
ಮಾಗಡಿ (ರಾಮನಗರ): ‘ರಂಗಭೂಮಿಗೆ ಅಗಾಧವಾದ ಶಕ್ತಿ ಇದೆ. ಸಮಾಜದಲ್ಲಿರುವ ಅವ್ಯವಸ್ಥೆ ಮತ್ತು ಹಳಿ ತಪ್ಪುವ ಆಡಳಿತದ ವಿರುದ್ದ ಎಲ್ಲಾ ಕಾಲದಲ್ಲೂ ರಂಗಭೂಮಿ ಪ್ರತಿರೋಧ ತೋರುತ್ತಾ ಬಂದಿದೆ. ಸಮಾಜವನ್ನು ಸದಾ ಜಾಗೃತವಾಗಿಡುವ ಜೊತೆಗೆ ಸಾಂಸ್ಕೃತಿಕ ವಲಯದ ಪ್ರತಿಭಟನೆಯ ಸಂಕೇತವಾಗಿ ರಂಗಭೂಮಿ ಕೆಲಸ ಮಾಡುತ್ತದೆ’ ಎಂದು ಸಾಹಿತಿ ಹಾಗೂ ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಜ್ಯೋತಿಪಾಳ್ಯದಲ್ಲಿರುವ ಅಜ್ಜಿಯ ಕಲಿಕಾ ಕೇಂದ್ರದಲ್ಲಿ (ಎಎಲ್‌ಸಿ) ನಡೆದ ಹತ್ತು ದಿನಗಳ ನಾಟಕ ರಚನೆ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಗ್ರಾಮೀಣ ಭಾರತದಲ್ಲಿ ರಂಗಭೂಮಿಯು ಮನರಂಜನೆಯ ಉದ್ದೇಶವನ್ನಷ್ಟೇ ಅಲ್ಲದೆ, ಅದನ್ನು ಮೀರಿದ ಆಶಯವನ್ನು ಈಡೇರಿಸುತ್ತಾ ಬಂದಿದೆ. ಸಮುದಾಯದ ಸ್ಮರಣೆಗೆ ರಂಗಭೂಮಿ ಪ್ರಬಲ ಶೈಕ್ಷಣಿಕ ಸಾಧನವಾಗಿ’ ಎಂದರು.
‘ಮೌಖಿಕ ಸಂಪ್ರದಾಯಗಳು ಶ್ರೀಮಂತವಾಗಿದ್ದರೂ ನಗರೀಕರಣದಿಂದ ಹೆಚ್ಚುತ್ತಿರುವ ಬೆದರಿಕೆಗೆ ಒಳಗಾದ ಮಾಗಡಿ ತರಹದ ಪ್ರದೇಶಗಳಲ್ಲಿ ರಂಗಭೂಮಿ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಪರಂಪರೆ ಮತ್ತು ಗಾದೆಗಳ ಬಳಕೆಗೆ ಆದ್ಯತೆ ನೀಡುವ ಮೂಲಕ, ಶಿಬಿರಾರ್ಥಿಗಳ ಭಾಷಾ ಗುರುತನ್ನು ಈ ಕಾರ್ಯಾಗಾರ ಮೌಲ್ಯೀಕರಿಸಿದೆ’ ಎಂದು ಹೇಳಿದರು.
‘ಗ್ರಾಮೀಣ ಪ್ರದೇಶಗಳಲ್ಲಿ ಹದಿಹರೆಯದವರು ಅಪರಾಧ ಪ್ರಪಂಚದ ಕಡೆಗೆ ಆಕರ್ಷಿತರಾಗುತ್ತಿರುವ ಪ್ರವೃತ್ತಿ, ಅದಕ್ಕೆ ಕಾರಣಗಳ ಅರಿವು, ಸೃಜನಶೀಲ ಪರಿಹಾರ, ಯುವಜನರಿಗೆ ತಮ್ಮ ಹತಾಶೆಗಳು ಮತ್ತು ಶಕ್ತಿಯನ್ನು ರಚನಾತ್ಮಕವಾಗಿ ವ್ಯಕ್ತಪಡಿಸಲು ಅವರನ್ನು ಬೆಂಬಲಿತ ಸಮುದಾಯ ರಚನೆಗೆ ಸಂಯೋಜಿಸಲು ಈ ಕಾರ್ಯಾಗಾರ ವೇದಿಕೆ ನೀಡಿದೆ’ ಎಂದು ತಿಳಿಸಿದರು.
ಜಾನಪದ ಮತ್ತು ಸಾಮಾಜಿಕ ವಾಸ್ತವತೆಯನ್ನು ಬೆಸೆಯುವ ಆಶಯದ ಕಾರ್ಯಾಗಾರವು, ಎರಡು ವಿಭಿನ್ನ ಪ್ರಪಂಚಗಳನ್ನು ಸಂಯೋಜಿಸುವ ಹೊಸ ನಾಟಕಗಳನ್ನು ರಚಿಸುವ ಸವಾಲಿನ ಉದ್ದೇಶದೊಂದಿಗೆ ಶುರುವಾಯಿತು. ಮಕ್ಕಳಿಂದಿಡಿದು ವಯಸ್ಕರವರೆಗೆ ವಿವಿಧ ವೃತ್ತಿ ಮತ್ತು ಶೈಕ್ಷಣಿಕ ಹಿನ್ನೆಲೆಯವರು ಕಾರ್ಯಾಗಾರದಲ್ಲಿದ್ದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಕಥೆಗಾರ ದಯಾನಂದ, ನಾಟಕಕಾರರಾದ ಟಿ.ಎಚ್. ಲವಕುಮಾರ್, ಸತೀಶ್ ತಿಪಟೂರು, ಲಕ್ಷ್ಮಣ್ ಕೆ.ಪಿ, ಜಾನಪದ ಕಲಾವಿದರಾದ ಸೋಬಾನೆ ಗಂಗಮ್ಮ, ಸೋಬಾನೆ ರಾಮಯ್ಯ, ಜಾನಪದ ವಿದ್ವಾಂಸ ಡಾ. ಎಂ. ಬೈರೇಗೌಡ, ನಟ ದುನಿಯಾ ವಿಜಯ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು, ಶಿಬಿರಾರ್ಥಿಗಳ ಜೊತೆ ಸಂವಾದ ನಡೆಸಿದರು. ಕಲಾವಿದರು ಕಲಾ ಪ್ರದರ್ಶನ ನೀಡಿದರು.
ಸಮಾರೋಪ ಸಮಾರಂಭದ ದಿನವು ಎರಡು ಹಣ್ಣಿನ ಸಸಿಗಳನ್ನು ನೆಡುವುದರೊಂದಿಗೆ ಶುರುವಾಗಿ, ಬೆಳವಣಿಗೆ ಮತ್ತು ನಿರಂತರತೆಯನ್ನು ಸಂಕೇತಿಸುವುದರೊಂದಿಗೆ ಮುಕ್ತಾಯವಾಯಿತು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು ಇದ್ದರು.
ದೇಶಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಹಾಶ್ಮಿ ಅವರ ಕುಟುಂಬವು ನಮ್ಮ ನೆಲದಲ್ಲಿ ಎಎಲ್‌ಸಿ ಮೂಲಕ ಮಾಡುತ್ತಿರುವ ಕೆಲಸವು ಕನ್ನಡದ ಸೆಳೆತ ಮತ್ತು ಶಕ್ತಿಗೆ ಸಾಕ್ಷಿಯಾಗಿದೆ. ಇದು ಈ ನೆಲದ ಪುಣ್ಯವೂ ಹೌದು –ಡಾ. ಎಂ. ಬೈರೇಗೌಡ ಜಾನಪದ ವಿದ್ವಾಂಸ
ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಹರಿದು ಬಂದಿರುವ ಸೋಬಾನೆ ಒಗಟು ಲಾಲಿಪದ ಸೇರಿದಂತೆ ನಮ್ಮ ನೆಲದ ಜಾನಪದ ಕಲಾ ಸಂಪತ್ತನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಯುವಜನರ ಮೇಲಿದೆ– ಸೋಬಾನೆ ರಾಮಯ್ಯ ಜಾನಪದ ಕಲಾವಿದ
ಕನ್ನಡ ನೆಲವು ಸ್ಪೂರ್ತಿಯ ಸೆಲೆಯಾಗಿ ಧನಾತ್ಮಕ ಶಕ್ತಿಯನ್ನು ತುಂಬುತ್ತದೆ. ಸಾಂಸ್ಕೃತಿಕ ಕ್ಷೇತ್ರವನ್ನು ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಎಎಲ್‌ಸಿಯು ಮತ್ತಷ್ಟು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲಿದೆ –ಶಬ್ನಮ್ ಹಾಶ್ಮಿ ಟ್ರಸ್ಟಿ ಅಜ್ಜಿ ಕಲಿಕಾ ಕೇಂದ್ರ
ನಟ ದುನಿಯಾ ವಿಜಯ್ ಸಂವಾದ
ಸಿನಿಮಾ ನಟ ದುನಿಯಾ ವಿಜಯ್ ಅವರು ಇತ್ತೀಚೆಗೆ ಕಾರ್ಯಾಗಾರಕ್ಕೆ ಅಚ್ಚರಿಯ ಭೇಟಿ ನೀಡಿದರು. ಕೋಟಿಗಾನಹಳ್ಳಿ ರಾಮಯ್ಯ ಮತ್ತು ಶಬ್ನಮ್ ಹಾಶ್ಮಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಅವರು ನಂತರ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು. ರಂಗಭೂಮಿ ಹಾಗೂ ಸಿನಿಮಾ ರಂಗದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಅವರೊಂದಿಗೆ ‘ಲ್ಯಾಂಡ್ ಲಾರ್ಡ್’ ಸಿನಿಮಾ ನಿರ್ದೇಶಕ ಜಡೇಶ್ ಹಂಪಿ ಸಹ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.