ADVERTISEMENT

ಮಹಿಳೆ ಆತ್ಮಹತ್ಯೆ, ವರದಕ್ಷಿಣಿ ಕಿರುಕುಳದ ದೂರು

ಕೊಲೆ ಮಾಡಿ ನೇಣು ಹಾಕಿದ ಗಂಡ, ಅತ್ತೆ, ಮೈದುನ– ಮೃತಳ ತಂದೆ ದೂರು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 13:43 IST
Last Updated 11 ಮಾರ್ಚ್ 2019, 13:43 IST

ಕನಕಪುರ: ಗಂಡ, ಅತ್ತೆ, ಮೈದುನ ಸೇರಿ ತಮ್ಮ ಮಗಳಿಗೆಮೊದಲಿನಿಂದಲೂ ಕಿರುಕುಳ ನೀಡುತ್ತಿದ್ದರು. ಕೊನೆಗೆ, ಕೊಲೆ ಮಾಡಿ ನಂತರ ನೇಣು ಹಾಕಿದ್ದಾರೆಂದು ಆರೋಪಿಸಿ ಮೃತರ ತಂದೆ ದೂರು ನೀಡಿರುವುದು ತಾಲ್ಲೂಕಿನ ಅಣೇದೊಡ್ಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಹಾರೋಹಳ್ಳಿ ಹೋಬಳಿ ಅಣೇದೊಡ್ಡಿ ಗ್ರಾಮದ ದೇವರಾಜು ಅವರ ಪತ್ನಿ ಲಾವಣ್ಯ (23) ಮೃತಪಟ್ಟ ಮಹಿಳೆ. ಸೋಮವಾರ ಬೆಳಿಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಂಬಂಧ ಅವರ ತಂದೆ ಶಿವಲಿಂಗಯ್ಯ ತಮ್ಮ ಮಗಳ ಕೊಲೆಯಾಗಿದೆ ಎಂದು ಹಾರೋಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ರಾಮನಗರ ತಾಲ್ಲೂಕು ಬಿಡದಿ ಹೋಬಳಿ ಕೆಂಪಯ್ಯನಪಾಳ್ಯದ ಶಿವಲಿಂಗಯ್ಯ ಎಂಬುವರ ಮಗಳಾದ ಲಾವಣ್ಯ ಅವರನ್ನು 5 ವ‍ರ್ಷಗಳ ಹಿಂದೆ ಹಾರೋಹಳ್ಳಿ ಹೋಬಳಿ ಅಣೇದೊಡ್ಡಿ ಗ್ರಾಮದ ದೇವರಾಜು ಅವರಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು.

ADVERTISEMENT

ಇವರಿಗೆ 3 ವರ್ಷದ ಒಂದು ಹೆಣ್ಣು ಮಗುವಿದೆ. ಆದರೆ ಕುಟುಂಬದಲ್ಲಿ ವರದಕ್ಷಿಣೆ ಸಂಬಂಧ ಲಾವಣ್ಯ ಅವರಿಗೆ ಆಗಾಗ ಅವರ ಅತ್ತೆ, ಮೈದುನ ಮತ್ತು ಗಂಡ ಕಿರುಕುಳ ನೀಡುತ್ತಿದ್ದರು. ಇಂದು ಕೊಲೆ ಮಾಡಿ ಯಾರಿಗೂ ಅನುಮಾನ ಬರಬಾರದೆಂದು ಮನೆಯಲ್ಲೇ ನೇಣು ಬಿಗಿದಿದ್ದಾರೆ ಎಂದು ಶಿವಲಿಂಗಯ್ಯ ನೀಡಿರುವ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಸೋಮವಾರ ಬೆಳಿಗ್ಗೆ ಲಾವಣ್ಯ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅದೇ ಗ್ರಾಮದವರು ತಮಗೆ ಮಾಹಿತಿ ನೀಡಿದರು. ಹಾರೋಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದೇನೆ. ಮೂವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ನ್ಯಾಯ ಒದಗಿಸಬೇಕು’ ಎಂದು ಶಿವಲಿಂಗಯ್ಯ ಒತ್ತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್‌ ಕುನಾಲ್‌.ಕೆ ಮತ್ತು ಹಾರೋಹಳ್ಳಿ ಸಬ್‌‌ ಇನ್‌ಸ್ಪೆಕ್ಟರ್‌ ಧರ್ಮೇಗೌಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಹಜರು ಮಾಡಿದ್ದಾರೆ.

‘ನಾವು ಹೋಗುವ ಮುನ್ನವೇ ಮೃತದೇಹವನ್ನು ಮನೆಯ ಬಾಗಿಲು ಒಡೆದು ಹೊರಗಡೆ ತೆಗೆಯಲಾಗಿತ್ತು. ಮನೆಯವರನ್ನು ವಿಚಾರಿಸಿದಾಗ ಬೀಗ ಹಾಕಿ ನೇಣು ಬಿಗಿದುಕೊಂಡಿರುವುದು ಗೊತ್ತಾಗಿ ಬದುಕಿಸುವ ಪ್ರಯತ್ನದಿಂದ ಗ್ರಾಮಸ್ಥರ ಸಮ್ಮುಖದಲ್ಲಿ ಬೀಗ ಒಡೆದು ಒಳ ಹೋಗಿದ್ದೇವೆ.ನೇಣಿನಿಂದ ಕೆಳಗೆ ಅವರನ್ನು ಇಳಿಸಿದಾಗ ಸಾವನ್ನಪ್ಪಿರುವುದು ಗೊತ್ತಾಯಿತು ಎಂದು ದೇವರಾಜು ಮತ್ತು ಲಕ್ಷ್ಮಮ್ಮ ತಿಳಿಸಿದರು. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.