ADVERTISEMENT

ಮಾನಸಿಕ ನೆಮ್ಮದಿಗೆ ದೇವಾಲಯ ಅಗತ್ಯ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 2:51 IST
Last Updated 23 ಫೆಬ್ರುವರಿ 2021, 2:51 IST
ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ನಡೆದ ಭೈರವೇಶ್ವರಸ್ವಾಮಿ ದೇವಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ನಿರ್ಮಲಾನಂದ ಸ್ವಾಮೀಜಿ, ಯೋಗೇಶ್ವರ್ ಭಾಗವಹಿಸಿದ್ದರು
ಚನ್ನಪಟ್ಟಣ ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ನಡೆದ ಭೈರವೇಶ್ವರಸ್ವಾಮಿ ದೇವಾಲಯದ ಉದ್ಘಾಟನೆ ಕಾರ್ಯಕ್ರಮದಲ್ಲಿ ನಿರ್ಮಲಾನಂದ ಸ್ವಾಮೀಜಿ, ಯೋಗೇಶ್ವರ್ ಭಾಗವಹಿಸಿದ್ದರು   

ಚನ್ನಪಟ್ಟಣ: ದೇವಾಲಯಗಳು ಮನುಷ್ಯನ ನೆಮ್ಮದಿಯ ಕೇಂದ್ರಗಳಾಗಿವೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ಭಾನುವಾರ ನಡೆದ ಭೈರವೇಶ್ವರ ಸ್ವಾಮಿಯ ನೂತನ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯನಿಗೆ ಎಷ್ಟೇ ಒತ್ತಡವಿದ್ದರೂ ಆತ ಒಂದು ಬಾರಿ ದೇವಾಲಯಕ್ಕೆ ಹೋಗಿ ಕೆಲ ನಿಮಿಷಗಳು ಅಲ್ಲಿ ಕಳೆದರೆ ಆತನಿಗೆ ಸಿಗುವ ನೆಮ್ಮದಿ, ಶಾಂತಿ ಬೇರೆಲ್ಲೂ ಸಿಗುವುದಿಲ್ಲ ಎಂದು ಹೇಳಿದರು.

ADVERTISEMENT

ಸಮಾಜದಲ್ಲಿ ಧರ್ಮ ಮಾತ್ರ ಉಳಿಯುತ್ತದೆ. ಅಧರ್ಮ ಕೇವಲ ತಾತ್ಕಾಲಿಕವಾಗಿ ದೊರೆಯುವ ಅಲ್ಪಶಾಂತಿಯಾಗಿರುತ್ತದೆ. ಅಧರ್ಮದ ಹಿಂದೆ ಹೋದರೆ ನಮಗೆ ಅಶಾಂತಿ ದೊರೆಯುವುದರ ಜೊತೆಗೆ ಜೀವನವೇ ಡೋಲಾಯಮಾನವಾಗುತ್ತದೆ. ಪ್ರತಿಯೊಬ್ಬರು ಎಚ್ಚರಿಕೆಯಿಂದ ಧರ್ಮದ ಕಡೆ ನಡೆದಾಗ ಮಾತ್ರ ಮನುಕುಲದ ಜೀವನ ಸಾರ್ಥಕವಾಗುತ್ತದೆ ಎಂದರು.

ದೇವಾಲಯ ಉದ್ಘಾಟನೆ ಮಾಡಿದ ಪ್ರವಾಸೋದ್ಯಮ ಹಾಗೂ ಪರಿಸರ ಖಾತೆ ಸಚಿವ ಸಿ.ಪಿ. ಯೋಗೇಶ್ವರ್ ಮಾತನಾಡಿ, ದೇಶದ ಹಿಂದೂ ಸಮುದಾಯದ ಶ್ರದ್ಧಾಭಕ್ತಿಯ ಕೇಂದ್ರವಾಗಿ ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದು ಭಾರತೀಯರಿಗೆ ಹೆಮ್ಮೆಯ ವಿಚಾರವಾಗಿದೆ ಎಂದರು.

ಅರ್ಚಕರಹಳ್ಳಿ ಅಂಧರ ಶಾಲೆಯ ಅನ್ನದಾನೇಶ್ವರ ಸ್ವಾಮೀಜಿ, ಶ್ರೀಶೈಲ ಸ್ವಾಮೀಜಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎಲೇಕೇರಿ ರವೀಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆಲಗೆರೆ ಜಯರಾಮು, ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್, ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಂಪುರ ಮಲವೇಗೌಡ, ಆದಿಚುಂಚನಗಿರಿ ಮಹಾಸಂಸ್ಥಾನ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಅಕ್ಕೂರು ಶಿವರಾಮು, ಅಕ್ಕೂರು ಗ್ರಾ.ಪಂ ಅಧ್ಯಕ್ಷ ಅಶೋಕ್, ಸದಸ್ಯ ಶಿವನಂಜೇಗೌಡ, ರಾಜು, ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೃಷ್ಣೇಗೌಡ, ಮುಖಂಡರಾದ ಅಂಗಡಿ ರಾಮೇಗೌಡ, ಕೆಂಚೇಗೌಡ, ಆನಂದಸ್ವಾಮಿ, ರಾಜೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.