ADVERTISEMENT

ಒಳಚರಂಡಿ ಅವ್ಯವಸ್ಥೆ: ಸ್ಥಳೀಯರ ಪ್ರತಿಭಟನೆ

ದೇವಸ್ಥಾನದ ಮುಂದೆಯೇ ಹೊಲಸು ನೀರಿನ ಹರಿವಿಗೆ ಬೇಸರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 12:20 IST
Last Updated 27 ಏಪ್ರಿಲ್ 2019, 12:20 IST
ಪ್ರತಿಭಟನೆಯಿಂದ ಎಚ್ಚೆತ್ತ ನಗರಸಭೆ ಸಿಬ್ಬಂದಿ ಒಳಚರಂಡಿ ದುರಸ್ಥಿ ಕಾರ್ಯ ನಡೆಸಿದರು
ಪ್ರತಿಭಟನೆಯಿಂದ ಎಚ್ಚೆತ್ತ ನಗರಸಭೆ ಸಿಬ್ಬಂದಿ ಒಳಚರಂಡಿ ದುರಸ್ಥಿ ಕಾರ್ಯ ನಡೆಸಿದರು   

ರಾಮನಗರ: ಒಳಚರಂಡಿ ಅವ್ಯವಸ್ಥೆ ಖಂಡಿಸಿ 25–26 ನೇ ವಾರ್ಡಿನ ನಿವಾಸಿಗಳು ಗೀತಾಮಂದಿರ ಬಡಾವಣೆಯ ಪಂಚಮುಖಿ ಆಂಜನೇಯ ದೇವಸ್ಥಾನದ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.

ದೇವಸ್ಥಾನಕ್ಕೆ ಹೊಂದಿಕೊಂಡಂತೆ ರಾಮನಗರ–ಜಾಲಮಂಗಲ ರಸ್ತೆಯಲ್ಲಿ ಒಳಚರಂಡಿ ಮ್ಯಾನ್‌ಹೋಲ್‌ನಿಂದ ನೀರು ಹೊರ ಚೆಲ್ಲುತ್ತಲೇ ಇದೆ. ಕಳೆದ ಒಂದು ವಾರದಿಂದ ಈ ಸಮಸ್ಯೆ ಇದ್ದರೂ ನಗರಸಭೆಯ ಸಿಬ್ಬಂದಿ ದುರಸ್ತಿಗೆ ಮುಂದಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

‘ದೇವಸ್ಥಾನದ ಸುತ್ತಮುತ್ತ ಎರಡು ಕಡೆ ಯುಜಿಡಿ ಮ್ಯಾನ್‌ಹೋಲ್ ತೆರೆದುಕೊಂಡಿದೆ. ಈ ಬಗ್ಗೆ ಜಲಮಂಡಳಿ ಹಾಗೂ ನಗರಸಭೆಯ ಅಧಿಕಾರಿಗಳಿಗೆ ವಾರದ ಹಿಂದೆಯೇ ಮಾಹಿತಿ ನೀಡಿದ್ದೆವು. ನಗರಸಭೆ ಆಯುಕ್ತರಿಗೆ ಕಳೆದ ಮಂಗಳವಾರ ದೂರವಾಣಿ ಮೂಲಕ ತಿಳಿಸಿದೆವು. ಆಗ ಕೆಲವರು ಬಂದು ಮ್ಯಾನ್‌ಹೋಲ್‌ ಸುತ್ತ ಅಗೆದು ಹೋದರು. ಆದರೆ ಸಮಸ್ಯೆ ಬಗೆಹರಿಸಿಲ್ಲ’ ಎಂದು ದೂರಿದರು.

ADVERTISEMENT

‘ಈ ಹಿಂದೆ ಇಲ್ಲಿ ನಗರಸಭೆ ಸದಸ್ಯರಾದವರಿಗೆ ಹೇಳಿಯೂ ಪ್ರಯೋಜನ ಇಲ್ಲ. ಈಗ ವಾರ್ಡಿನ ಮೀಸಲಾತಿ ಬದಲಾವಣೆ ಆಗಿರುವ ಕಾರಣ ಅವರು ಇತ್ತ ತಲೆ ಹಾಕುತ್ತಿಲ್ಲ. ಅಧಿಕಾರಿಗಳು ಸ್ಪಂದಿಸುವುದಿಲ್ಲ. ಶಾಸಕರು ಇದ್ದೂ ಇಲ್ಲದಂತೆ ಇದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇವಸ್ಥಾನದ ಮುಂಭಾಗದ ಮ್ಯಾನ್‌ಹೋಲ್‌ ಬಾಯ್ತೆರೆದು 20 ದಿನಗಳಾಗಿವೆ. ಅದೇ ನೀರು ರಸ್ತೆಯಲ್ಲಿ ಹರಿಯುತ್ತದೆ. ನಿತ್ಯ ದೇಗುಲಕ್ಕೆ ಬರುವ ಭಕ್ತರು ಇದೇ ಹೊಲಸು ನೀರು ತುಳಿದುಕೊಂಡು ಒಳಗೆ ಹೋಗುವ ಪರಿಸ್ಥಿತಿ ಇದೆ’ ಎಂದು ದೂರಿದರು.

‘ಕೂಡಲೇ ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಸ್ಥಳೀಯರಾದ ರಮೇಶ್‌, ಷಡಕ್ಷರಿ, ಕುಮಾರ್, ರವಿ, ದೇವರಾಜು. ಭಾಗ್ಯಮ್ಮ, ಸಿದ್ದಪ್ಪ, ಕೃಷ್ಣ, ರತ್ನಮ್ಮ ಇದ್ದರು.

ಸ್ಥಳಕ್ಕೆ ಬಂದ ಸಿಬ್ಬಂದಿ

ಪ್ರತಿಭಟನೆಯ ಸುದ್ದಿ ತಿಳಿಯುತ್ತಲೇ ನಗರಸಭೆಯ ಸ್ವಚ್ಛತಾ ಸಿಬ್ಬಂದಿ ಜಟ್ಟಿಂಗ್‌ ಯಂತ್ರದೊಂದಿಗೆ ಸ್ಥಳಕ್ಕೆ ಧಾವಿಸಿದರು. ಯಂತ್ರಗಳ ಪೈಪ್‌ಗಳನ್ನು ಒಳ ತೂರಿಸಿ ಕಟ್ಟಿಕೊಂಡ ಚರಂಡಿ ದುರಸ್ತಿ ಕಾರ್ಯ ಆರಂಭಿಸಿದರು. ಇದರಿಂದ ಮುಖ್ಯರಸ್ತೆಯಲ್ಲಿ ಹೊಲಸು ನೀರು ಹರಿಯುವುದು ತಪ್ಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.