದರೊಳಗೆ ಕಾಲ ಕಳೆಯದೆ, ಅನಿವಾರ್ಯವಿದ್ದಾಗಷ್ಟೇ ಬಳಕೆಗೆ ವಿದ್ಯಾರ್ಥಿಗಳು ಮಿತಿ ಹಾಕಿಕೊಳ್ಳಬೇಕು. ಪ್ಲಾನ್ ಮಾಡಿಕೊಂಡು ಓದಿದರೆ ಎಲ್ಲವೂ ಸುಲಭವಾಗಲಿದೆ. ಇಲ್ಲದಿದ್ದರೆ, ಸುಲಭವಾದ ವಿಷಯವೂ ಕಷ್ಟವಾಗಲಿದೆ’ ಎಂದು ತಿಳಿಸಿದರು.
ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ವರದರಾಜು, ಸುನೀಲ್ ಕುಮಾರ್, ಬಾಲಗಂಗಾಧರ ಮೂರ್ತಿ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಟಿ. ತಿಮ್ಮೇಗೌಡ, ಖಜಾಂಚಿ ರವಿ ಸಿ, ಸಂಘಟನಾ ಕಾರ್ಯದರ್ಶಿ ಎಂ.ಡಿ. ಶಿವಕುಮಾರ್, ಕಾಲೇಜಿನ ಉಪ ಪ್ರಾಂಶುಪಾಲ ಚಂದ್ರಶೇಖರ್, ಟ್ರಸ್ಟ್ ಕಾರ್ಯದರ್ಶಿ ಜಿ.ಕೆ. ಶಿವದ್ಯಾವೇಗೌಡ ಇದ್ದರು.
‘ವಿದ್ಯಾರ್ಥಿಗಳು ಮೊದಲಿಗೆ ವೃತ್ತಿಯ ಆಯ್ಕೆ ನಿರ್ಧಾರ ಮಾಡಿ ಕೋರ್ಸ್‌ಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಅದಕ್ಕೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಓದಿನ ಜೊತೆಗೆ ವೃತ್ತಿಗೂ ಹಲವು ಅವಕಾಶಗಳಿವೆ. ಅದಕ್ಕಾಗಿ ಕೌಶಲ ತರಬೇತಿ ಅವಶ್ಯಕ. ಕಂಪ್ಯೂಟರ್ ಜ್ಞಾನದ ಜೊತೆಗೆ ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳು ಗೊತ್ತಿರಬೇಕು. ವಿದ್ಯಾರ್ಥಿಗಳಿಗೆ ಅನುಕೂಲಕಾರಿಯಾಗಿರುವ ಇಂತಹ ಕಾರ್ಯಾಗಾರವನ್ನು ಮುಂದಿನ ದಿನಗಳಲ್ಲಿ ಪದವಿ ಪೂರ್ವ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಹಮ್ಮಿಕೊಳ್ಳಲಾಗುವುದು’ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನೇಗಿಲಯೋಗಿ ಟ್ರಸ್ಟ್ ಕೇಂದ್ರ ಕಚೇರಿ ಸಂಸ್ಥಾಪಕ ಅಧ್ಯಕ್ಷ ಡಿ. ರವಿಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.