ADVERTISEMENT

ಅಧ್ಯಕ್ಷ, ಸದಸ್ಯರು, ತಹಶೀಲ್ದಾರ್ ನಡುವೆ ವಾಗ್ವಾದ

ಸಾರ್ವಜನಿಕ ಸಂದರ್ಶನದ ವೇಳೆ ಕುರಿತು ಚರ್ಚೆ, ಸಮಯ ಬದಲಿಸುವಂತೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 13:43 IST
Last Updated 12 ಫೆಬ್ರುವರಿ 2020, 13:43 IST
ಕೃಷಿ ಇಲಾಖೆ ಅಧಿಕಾರಿ ರಾಧಾಕೃಷ್ಣ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು
ಕೃಷಿ ಇಲಾಖೆ ಅಧಿಕಾರಿ ರಾಧಾಕೃಷ್ಣ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು   

ಕನಕಪುರ: ‘ಸರ್ಕಾರದ ನಿಯಮಾವಳಿಯಂತೆ ಸಾರ್ವಜನಿಕರ ಸಂದರ್ಶನಕ್ಕೆ ಮಧ್ಯಾನ್ಹದ 3 ಗಂಟೆ ನಂತರ ಅವಕಾಶ ಮಾಡಿಕೊಡಲಾಗಿದೆ. ಇದರಲ್ಲಿ ತಪ್ಪೇನಿದೆ. ಈ ಸಮಯ ಬೇಡವೆಂದು ತಿಳಿಸಿದರೆ ಹೇಳಿದ ಸಮಯವನ್ನೇ ನಿಗಧಿ ಮಾಡುತ್ತೇನೆ’ ಎಂದು ತಹಶೀಲ್ದಾರ್‌ ವರ್ಷ ಒಡೆಯರ್‌ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಹೇಳಿದರು.

ಇಲ್ಲಿನ ಮಿನಿ ವಿಧಾನಸೌಧದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ, ಸದಸ್ಯರು ‘ತಹಶೀಲ್ದಾರ್‌ ಕಚೇರಿ ಮುಂಭಾಗದ ಗೇಟ್‌ನಲ್ಲಿ ಇಬ್ಬರು ಲೇಡಿ ಬೌನ್ಸರ್‌ ಇದ್ದಾರೆ. ಅವರು ಒಳಗಡೆ ಬಿಡುವುದಿಲ್ಲ. ಕೇಳಿದರೆ 3 ಗಂಟೆಯ ನಂತರ ಬನ್ನಿ ಎಂದು ಹೇಳುತ್ತಾರೆ’ ಎಂದು ಮಾಡಿದ ಆರೋಪಕ್ಕೆ ಅವರು ಉತ್ತರಿಸಿ ಮಾತನಾಡಿದರು.

‘ಸರ್ಕಾರದ ನಿಯಮದಂತೆ ನಾನು ಕೆಲಸ ಮಾಡುತ್ತಿದ್ದೇನೆ. ಕಚೇರಿ ಮುಂಭಾಗದಲ್ಲಿ ಕೆಲಸ ನಿರ್ವಹಿಸುವ ಮಹಿಳಾ ನೌಕರರನ್ನು ಬೌನ್ಸರ್‌ ಎಂದು ಹೀಯಾಳಿಸುವುದು ಸರಿಯಲ್ಲ. ಕಚೇರಿ ಕೆಲಸ ಮಾಡಲು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸಾರ್ವಜನಿಕರಿಗೆ 3 ಗಂಟೆಯ ನಂತರ ಅವಕಾಶ ಮಾಡಿಕೊಡಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ನಾನು ಹೊಸದಾಗಿ ಈ ತಾಲ್ಲೂಕಿಗೆ ಬಂದಿದ್ದು, ನಿಮ್ಮಗಳ ಪರಿಚಯವಿಲ್ಲದ ಕಾರಣ ಈ ರೀತಿ ಗೊಂದಲವಾಗಿದೆ. ಜನಪ್ರತಿನಿಧಿಗಳಾದ ನೀವು ಕಚೇರಿಗೆ ಯಾವ ಸಮಯದಲ್ಲಾದರೂ ಬಂದು ಭೇಟಿ ಮಾಡಬಹುದು. ಸಾರ್ವಜನಿಕರಿಗೆ ಎಂದು ಸಮಯ ನಿಗಧಿ ಮಾಡಿದ್ದೇವೆ ಅಷ್ಟೇ’ ಎಂದು ಉತ್ತರಿಸಿದರು.

ಅಧ್ಯಕ್ಷರು ಮಾತನಾಡಿ, ‘ನೀವು ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಗೌರವ ಕೊಡುತ್ತಿಲ್ಲ. 4 ವರ್ಷಗಳಲ್ಲಿ ಎಂದೂ ಮಾತನಾಡದ ಸದಸ್ಯರು ಇಂದು ಮಾತನಾಡುತ್ತಿದ್ದಾರೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಿ’ ಎಂದರು.

‘ಕಂದಾಯ ಇಲಾಖೆಗಳಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ. ಇತರ ಇಲಾಖೆಗಳು ಸರ್ಕಾರದ ಸವಲತ್ತನ್ನು ನೇರವಾಗಿ ರೈತರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ನಿಮ್ಮಿಂದ ಏಕೆ ಆಗುತ್ತಿಲ್ಲ. ಸಂಜೆ ಸಮಯ ರೈತರಿಗೆ ಹಾಲು ಕರೆಯವುದು ಮತ್ತಿತರ ಕೆಲಸಗಳಿರುತ್ತವೆ. ಆ ಕಾರಣದಿಂದ 3 ಗಂಟೆ ನಂತರದ ಬದಲು ಬೆಳಿಗ್ಗೆ ಸಮಯದಲ್ಲಿ ಸಾರ್ವಜನಿಕರ ಸಂದರ್ಶನಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.

‘ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಜನಸೇವಕರೇ. ಇಬ್ಬರೂ ಸೇರಿ ಸಾರ್ವಜನಿಕರ ಕೆಲಸ ಮಾಡಬೇಕು. ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು. ತಾಲ್ಲೂಕು ಆಡಳಿತವನ್ನು ಚುರುಕುಗೊಳಿಸುವ ಕೆಲಸವನ್ನು ಮಾಡುತ್ತೇನೆ. ಹೋಬಳಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಆಧಾರ್‌ ತಿದ್ದುಪಡಿ ಸಮಸ್ಯೆಗೆ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ತಿಳಿಸಿದರು.

ಕೃಷಿ, ರೇಷ್ಮೆ, ತೋಟಗಾರಿಕೆ, ಸಾರಿಗೆ ಮತ್ತಿತರರ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಇಲಾಖೆಗಳಲ್ಲಿನ ಕೆಲವು ನ್ಯೂನತೆ ಮತ್ತು ಸಮಸ್ಯೆಗಳ ಬಗ್ಗೆ ಸದಸ್ಯರು ಸಭೆಗೆ ತಿಳಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಉಪಾಧ್ಯಕ್ಷೆ ಅನ್ನಪೂರ್ಣ ಸೋಮಶೇಖರ್‌, ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್‌, ಕಾರ್ಯ ನಿರ್ವಾಹಕ ಅಧಿಕಾರಿ ಟಿ.ಎಸ್‌.ಶಿವರಾಮ್‌, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.