ADVERTISEMENT

ಕಿರುಕುಳ ಆರೋಪ: ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ದಯಾನಂದ ಸಾಗರ ನರ್ಸಿಂಗ್ ಕಾಲೇಜು ಪ್ರಾಚಾರ್ಯ, ಆಡಳಿತ ಮಂಡಳಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 16:13 IST
Last Updated 5 ಫೆಬ್ರುವರಿ 2025, 16:13 IST
ಅನಾಮಿಕ ವಿನೀತ್
ಅನಾಮಿಕ ವಿನೀತ್   

ಹಾರೋಹಳ್ಳಿ: ತಾಲ್ಲೂಕಿನ ದೇವರಕಗ್ಗಲಹಳ್ಳಿಯಲ್ಲಿರುವ ಡಾ. ಚಂದ್ರಮ್ಮ ದಯಾನಂದಸಾಗರ ವಿಶ್ವವಿದ್ಯಾಲಯದ ನರ್ಸಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಕೇರಳ ಮೂಲದ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಅನಾಮಿಕ ವಿನೀತ್ (19) ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪುತ್ರಿ ಸಾವಿಗೆ ಕಾಲೇಜಿನ ಆಡಳಿತ ಮಂಡಳಿ ಕಿರುಕುಳವೇ ಕಾರಣ ಎಂದು ಆರೋಪಿಸಿ ಪೋಷಕರು ನೀಡಿದ ದೂರಿನ ಮೇರೆಗೆ ಕಾಲೇಜಿನ ಪ್ರಾಚಾರ್ಯ ಮತ್ತು ಆಡಳಿತ ಮಂಡಳಿ ಸಿಬ್ಬಂದಿ ವಿರುದ್ಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ಸಹಪಾಠಿಯ ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಆಡಳಿತ ಮಂಡಳಿ ವಿರುದ್ಧ ಕಾಲೇಜು ಆವರಣದಲ್ಲಿ ಮಧ್ಯಾಹ್ನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಕೇರಳದ ಕಣ್ಣೂರು ಜಿಲ್ಲೆಯ ಮುಜ್ಹಪ್ಪಿಲನಗದ ಗ್ರಾಮದ ಅನಾಮಿಕ ರಾತ್ರಿ ಊಟಕ್ಕೆ ಬಂದಿರಲಿಲ್ಲ. ಸಹಪಾಠಿಗಳು ಅನಾಮಿಕ ಕೊಠಡಿ ಬಾಗಿಲು ಬಡಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ನಂತರ ಕಿಟಕಿ ತೆರೆದು ನೋಡಿದಾಗ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಗೊತ್ತಾಯಿತು. ಕೂಡಲೇ ವಿಷಯವನ್ನು ಹಾಸ್ಟೆಲ್‌ ವಾರ್ಡನ್‌ ಗಮನಕ್ಕೆ ತಂದಿದ್ದಾರೆ. ಅವರು ಆಡಳಿತ ಮಂಡಳಿ ಗಮನಕ್ಕೆ ತಂದು, ಠಾಣೆಗೆ ವಿಷಯ ಮುಟ್ಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರಣಪತ್ರ: ಆತ್ಮಹತ್ಯೆಗೂ ಮುನ್ನ ಅನಾಮಿಕ ಬರೆದಿರುವ ಮರಣಪತ್ರ ಸ್ಥಳದಲ್ಲಿ ಸಿಕ್ಕಿದೆ. ಅದರಲ್ಲಿ, ‘ನನ್ನ ಸಾವಿಗೆ ನಾನೇ ಕಾರಣ. ಬೇರಾರು ಅಲ್ಲ’ ಎಂದು ಬರೆದಿದ್ದಾರೆ. ಮತ್ತೊಂದೆಡೆ ವಿದ್ಯಾರ್ಥಿನಿ ಪೋಷಕರು ಮತ್ತು ಸಹಪಾಠಿಗಳು ಆಡಳಿತ ಮಂಡಳಿ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ್ದಾರೆ.

ಕಿರುಕುಳ ಆರೋಪದ ಮೇಲೆ ಪೋಷಕರು ನೀಡಿದ ದೂರಿನ ಮೇರೆಗೆ ಕಾಲೇಜು ಪ್ರಾಚಾರ್ಯ ಮತ್ತು ಆಡಳಿತ ಮಂಡಳಿ ಸಿಬ್ಬಂದಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 108ರಡಿ (ಆತ್ಮಹತ್ಯೆಗೆ ಪ್ರಚೋದನೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಾರೋಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಆತ್ಮಹತ್ಯೆ ಕುರಿತು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ನ್ಯಾಯಕ್ಕೆ ಆಗ್ರಹ: ಅನಾಮಿಕ ಕೊಠಡಿಯಲ್ಲಿ ಎರಡು ಮರಣಪತ್ರಗಳು ಸಿಕ್ಕಿವೆ. ಈ ಪೈಕಿ, ಒಂದು ಮಾತ್ರ ಪೊಲೀಸರ ಕೈಗೆ ಸಿಕ್ಕಿದೆ. ಮತ್ತೊಂದರಲ್ಲಿ ಕಾಲೇಜಿನ ಆಡಳಿತ ಮಂಡಳಿ ಕಿರುಕುಳದ ಕುರಿತು ಬರೆದಿದ್ದು, ಅದನ್ನು ಮಂಡಳಿ ಮುಚ್ಚಿಟ್ಟಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪೊಲೀಸರು ಘಟನೆ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳು ತಪ್ಪು ಮಾಡಿದರೆ, ಆಡಳಿತ ಮಂಡಳಿಯು ಪೋಷಕರ ಗಮನಕ್ಕೆ ತಂದು ಸರಿಪಡಿಸಬೇಕು. ಅದು ಬಿಟ್ಟು ಕಿರುಕುಳ ನೀಡಿದರೆ ವಿದ್ಯಾರ್ಥಿಗಳು ಆತ್ಮಹತ್ಯೆಯ ಹಾದಿ ಹಿಡಿಯುತ್ತಾರೆ. ಕಾಲೇಜಿನವರು ಈ ಘಟನೆಯಿಂದ ಎಚ್ಚೆತ್ತುಕೊಂಡು ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು. ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸುವ ಜೊತೆಗೆ ಪೊಲೀಸ್ ತನಿಖೆಗೆ ಸಹಕರಿಸುವುದಾಗಿ ಆಡಳಿತ ಮಂಡಳಿ ಭರವಸೆ ನೀಡಿದ ಬಳಿಕ, ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸಿದರು.

ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಖಂಡಿಸಿ ಹಾರೋಹಳ್ಳಿಯ ದೇವರಕಗ್ಗಲಹಳ್ಳಿಯಲ್ಲಿರುವ ಡಾ. ಚಂದ್ರಮ್ಮ ದಯಾನಂದಸಾಗರ ವಿಶ್ವವಿದ್ಯಾಲಯದ ನರ್ಸಿಂಗ್ ಕಾಲೇಜಿನ ಎದುರು ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು

Cut-off box - ಬ್ಲಾಕ್‌ಲಿಸ್ಟ್‌ಗೆ ಸೇರಿಸುವೆ ಎಂದು ಬೆದರಿಸಿದ್ದ ಪ್ರಾಚಾರ್ಯ ತಿಂಗಳ ಹಿಂದೆ ಮನೆಗೆ ಬಂದಿದ್ದ ಪುತ್ರಿ ಕಾಲೇಜಿನಲ್ಲಿ ಓದುವುದಕ್ಕೆ ಆಗುತ್ತಿಲ್ಲ. ಆಡಳಿತ ಮಂಡಳಿಯವರು ತುಂಬಾ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದ್ದಳು. ನಾನು ಸಮಾಧಾನ ಮಾಡಿ ಕಳಿಸಿದ್ದೆ. ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಕರೆ ಮಾಡಿದ್ದ ಪುತ್ರಿ ನನಗಿಲ್ಲಿ ಬಹಳ ಹಿಂಸೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಳು. ನಾನು ಬಂದು ಆಡಳಿತ ಮಂಡಳಿ ಜೊತೆ ಮಾತನಾಡುವೆ ಎಂದು ಹೇಳಿದ್ದೆ. ಆದರೆ ಅಷ್ಟೊತ್ತಿಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾತ್ರಿ 10 ಗಂಟೆ ಸುಮಾರಿಗೆ ಹಾಸ್ಟೆಲ್ ವಾರ್ಡನ್ ನನಗೆ ಕರೆ ಮಾಡಿ ವಿಷಯ ತಿಳಿಸಿದರು. ಪುತ್ರಿಗೆ ತೊಂದರೆ ನೀಡುತ್ತಿದ್ದ ಕಾಲೇಜಿನ ಪ್ರಾಂಶುಪಾಲರು ಆಕೆಯನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ವಿದ್ಯಾರ್ಥಿನಿ ತಂದೆ ವಿನೀತ್ ಕುಮಾರ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಓದಿನಲ್ಲಿ ಹಿಂದುಳಿದಿದ್ದಕ್ಕೆ ಮಾನಸಿಕ ಹಿಂಸೆ ನಾಲ್ಕು ತಿಂಗಳ ಹಿಂದೆ ಕಾಲೇಜಿಗೆ ಸೇರಿದ್ದ ಅನಾಮಿಕ ಒಂದೆರಡು ವಿಷಯದಲ್ಲಿ ಹಿಂದುಳಿದಿದ್ದರು. ಇದನ್ನೇ ನೆಪ ಮಾಡಿಕೊಂಡು ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು ಅನಾಮಿಕಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಒಂದು ವಿಷಯದಲ್ಲಿ ಫೇಲಾದರೆ ಇಂತಿಷ್ಟು ಹಣ ಪಾವತಿಸಬೇಕು. ಇಲ್ಲದಿದ್ದರೆ ವರ್ಷದ ಪೂರ್ಣ ಶುಲ್ಕ ಪಾವತಿಸಬೇಕು ಎಂದು ತೊಂದರೆ ಕೊಡುತ್ತಿದ್ದರು. ಕಾಲೇಜು ತೊರೆಯಲು ಮುಂದಾಗಿದ್ದ ಅನಾಮಿಕ ವರ್ಗಾವಣೆ ಪತ್ರ ಕೇಳಿದಾಗ ನಾಲ್ಕು ವರ್ಷದ ಶುಲ್ಕ ಪಾವತಿಸಿದರೆ ಕೊಡುವುದಾಗಿ ಹೇಳಿದ್ದರು. ಇದರಿಂದ ತೀವ್ರ ನೊಂದಿದ್ದ ಅನಾಮಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.