ಮಾಗಡಿ: ‘ನಮ್ಮ ನೀರು ನಮ್ಮ ಹಕ್ಕು’ ನಮ್ಮ ಪಾಲಿನ ನೀರನ್ನು ನಮಗೆ ಕೊಡಬೇಕೆಂದು ಒತ್ತಾಯಿಸಿ ಮಾಗಡಿ ತಾಲ್ಲೂಕಿನ ವೀರಶೈವ ಲಿಂಗಾಯಿತ ಮಠದ ಸ್ವಾಮೀಜಿಗಳು ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಶರತ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಕೆಂಪೇಗೌಡ ಪ್ರತಿಮೆ, ಬಸವೇಶ್ವರ ಸ್ವಾಮಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟ್ಟಣದ ಡೂಮ್ ಲೈಟ್ ವೃತ್ತದಿಂದ ತಾಲ್ಲೂಕು ಕಚೇರಿವರೆಗೂ ವಿವಿಧ ಮಠದ ಸ್ವಾಮೀಜಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಹೇಮಾವತಿ ನೀರು ವಿರೋಧ ಮಾಡುತ್ತಿರುವ ತುಮಕೂರಿನ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಪಾಲಿನ ಮುಕ್ಕಾಲು ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಕೂಡಲೇ ಆರಂಭಿಸುವಂತೆ ಒತ್ತಾಯಿಸಿದರು.
ಚಕ್ರಬಾವಿ ಮರಳು ಸಿದ್ದೇಶ್ವರ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮಾಗಡಿಗೆ ನೀರು ಕೊಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವುದು ಮೂರ್ಖತನ. ಪ್ರಕೃತಿ ಕೊಟ್ಟಿರುವ ನೀರನ್ನು ಇನ್ನೊಬ್ಬರಿಗೆ ಹಂಚಿಕೊಂಡು ಸ್ನೇಹದಿಂದ ಇರಬೇಕು. ಹೇಮಾವತಿ ನೀರು ನಮಗೂ ಸೇರಿದ್ದು ಅದನ್ನು ಕೊಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವುದು ಸರಿಯಲ್ಲ. ಹಾಗಾಗಿ ಕೂಡಲೇ ಅಧಿಕಾರಿಗಳು ಮಧ್ಯಪ್ರವೇಶಿ ಕಾಮಗಾರಿ ಪೂರ್ಣಗೊಳಿಸಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಜಗಣ್ಣಯ್ಯ ಮಠ ಚನ್ನಬಸವರಾಜ ಸ್ವಾಮೀಜಿ ಮಾತನಾಡಿ, ನಮ್ಮ ಪಾಲಿನ ನೀರನ್ನು ಮಾತ್ರ ನಾವು ಕೇಳುತ್ತಿದ್ದೇವೆ. ತುಮಕೂರು ಪಾಲಿನ ನೀರನ್ನು ಕೇಳುತ್ತಿಲ್ಲ. ಹಾಗಾಗಿ ಕಾಮಗಾರಿ ಪೂರ್ಣಗೊಳಿಸಿ ತಾಲ್ಲೂಕಿನ ಕೆರೆಗಳನ್ನು ತುಂಬಿಸಿ ಪ್ರಾಣಿ, ಪಕ್ಷಿಗಳ ನೀರಿನ ಬವಣೆ ನೀಗಿಸುವ ಕೆಲಸವಾಗಲಿ ಎಂದರು.
ಗದ್ದಿಗೆ ಮಠದ ಮಹಾಂತೇಶ್ವರ ಸ್ವಾಮೀಜಿ, ಜಡೇದೇವರ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ಬಂಡೆಮಠದ ಮಹಾಲಿಂಗ ಸ್ವಾಮೀಜಿ, ಗುಮ್ಮಸಂದ್ರದ ಚಂದ್ರಶೇಖರ ಸ್ವಾಮೀಜಿ ಹೇಮಾವತಿ ಯೋಜನೆ ಅನುಷ್ಠಾನಕ್ಕಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿ ಹೇಮಾವತಿ ನೀರಿಗಾಗಿ ಬೆಂಬಲ ವ್ಯಕ್ತಪಡಿಸಿದರು.
ವೀರಶೈವ ಲಿಂಗಾಯಿತ ಸಮಾಜದ ಹಲವು ಮುಖಂಡರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.