ADVERTISEMENT

ನಗರಸಭೆಗೆ ರಾಜ್ಯ ಮಟ್ಟದ ಪ್ರಶಸ್ತಿ

ಹಸಿ ಕಸದಿಂದ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 13:02 IST
Last Updated 17 ನವೆಂಬರ್ 2019, 13:02 IST

ರಾಮನಗರ: ಇಲ್ಲಿನ ನಗರಸಭೆ ವತಿಯಿಂದ ಸ್ಥಾಪನೆಯಾಗಿ ಕಾರ್ಯನಿರ್ವಹಿಸುತ್ತಿರುವ ಹಸಿ ಕಸದಿಂದ ವಿದ್ಯುತ್ ಉತ್ಪಾದನಾ ಘಟಕಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.

ಕರ್ನಾಟಕ ಸರ್ಕಾರದ ಪೌರಾಡಳಿತ ನಿರ್ದೇಶನಾಲಯದಡಿಯಲ್ಲಿ ಸ್ಥಾಪನೆಯಾಗಿರುವ ಸಿಟಿ ಮ್ಯಾನೇಜರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ (ಸಿ.ಎಂ.ಎ.ಕೆ) ಪ್ರತಿ ವರ್ಷ ಅತ್ಯುತ್ತಮ ವ್ಯವಸ್ಥೆ ಪ್ರಶಸ್ತಿ ಕೊಡುತ್ತಿದೆ. ರಾಮನಗರ ನಗರಸಭೆ ಸ್ಥಾಪಿಸಿರುವ ಹಸಿ ಕಸದಿಂದ ವಿದ್ಯುತ್ ಉತ್ಪಾದನಾ ಘಟಕಕ್ಕೆ (ಬಯೋಮಿಥನೈಸೇಷನ್ ಪ್ಲಾಂಟ್ ಫಾರ್ ಎಲೆಕ್ಟ್ರಿಸಿಟಿ ಜನರೇಷನ್) ರಾಜ್ಯ ಮಟ್ಟದ ತೃತೀಯ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೆ.

ಪ್ರಶಸ್ತಿ ಪತ್ರದ ಜತೆಗೆ ₹50 ಸಾವಿರ ನಗದು ಕೂಡ ಲಭಿಸಿದೆ. ನಗರಸಭೆಯ ಈ ಘಟಕವನ್ನು 2017-18ನೇ ಸಾಲಿಗೆ ಅತ್ಯುತ್ತಮ ವ್ಯವಸ್ಥೆ ಎಂದು ದಾಖಲಿಸಿಕೊಳ್ಳಲಾಗಿದೆ ಎಂದು ಸಿ.ಎಂ.ಎ.ಕೆ ನೀಡಿರುವ ಪ್ರಶಸ್ತಿ ಪತ್ರದಲ್ಲಿ ತಿಳಿಸಲಾಗಿದೆ.

ADVERTISEMENT

ನಗರದಲ್ಲಿ ಉತ್ಪತ್ತಿಯಾಗುವ ಟನ್ ಗಟ್ಟಲೆ ತ್ಯಾಜ್ಯದ ನಿರ್ವಹಣೆಗೆ ಸ್ಥಳೀಯ ನಗರಸಭೆ ಕೆಲ ವರ್ಷಗಳ ಹಿಂದೆಯೇ ಈ ಘಟಕವನ್ನು ಆರಂಭಿಸಿತ್ತು. ಹಸಿ ತ್ಯಾಜ್ಯವನ್ನು ನಾಗರಿಕರು ಬೇರ್ಪಡಿಸಿ ಕೊಡದಿದ್ದರೂ ನಗರಸಭೆಯ ಸಿಬ್ಬಂದಿಯೇ ಹಸಿಕಸವನ್ನು ಬೇರ್ಪಡಿಸಿ ಈ ಘಟಕಕ್ಕೆ ಸುರಿಯುತ್ತಾರೆ. ಹಸಿ ಕಸದ ಮೂಲಕ ವಿದ್ಯುತ್ ಉತ್ಪಾದಿಸಿ ಸ್ಥಳೀಯವಾಗಿ ಬೀದಿ ದೀಪಗಳನ್ನು ಬೆಳಗಿಸಲು ಉಪಯೋಗಿಸಲಾಗುತ್ತಿದೆ.

ಕಸ ನಿರ್ವಹಣೆ ತೀರಾ ಕಷ್ಟದ ಕೆಲಸ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಸ ನಿರ್ವಹಣೆ ಮಾಡುವುದು ಸಹ ಸವಾಲಿನ ಕೆಲಸ. ನಗರಸಭೆಯ ಅಧಿಕಾರಿಗಳು ಹಸಿ ಕಸವನ್ನೇ ಬಳಸಿಕೊಂಡು ವಿದ್ಯುತ್ ಉತ್ಪಾದಿಸಿ ಅದನ್ನು ಸಾರ್ವಜನಿಕರಿಗೆ ಸಮರ್ಪಿಸುವ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ರೂಢಿಸಿಕೊಂಡು ಬಂದಿದ್ದಾರೆ. ಇದೀಗ ಈ ಕಾರ್ಯಕ್ಕೆ ಪ್ರಶಸ್ತಿ ಸಿಕ್ಕಿರುವುದು ಅಧಿಕಾರಿಗಳಲ್ಲಿ ಸಂತಸ ತಂದಿದೆ.

2017-18ನೇ ಸಾಲಿಗೆ ಬೆಸ್ಟ್ ಪ್ರಾಕ್ಟೀಸ್ ತೃತೀಯ ಪ್ರಶಸ್ತಿಯನ್ನು ನಗರಸಭೆ ಪಡೆದುಕೊಂಡಿದೆ. ಸಿ.ಎಂ.ಎ.ಕೆ ಸಂಸ್ಥೆ ಈ ಪ್ರಶಸ್ತಿಯನ್ನು ಕೊಟ್ಟು ಪ್ರೋತ್ಸಾಹಿಸಿದೆ. ಬಯೋ ಮಿಥನೈಸೇಷನ್ ಘಟಕದಲ್ಲಿ ಹಸಿ ಕಸದ ಮೂಲಕ ವಿದ್ಯುತ್ ಉತ್ಪಾದಿಸುತ್ತಿರುವುದು ಅತ್ಯುತ್ತಮ ವ್ಯವಸ್ಥೆ ಎಂದು ಸಂಸ್ಥೆ ಪರಿಗಣಿಸಿದೆ. ದಾಖಲೆಯನ್ನು ಸಹ ಮಾಡಿಕೊಂಡಿದೆ. ವ್ಯವಸ್ಥೆಯ ಸುಧಾರಣೆ ವಿಚಾರದಲ್ಲಿ ಸಾಕಷ್ಟು ಕ್ರಮಗಳನ್ನು ವಹಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಥಮ ಪ್ರಶಸ್ತಿ ಪಡೆಯುವುದು ನಗರಸಭೆಯ ಉದ್ದೇಶ ಎಂದು ಬಿ. ಶುಭಾ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.