ADVERTISEMENT

ಅಭಿವೃದ್ಧಿಗೆ ಯುವಜನರ ಕೊಡುಗೆ ಮುಖ್ಯ: ರಜತ್.ಎಸ್.ಆರ್

ಉಚಿತ ಆರೋಗ್ಯ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 12 ಮೇ 2019, 13:29 IST
Last Updated 12 ಮೇ 2019, 13:29 IST
ಮಾಗಡಿ ವಾಸವಿ ಯುವಜನ ಸಂಘದ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪೀಪಲ್‌ ಟ್ರೀಆಸ್ಪತ್ರೆಯ ವೈದ್ಯ ಮಂಜುನಾಥ ರೋಗಿಗಳ ತಪಾಸಣೆ ನಡೆಸಿದರು
ಮಾಗಡಿ ವಾಸವಿ ಯುವಜನ ಸಂಘದ ವತಿಯಿಂದ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪೀಪಲ್‌ ಟ್ರೀಆಸ್ಪತ್ರೆಯ ವೈದ್ಯ ಮಂಜುನಾಥ ರೋಗಿಗಳ ತಪಾಸಣೆ ನಡೆಸಿದರು   

ಮಾಗಡಿ: ‘ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಇಲ್ಲ. ಬಡವರ ಆರೋಗ್ಯ ಸುಧಾರಣೆಗೆ ಪ್ರಾಮಾಣಿಕ ಸೇವೆ ಮಾಡುತ್ತೇವೆ’ ಎಂದು ವಾಸವಿ ಯುವಜನ ಸಂಘದ ಅಧ್ಯಕ್ಷ ರಜತ್.ಎಸ್.ಆರ್.ತಿಳಿಸಿದರು.

ವಾಸವಿ ಯುವಜನ ಸಂಘ ಹಾಗೂ ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆಯ ಸಹಯೋಗದಲ್ಲಿ ವಾಸವಿ ಜಯಂತಿ ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದುಡಿಮೆಯಲ್ಲಿ ತೊಡಗಿಸಿಕೊಳ್ಳಬೇಕು. ಯೋಗ ಧ್ಯಾನ, ಪೂಜೆಯ ಜತೆಗೆ ಸರಳ ವ್ಯಾಯಾಮ ಮಾಡುವುದರ ಮೂಲಕ ಆರೋಗ್ಯ ಸಂಪನ್ನರಾಗಬೇಕು. ಸಮಾಜದ ಸರ್ವತೋಮುಖ ಬೆಳವಣಿಗೆಯ ಜತೆಗೆ ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡು ಪರೋಪಕಾರ ಮಾಡುವುದೇ ನಮ್ಮ ಗುರಿಯಾಗಿದೆ’ ಎಂದು ಹೇಳಿದರು.

ADVERTISEMENT

‘ದೇಶದ ಅಭಿವೃದ್ಧಿಯಲ್ಲಿ ಯುವಜನತೆ ಪಾತ್ರ ಬಹಳ ಮುಖ್ಯ. ಯುವಕರು ಮೊಬೈಲ್, ಸಿನಿಮಾ, ಮದ್ಯಪಾನ, ಧೂಮಪಾನ ಇತರೆ ದುಷ್ಚಚಟಗಳಿಂದ ದೂರ ಇರಬೇಕು. ದೀನರ ಸೇವೆ, ಧಾರ್ಮಿಕ ಮತ್ತು ಆರೋಗ್ಯ ಸುಧಾರಣೆಯ ಬಗ್ಗೆ ಅರಿವು ಮೂಡಿಸಲು ಮುಂದಾಗುತ್ತೇವೆ. ಯುವಕರು ಇಳಿವಯಸ್ಸಿನ ಪೋಷಕರ ರಕ್ಷಣೆಯ ಕಡೆಗೆ ಹೆಚ್ಚಿನ ಗಮನಹರಿಸಬೇಕಿದೆ’ ಎಂದು ತಿಳಿಸಿದರು.

‘ಮಾನವೀಯತೆಗೆ ಆದ್ಯತೆ ನೀಡಲಾಗುವುದು. ಪರಿಸರ, ಜಲಮೂಲ, ಸ್ಮಾರಕಗಳ ರಕ್ಷಣೆಯ ಜತೆಗೆ ಮಹಿಳಾ ಜಾಗೃತಿ ಮತ್ತು ಬಡವರ ಆರೋಗ್ಯ ಸುಧಾರಣೆಗೆ ಆರೋಗ್ಯ ಶಿಬಿರಗಳ ಮೂಲಕ ನೆರವಾಗುವುದು ನಮ್ಮ ಮುಖ್ಯ ಉದ್ದೇಶವಾಗಿದೆ’ ಎಂದರು.

ಸಂಘದ ಕಾರ್ಯದರ್ಶಿ ಬಾಲಾಜಿ ಆನಂದ್ ಮಾತನಾಡಿ ‘ಸನಾತನ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲಾಗುವುದು’ ಎಂದರು.

ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಸ್.ಆರ್.ರಮೇಶ್ ಗುಪ್ತ ಮಾತನಾಡಿ ‘ವಾಸವಿ ಯುವಜನ ಸಂಘದವರು ಮಾಡುವ ಸಮಾಜ ಸೇವಾ ಕಾರ್ಯಗಳಿಗೆ ಬೆಂಬಲ ನೀಡಲಾಗುವುದು’ ಎಂದರು.

ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ಅಧ್ಯಕ್ಷ ಎಸ್.ಎನ್.ಶಭರೀಶ್ ‘ಮಾನವ ಸೇವೆಯೇ ಮಹಾದೇವನ ಸೇವೆ ಎಂಬುದು ವೈಶ್ಯ ಸಮುದಾಯದ ನಂಬಿಕೆ’ ಎಂದರು.

ಯುವಪರಿಷತ್ ಅಧ್ಯಕ್ಷ ಸಂದೀಪ್, ಪದಾಧಿಕಾರಿಗಳಾದ ಎಚ್.ಎಂ.ಸ್ವರೂಪ್, ಗೋವರ್ಧನ್, ಕೃಷ್ಣ.ಬಿ.ಎಸ್, ರಸ್ವಂತ್, ಪುನೀತ್, ಸುಮನ್, ಸುಹಾಸ್, ಅಮೃತ್, ರಾಹುಲ್, ರಂಜಿತ್, ಮೋಹಿತ್, ಅಜೆಯ್, ನಾಗಾರ್ಜುನ್, ಪೀಪಲ್ ಟ್ರೀ ಆಸ್ಪತ್ರೆ ಎಚ್.ಜಿ.ಮಂಜುನಾಥ್ ಮಾತನಾಡಿದರು. ರೋಗಿಗಳನ್ನು ತಪಾಸಣೆ ಮಾಡಿ, ಔಷಧಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.