ADVERTISEMENT

ಕುಡಿಯುವ ನೀರು ಪೋಲು– ದೂರು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 9:15 IST
Last Updated 5 ಡಿಸೆಂಬರ್ 2019, 9:15 IST
ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದ ಕೊಳವೆ ಮಾರ್ಗ ಒಡೆದು ಪೋಲಾಗುತ್ತಿರುವ ನೀರು.
ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದ ಕೊಳವೆ ಮಾರ್ಗ ಒಡೆದು ಪೋಲಾಗುತ್ತಿರುವ ನೀರು.   

ಮಾಗಡಿ: ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಾಗುತ್ತಿರುವ ಕೊಳವೆಮಾರ್ಗದ ಮಂಚನಬೆಲೆ ಮತ್ತು ವೀರೇಗೌಡನ ದೊಡ್ಡಿಯ ನಡುವೆ ಒಡೆದಿದ್ದು 4 ದಿನಗಳಿಂದಲೂ ನೀರು ಪೋಲಾಗುತ್ತಿದೆ ಎಂದು ಮಂಚನಬೆಲೆ ಮುಖಂಡ ಸುನಿಲ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಹುಕೋಟಿ ವೆಚ್ಚದಲ್ಲಿ ಮಂಚನಬೆಲೆ ಜಲಾಶಯದಿಂದ 60 ಅಡಿ ಆಳದಿಂದ ವಿದ್ಯುತ್‌ ಪಂಪ್‌ ಮೂಲಕ ನೀರನ್ನು ಮೇಲೆತ್ತಿ 18 ಕಿ.ಮೀ ದೂರದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮಾರ್ಗದ ಮಧ್ಯೆ ಗುಡ್ಡಹಳ್ಳಿ, ಜೋಡುಗಟ್ಟೆ ಇತರ ಮೂರು ಕಡೆಗಳಲ್ಲಿ ಪೈಪ್‌ ಒಡೆದು ಭಾರಿ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಕಾವೇರಿ ನೀರಾವರಿ ಅಭಿವೃದ್ಧಿ ನಿಗಮ ಮತ್ತು ಪುರಸಭೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಪೋಲಾಗುತ್ತಿರುವ ನೀರನ್ನು ನಿಲ್ಲಿಸುವತ್ತ ಗಮನ ಹರಿಸಿಲ್ಲ ಎಂದರು. ಮುಖಂಡರಾದ ಜಗದೀಶ್‌, ಉಮೇಶ್‌ ಇದ್ದರು.

ದೂರು: ಪುರಸಭೆಯ ಎಂಜಿನಿಯರ್‌ ಪ್ರಶಾಂತ ಶೆಟ್ಟಿ ಮಾತನಾಡಿ, ಮಂಚನಬೆಲೆಯಿಂದ ಮಾಗಡಿ ವರೆಗಿನ ಕುಡಿಯುವ ನೀರು ಸರಬರಾಜು ಕೊಳವೆಮಾರ್ಗದ ಪೈಪ್‌ಗಳನ್ನು ತೂತು ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಮಂಚನಬೆಲೆ, ದಬ್ಬಗುಳಿ, ವೀರೇಗೌಡನ ದೊಡ್ಡಿ, ನಾಯಕನ ಪಾಳ್ಯದ ಗೇಟ್‌, ಗುಡ್ಡಹಳ್ಳಿ ಮದ್ಯೆ ದನಕರು, ಕುರಿಮೇಕೆಗಳಿಗೆ ನೀರು ಕುಡಿಸಲು ಹಳ್ಳಿಗಳವರು ಪೈಪ್‌ಗಳನ್ನು ತೂತು ಮಾಡಿರುವುದು ನೀರು ಪೋಲಾಗಲು ಕಾರಣವಾಗಿದೆ. ಪೋಲಾಗುತ್ತಿರುವ ನೀರು ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವೇತನ: ಮಂಚನಬೆಲೆ ಜಲಾಶಯದಿಂದ ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿರುವ ಹೊರಗುತ್ತಿಗೆ ನೀರುಗಂಟಿಗಳಿಗೆ 7 ತಿಂಗಳುಗಳಿಂದ ವೇತನ ನೀಡಿಲ್ಲ. ವೇತನ ನೀಡುವ ತನಕ ಸೋರುವ ನೀರು ನಿಲ್ಲಿಸಲು ಹೋಗುವುದಿಲ್ಲ ಎಂದು ಹೊರಗುತ್ತಿಗೆ ನೌಕರರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.