ADVERTISEMENT

ಅಕ್ರಮ-ಸಕ್ರಮ ವಿಳಂಬ: ರೈತಸಂಘ ಖಂಡನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 9:05 IST
Last Updated 16 ಅಕ್ಟೋಬರ್ 2011, 9:05 IST

ಸೊರಬ: `ಮೆಸ್ಕಾಂನ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆ ಮಿತಿ ಮೀರಿದೆ. ಅವರನ್ನು ನಿಯಂತ್ರಣದಲ್ಲಿ ಇಡಲಾಗದ ಇಲಾಖೆ ಸಚಿವರು ರಾಜೀನಾಮೆ ನೀಡುವುದೇ ಲೇಸು~ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮಂಜುನಾಥಗೌಡ ಸಲಹೆ ನೀಡಿದರು.

ಅಕ್ರಮ ಸಕ್ರಮಕ್ಕೆ ಹತ್ತಾರು ವರ್ಷಗಳ ಹಿಂದೆ ಸಾವಿರಾರು ರೂಪಾಯಿ ಕಟ್ಟಿಸಿಕೊಂಡಿದ್ದರೂ, ಇಲಾಖೆ ಸಕ್ರಮ ಮಾಡಲು ಮುಂದಾಗಿಲ್ಲ ಎಂದು ಆರೋಪಿಸಿ ಸಂಘದ ತಾಲ್ಲೂಕು ಘಟಕ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ  ಅವರು ಮಾತನಾಡಿದರು.

1997ರಿಂದ 2005ರವರೆಗೆ ಪಂಪ್‌ಸೆಟ್ ಸಂಪರ್ಕದ ಸಕ್ರಮಕ್ಕೆ ರೈತರು ್ಙ 14ರಿಂದ 16 ಸಾವಿರ ಪಾವತಿಸಿ, ರಸೀದಿ ಇಟ್ಟುಕೊಂಡಿದ್ದಾರೆ. ಆದರೆ, ಸಕ್ರಮ ಈವರೆಗೆ ಆಗಿಲ್ಲ. ಈ ಕುರಿತು ಇಲಾಖೆಯಲ್ಲಿ ವಿಚಾರಿಸಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ. `ಸೀನಿಯಾರಿಟಿ ಬಂದಿಲ್ಲ, ರೀ ಎಸ್ಟಿಮೇಟ್ ಮಾಡಬೇಕು. ಸಾಮಗಿ ದರ ಹೆಚ್ಚಾಗಿದೆ~ ಎಂದು ಸಬೂಬು ನೀಡುತ್ತಾರೆ. ರೈತರನ್ನು ವಂಚನೆ ಮಾಡುತ್ತಿದ್ದಾರೆ. 10-15 ವರ್ಷಗಳ ಹಿಂದೆ ಹಣ ಕಟ್ಟಿಸಿಕೊಂಡು ಈಗ ಮೀನಾಮೇಷ ಎಣಿಸಿದರೆ ಅದಕ್ಕೆ ರೈತರು ಹೊಣೆಗಾರರೇ ಎಂದು ಪ್ರಶ್ನಿಸಿದರು. ಸಮರ್ಪಕ ಮಾಹಿತಿ ನೀಡದೇ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ ಎಂದರು.

ತಾಲ್ಲೂಕಿನ ಆನವಟ್ಟಿ, ಜಡೆ ಭಾಗಗಳಿಂದಲೇ ಸುಮಾರು 500 ಇಂತಹ ಪ್ರಕರಣಗಳು ಕಂಡು ಬಂದಿವೆ ಎಂದು ಘಟಕದ ಅಧ್ಯಕ್ಷ ಬಿ. ವೀರಭಧ್ರಗೌಡ ತಿಳಿಸಿದರು.

ಭತ್ತದ ಬೆಂಬಲ ಬೆಲೆ ತೀರಾ ಅವೈಜ್ಞಾನಿಕ ಆಗಿದ್ದು ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದರು.ಕುಬಟೂರಿನ ನಿಂಗಪ್ಪ ಮಾಸ್ತರ್ 2005ರಲ್ಲಿ ್ಙ 16.50 ಸಾವಿರ, ಬಸವಂತಪ್ಪ 2002ರಲ್ಲಿ 14.50 ಸಾವಿರ ಹಣ ಪಾವತಿ ಮಾಡಿರುವ ಬಗ್ಗೆ ರಶೀದಿ ಹಾಜರುಪಡಿಸಿದರು.

ವಿದ್ಯುತ್ ಪೂರೈಕೆ ವಿಚಾರದ್ಲ್ಲಲಿ ಸರ್ಕಾರದಿಂದ ಹಳ್ಳಿ-ನಗರಗಳ ಮಧ್ಯೆ ತಾರತಮ್ಯ ನೀತಿ ಮುಂದುವರೆಸಿದೆ. ರೈತರನ್ನು ಕತ್ತಲಲ್ಲಿ ಇಟ್ಟು, ಚಳುವಳಿಗಾರರನ್ನು ಜೈಲಿಗೆ ತಳ್ಳಲಾಗುತ್ತಿದೆ. ರೈತ ವಿರೋಧಿ ನೀತಿ ಮಿತಿ ಮೀರುತ್ತಿದೆ ಎಂದು ಆರೋಪಿಸಿದ ಮಂಜುನಾಥಗೌಡ, ಇದನ್ನು ಖಂಡಿಸಿ ಅ. 19ರ ಸಂಜೆ ಬೆಂಗಳೂರಿನ ರೈಲುನಿಲ್ದಾಣದಿಂದ ವಿಧಾನಸೌಧವರೆಗೆ ಸಂಘದ ವತಿಯಿಂದ `ಲಾಟೀನು ಮೆರವಣಿಗೆ~ ನಡೆಸಲಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ಸಂಘದ ಪದಾಧಿಕಾರಿಗಳು, ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.