ರಾಮನಗರ: ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಸಮೀಕ್ಷೆದಾರರಿಗೆ ಸ್ಥಳ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಬುಧವಾರ ಉಪ ವಿಭಾಗಾಧಿಕಾರಿ ಬಿನೋಯ್ ಅವರಿಗೆ ಮನವಿ ಸಲ್ಲಿಸಿದರು.
ಸಮೀಕ್ಷೆಯಲ್ಲಿ ಬಹುತೇಕ ಶಿಕ್ಷಕರೇ ಪಾಲ್ಗೊಂಡಿದ್ದಾರೆ. ಆದರೆ, ಶಿಕ್ಷಕರು ಕಾರ್ಯನಿರ್ವಹಿಸುವ ಶಾಲೆಯ ಸುತ್ತಮುತ್ತಲಿನ ಸ್ಥಳಗಳಲ್ಲಿ ಅವರನ್ನು ನಿಯೋಜಿಸಲಾಗಿದೆ. ಇದರಿಂದಾಗಿ ಸಮೀಕ್ಷೆ ಮಾಡಲು ತೊಂದರೆಯಾಗುತ್ತಿದೆ. ಹಾಗಾಗಿ, ಸ್ಥಳೀಯವಾಗಿ ಅವರನ್ನು ಸಮೀಕ್ಷೆಗೆ ನಿಯೋಜಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್ ಒತ್ತಾಯಿಸಿದರು.
ರಜಾ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಸಮೀಕ್ಷೆದಾರರಿಗೆ ಮತ್ತು ಮೇಲ್ವಿಚಾರಕರಿಗೆ ಗಳಿಕೆ ರಜೆ ಮಂಜೂರು ಮಾಡಿಕೊಡಬೇಕು. ಸಮೀಕ್ಷೆ ಕಾರ್ಯ ಮುಗಿಸಲು ಹೆಚ್ಚಿನ ಕಾಲಾವಕಾಶ ಕೊಡಬೇಕು. ಸರ್ವರ್ ಸಮಸ್ಯೆ ಸೇರಿದಂತೆ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಬೇಕು. ಸಮೀಕ್ಷೆಗೆ ಸಹಕರಿಸುವಂತೆ ಗ್ರಾಮಗಳ ಮಟ್ಟದಲ್ಲಿ ಗ್ರಾಮ ಸಹಾಯಕರ ಮೂಲಕ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಸಂಘದ ಪದಾಧಿಕಾರಿಗಳಾದ ಶಿವಸ್ವಾಮಿ, ಶಂಕರಾನಂದ, ಜೆ.ಎಲ್. ಗಿರೀಶ್, ಜೆ.ಪಿ. ಸತೀಶ್ ಪಾದ್ರಳ್ಳಿ, ರಾಮಚಂದ್ರಯ್ಯ, ಬಿ. ವೀರೇಂದ್ರ ಕುಮಾರ್, ರಾಮಕೃಷ್ಣಯ್ಯ, ಶಿವಕುಮಾರ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.