ADVERTISEMENT

ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 20:31 IST
Last Updated 20 ನವೆಂಬರ್ 2018, 20:31 IST
ಇರ್ಫಾನ್
ಇರ್ಫಾನ್   

ಬೆಂಗಳೂರು: ಶಿವಾಜಿನಗರ ಬಳಿಯ ಹಳೇ ಸ್ಮಶಾನ ರಸ್ತೆಯಲ್ಲಿ ಇರ್ಫಾನ್ ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.

ಸ್ಥಳೀಯ ನಿವಾಸಿಯಾಗಿದ್ದ ಇರ್ಫಾನ್, ಅಕ್ವೇರಿಯಂ ಮಾರಾಟ ಮಳಿಗೆ ಇಟ್ಟುಕೊಂಡಿದ್ದರು. ರಾತ್ರಿ ಜಿಮ್‌ಗೆ ಹೋಗಿ ವಾಪಸ್‌ ಮನೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ.

‘ಹೆಲ್ಮೆಟ್‌ ಧರಿಸಿ ಒಂದೇ ಬೈಕ್‌ನಲ್ಲಿ ಬಂದಿದ್ದ ಮೂವರು, ನಡುರಸ್ತೆಯಲ್ಲೇ ಇರ್ಫಾನ್‌ ಅವರನ್ನು ಅಡ್ಡಗಟ್ಟಿದ್ದರು. ಮಾರಕಾಸ್ತ್ರಗಳಿಂದ ಮನಬಂದಂತೆ ಹೊಡೆದು ಪರಾರಿಯಾಗಿದ್ದಾರೆ’ ಎಂದು ಶಿವಾಜಿನಗರ ಪೊಲೀಸರು ಹೇಳಿದರು.

ADVERTISEMENT

‘ರಕ್ತದ ಮಡುವಿನಲ್ಲಿ ಬಿದ್ದಿದ್ದ ಇರ್ಫಾನ್, ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಪತ್ನಿ ಹಾಗೂ ಅವರ ಸಂಬಂಧಿಕರು ಸ್ಥಳಕ್ಕೆ ಬರುವಷ್ಟರಲ್ಲೇ ಇರ್ಫಾನ್‌ ಮೃತಪಟ್ಟಿದ್ದಾರೆ. ಕೊಲೆ ಬಗ್ಗೆ ಸಂಬಂಧಿಕರು ದೂರು ನೀಡಿದ್ದಾರೆ’ ಎಂದು ಹೇಳಿದರು.

‘ವೈಯಕ್ತಿಕ ಕಾರಣಕ್ಕಾಗಿ ಕೊಲೆ ನಡೆದಿರುವ ಶಂಕೆ ಇದೆ. ಆರೋಪಿಗಳ ಪತ್ತೆಗಾಗಿ, ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಕುತ್ತಿಗೆ ಕೊಯ್ದು ಮಹಿಳೆ ಹತ್ಯೆ

ದೊಡ್ಡ ಬಾಣಸವಾಡಿ ಮುಖ್ಯರಸ್ತೆಯಲ್ಲಿರುವ ಅಭಯ ರೆಡ್ಡಿ ಲೇಔಟ್‌ನ ಮನೆಯಲ್ಲಿ ಮೇಘನಾದೇವಿ (50) ಎಂಬುವರನ್ನು ಮಂಗಳವಾರ ಮಧ್ಯಾಹ್ನ ಕತ್ತು ಕೊಯ್ದು ಕೊಲೆ ಮಾಡಲಾಗಿದೆ.

ಸ್ಥಳೀಯ ನಿವಾಸಿಯಾಗಿದ್ದ ಮೇಘನಾದೇವಿ, ಸೇನೆ ಕಚೇರಿಯಲ್ಲಿ ಲಿಫ್ಟ್ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಕೃಷ್ಣಮೂರ್ತಿ ಎಂಬುವರ ಪತ್ನಿ.

’ಮನೆಯಿಂದ ಬೆಳಿಗ್ಗೆ ಹೊರಗಡೆ ಹೋಗಿದ್ದ ಕೃಷ್ಣಮೂರ್ತಿ, ಮಧ್ಯಾಹ್ನ 3.30 ಗಂಟೆ ಸುಮಾರಿಗೆ ವಾಪಸ್‌ ಬಂದಿದ್ದರು. ಅದೇ ವೇಳೆಯೇ ಮೇಘನಾದೇವಿ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಚೀರಾಡಿದ್ದರು. ನಂತರ ಮನೆಯಲ್ಲಿ ಸೇರಿದ್ದ ಸ್ಥಳೀಯರು, ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಮಹಿಳೆ ಒಬ್ಬಂಟಿಯಾಗಿದ್ದನ್ನು ನೋಡಿಕೊಂಡೇ ಮನೆಯೊಳಗೆ ನುಗ್ಗಿದ್ದ ದುಷ್ಕರ್ಮಿಗಳು, ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ಸಾ.ರಾ. ಗೋವಿಂದು ಮಗನ ವಿರುದ್ಧ ಕೇಸ್‌

ಮೂಡಲಪಾಳ್ಯದ ಹರೀಶ್ ಎಂಬುವರನ್ನು ಅಕ್ರಮ ಬಂಧನದಲ್ಲಿಟ್ಟು ಹಲ್ಲೆ ನಡೆಸಿದ ಆರೋಪದಡಿ ನಿರ್ಮಾಪಕ ಸಾ.ರಾ.ಗೋವಿಂದು ಅವರ ಪುತ್ರ ಅನೂಪ್‌ ಸೇರಿದಂತೆ ಮೂವರ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನಾಗಿರುವ ಹರೀಶ್ ನೀಡಿರುವ ದೂರಿನನ್ವಯ ಜೀವ ಬೆದರಿಕೆ (ಐಪಿಸಿ 506), ಅಪರಾಧ ಸಂಚು (ಐಪಿಸಿ 34), ದರೋಡೆ (ಐಪಿಸಿ 384),ಹಲ್ಲೆ (ಐಪಿಸಿ 323) ಹಾಗೂ ಅಕ್ರಮ ಬಂಧನ (ಐಪಿಸಿ 342) ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಪೊಲೀಸರು, ಆರೋಪಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಕಳುಹಿಸಿದ್ದಾರೆ.

‘ನ. 17ರಂದು ಸಂಜೆ ನನಗೆ ಕರೆ ಮಾಡಿದ್ದ ಅನೂಪ್, ಬಸವೇಶ್ವರ ನಗರಕ್ಕೆ ಬರಲು ಹೇಳಿದ್ದರು. ಕಾರಿನಲ್ಲಿ ಅಲ್ಲಿಗೆ ಹೋಗಿದ್ದೆ. ಅಲ್ಲಿದ್ದ ಅನೂಪ್ ಹಾಗೂ ಸತ್ಯ, ಕಾರಿನಲ್ಲಿ ನನ್ನನ್ನು ಬಲವಂತವಾಗಿ ಸದಾಶಿನಗರಕ್ಕೆ ಕರೆದೊಯ್ದರು. ಪ್ರಭಾಕರ್ ಎಂಬಾತ ಆಟೊದಲ್ಲಿ ನಮ್ಮ ಕಾರು ಹಿಂಬಾಲಿಸುತ್ತಿದ್ದ. ದಾರಿಮಧ್ಯೆಯೇ ಬಾಯಿಗೆ ಬಟ್ಟೆ ಕಟ್ಟಿ ಜೀವ ಬೆದರಿಕೆ ಹಾಕಿದ್ದರು. ನನ್ನ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ಮೊಬೈಲ್‌ ಕಿತ್ತುಕೊಂಡಿದ್ದರು. ಪೊಲೀಸರಿಗೆ ತಿಳಿಸಿದರೆ ಸಾಯಿಸುವುದಾಗಿ ಹೇಳಿ ಮೂಡಲಪಾಳ್ಯದಲ್ಲಿ ಬಿಟ್ಟು ಹೋಗಿದ್ದಾರೆ’ ಎಂದು ದೂರಿನಲ್ಲಿ ಹರೀಶ್‌ ತಿಳಿಸಿರುವುದಾಗಿ ಪೊಲೀಸರು ಹೇಳಿದರು.

ಪೊಲೀಸರು, ‘ಅನೂಪ್ ಅವರ ಬಳಿಯೇ ಹರೀಶ್‌, ಚಾಲಕರಾಗಿ ಕೆಲಸ ಮಾಡುತ್ತಿದ್ದರು. ವೇತನ ನೀಡದ ಕಾರಣಕ್ಕೆ ಕೆಲಸ ಬಿಟ್ಟಿದ್ದರು ಎಂದು ಗೊತ್ತಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.