ADVERTISEMENT

ಅಕ್ರಮ ತನಿಖೆಗೆ ಸದನ ಸಮಿತಿ ರಚನೆಗೆತೀರ್ಮಾನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2011, 5:45 IST
Last Updated 22 ಏಪ್ರಿಲ್ 2011, 5:45 IST
ಅಕ್ರಮ ತನಿಖೆಗೆ ಸದನ ಸಮಿತಿ ರಚನೆಗೆತೀರ್ಮಾನ
ಅಕ್ರಮ ತನಿಖೆಗೆ ಸದನ ಸಮಿತಿ ರಚನೆಗೆತೀರ್ಮಾನ   

ಶಿವಮೊಗ್ಗ: ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡ ಸಿಬ್ಬಂದಿಗೆ ಭವಿಷ್ಯನಿಧಿ ಹಣ ಬಾಕಿ ಉಳಿಸಿಕೊಂಡ ಹಾಗೂ ನಿಯಮ ಉಲ್ಲಂಘಿಸಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದ ಬಗ್ಗೆ ಸದನ ಸಮಿತಿ ರಚಿಸಿ, ಸಮಗ್ರ ತನಿಖೆ ನಡೆಸಲಾಗುವುದು ಎಂದು ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ತಿಳಿಸಿದರು.

ಜಿ.ಪಂ. ಕಚೇರಿ ಆವರಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡ ಸಿಬ್ಬಂದಿ ಭವಿಷ್ಯನಿಧಿ ಹಣ ಬಾಕಿ ಉಳಿಸಿಕೊಳ್ಳುವುದು ಅಕ್ಷಮ್ಯ ಅಪರಾಧ. ಇದಕ್ಕೆ ಆಯಾ ಇಲಾಖೆ ಅಧಿಕಾರಿಗಳೇ ನೇರ ಹೊಣೆ. ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೂಚಿಸಿದರು.

ಅಷ್ಟೇ ಅಲ್ಲ, ಕಾರ್ಮಿಕ ಆಯೋಗದಿಂದ ಪರವಾನಗಿ ಪಡೆದದ್ದಕ್ಕಿಂತ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದರೂ ಅದು ಕಾನೂನುಬಾಹಿರ. ಅಂತಹವರ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ರಚಿಸಲಾಗುವುದು. ನಿಯಮ ಉಲ್ಲಂಘಿಸಿ, ನೇಮಕ ಮಾಡಿಕೊಂಡ ಮ್ಯಾನ್‌ಪವರ್‌ ಏಜೆನ್ಸಿಗಳನ್ನು ನಿರ್ದಾಕ್ಷಿಣ್ಯವಾಗಿ ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ತಾಕೀತು ಮಾಡಿದರು.

ಅಧಿಕಾರಿಗಳ ತರಾಟೆಗೆ
ಇದಕ್ಕೂ ಮೊದಲು ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ ಈ ಬಗ್ಗೆ ವಿಷಯ ಪ್ರಸ್ತಾಪಿಸಿ, ಕಾರ್ಮಿಕ ಆಯೋಗದಿಂದ ಪಡೆದ ಮಾಹಿತಿ ಅನ್ವಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಸಿಬ್ಬಂದಿಗೆ ಭವಿಷ್ಯನಿಧಿ ಬಾಕಿ ಉಳಿಸಿಕೊಳ್ಳಲಾಗಿದೆ.

ಜತೆಗೆ ಈ ಏಜೆನ್ಸಿಗೆ 50ಸಿಬ್ಬಂದಿ ತೆಗೆದುಕೊಳ್ಳಲು ಮಾತ್ರ ಪರವಾನಗಿ ಇದೆ. ಆದರೆ, ಇಲ್ಲಿ 343ಜನರನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿಗಳೇ ಹೊಣೆ ಎಂದು ತರಾಟೆಗೆ ತೆಗೆದುಕೊಂಡರು.

ಇದು ಸಿಬ್ಬಂದಿಗೆ ಮಾಡಿದ ವಿಶ್ವಾಸದ್ರೋಹ. ಈ ಆರೋಪದ ಮೇರೆಗೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, ಜಾಮೀನುರಹಿತ ವಾರೆಂಟ್‌ ಹೊರಡಿಸಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, `ಈ ಹಿಂದೆ ಜಿ.ಪಂ. ಸದನ ಸಮಿತಿ ಸೂಚಿಸಿದ ಆದೇಶವನ್ನೂ ಪಾಲಿಸಿಲ್ಲ. ಆ ಮೂಲಕ ಜಿ.ಪಂ.ಗೆ ಅಗೌರವ ಮಾಡಿದ್ದು, ಕಾರ್ಮಿಕ ವಿರೋಧಿ ನಿಲುವು ಹೊಂದಿದ ಅಧಿಕಾರಿ ವಿರುದ್ಧ ಅಧಿಕಾರಿ ಮೇಲೆ ಕ್ರಮ ಅನಿವಾರ್ಯ~ ಎಂದು ಗುಡುಗಿದರು.

ಇದಕ್ಕೆ ದನಿಗೂಡಿಸಿದ ಜಿ.ಪಂ. ಸದಸ್ಯ ಈಸೂರು ಬಸವರಾಜಪ್ಪ, ಬಿಸಿಎಂ ಇಲಾಖೆಯಲ್ಲಿ ನಿಯಮ ಉಲ್ಲಂಘಿಸಿದ್ದು, ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ತಪ್ಪಿತಸ್ಥ ಅಧಿಕಾರಿಯನ್ನು ದೀರ್ಘಾವಧಿ ರಜೆಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ಕಡೆ ಉಲ್ಲಂಘನೆ
ಆಗ ಆಯನೂರು ಮಂಜುನಾಥ, ಮೆಡಿಕಲ್‌ ಕಾಲೇಜು, ನಗರಸಭೆ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ಇಲಾಖೆಗಳಲ್ಲೂ ಈ ನಿಯಮ ಉಲ್ಲಂಘಿಸಲಾಗಿದೆ. ಅಂತಹವರ ವಿರುದ್ಧ ಭವಿಷ್ಯನಿಧಿ ಇಲಾಖೆಗೆ ತನಿಖೆಗೆ ಒಪ್ಪಿಸಬೇಕು ಎಂದು ಅಧ್ಯಕ್ಷರಿಗೆ ತಿಳಿಸಿದರು.

ಇದಕ್ಕೂ ಮೊದಲು ಚರ್ಚೆಗೆ ಬಂದ ವಿದರ್ಭ ಪ್ಯಾಕೇಜ್‌ನಲ್ಲಿ ` ನೂರಾರು ಕೋಟಿ  ಅವ್ಯವಹಾರ ನಡೆದಿದ್ದು, ಈ ಪ್ರಕರಣ ಯಾವ ಹಂತದಲ್ಲಿದೆ ಎಂದು ಸದಸ್ಯ ಎಸ್‌.ಟಿ. ಕೃಷ್ಣೇಗೌಡ, ಅಧಿಕಾರಿಗಳನ್ನು ಕೇಳಿದರು.
ಈ ಸಂಬಂಧ ತನಿಖೆ ನಡೆಸಿ, ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವರದಿ ನೀಡಿದರೆ ಸಾಲದು, ` 900 ಕೋಟಿ ಅವ್ಯವಹಾರದ ಇಡೀ ಪ್ರಕರಣದ ತನಿಖೆಯನ್ನು ಈ ಹಿಂದೆ ತೀರ್ಮಾನಿಸಿದಂತೆ ಲೋಕಾಯುಕ್ತರಿಗೆ ಒಪ್ಪಿಸಬೇಕಾಗಿತ್ತು. ಈ ನಿಟ್ಟಿನಲ್ಲಿ ವಿಳಂಬ ಯಾಕೆ ಎಂದು ಪ್ರಶ್ನಿಸಿದರು. ಇದಕ್ಕೆ ಇತರ ಸದಸ್ಯರು ದನಿಗೂಡಿಸಿದರು.

ವರದಿ ಜಿಲ್ಲಾಧಿಕಾರಿ ಬಳಿ ಇದ್ದು, ಅವರೇ ಈ ಪ್ರಕರಣವನ್ನು ಲೋಕಾಯುಕ್ತರಿಗೆ ಒಪ್ಪಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಲು ಮುಂದಾದರು. ಆಗ, ಮಧ್ಯಪ್ರವೇಶಿಸಿದ ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ವಿನಾಕಾರಣ ವಿಳಂಬ ಸರಿ ಅಲ್ಲ. ಖುದ್ದಾಗಿ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ, ಲೋಕಾಯುಕ್ತರಿಗೆ ಒಪ್ಪಿಸುವಂತೆ ಒತ್ತಡ ತರುವುದಾಗಿ ಹೇಳಿದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಮಾತನಾಡಿ, ಮಲೆನಾಡಿನ ಪ್ರದೇಶದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಶಾಲೆಗಳನ್ನು ತೆರೆಯಲು ಉದ್ದೇಶಿಸಿದೆ ಎಂದು ಮಾಹಿತಿ ನೀಡಿದರು. ನಂತರ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಜಿ.ಪಂ. ಉಪಾಧ್ಯಕ್ಷ ಹುಣವಳ್ಳಿ ಗಂಗಾಧರಪ್ಪ, ಕಾರ್ಯ ನಿರ್ವಹಣಾಧಿಕಾರಿ ಎ.ಬಿ. ಹೇಮಚಂದ್ರ ಉಪಸ್ಥಿತರಿದ್ದರು.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.