ADVERTISEMENT

ಅಡಿಕೆಗೆ ಕೊಳೆ ರೋಗ: ರೈತ ಕಂಗಾಲು

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 8:25 IST
Last Updated 24 ಜೂನ್ 2013, 8:25 IST

ಸೊರಬ: ಮಳೆ-ಬಿಸಿಲಿನ ವೈಪರಿತ್ಯದಿಂದಾಗಿ , ತಾಲ್ಲೂಕಿನಾದ್ಯಂತ ಅಡಿಕೆ ಬೆಳೆಗಾರರಿಗೆ ಕೊಳೆ ಭೀತಿ ಎದುರಾಗಿದೆ.
ತಾಲ್ಲೂಕಿನಲ್ಲಿ ಮಳೆ ಬಂದ ನಂತರ ಕೆಲವೊತ್ತು ಬಿಸಿಲು ಆವರಿಸುವುದರಿಂದ ಅಡಿಕೆ ಬೆಳೆಗೆ ಕೊಳೆ ರೋಗದ ಸಮಸ್ಯೆಯಿಂದ ಗೊನೆಯಿಂದ ಅಡಿಕೆ ಉದುರುತ್ತಿದೆ. ತಾಲ್ಲೂಕಿನ ಹೊಸಬಾಳೆ, ನಿಸರಾಣಿ, ಮುಟುಗುಪ್ಪೆ, ಉಳವಿ, ಚಂದ್ರಗುತ್ತಿ, ಹರೀಶಿ, ಬೆನ್ನೂರು, ಹಳೇಸೊರಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಡಿಕೆ ತೋಟದಲ್ಲಿ ಈ ರೋಗ ವ್ಯಾಪಿಸಿದೆ.

ಮರದಲ್ಲಿ ಹಣ್ಣಾದ ಅಡಿಕೆ ಮಳೆಯಿಂದ ನೆಂದು ಬಿಸಿಲಿನ ತಾಪಕ್ಕೆ ಕೊಳೆತು ಗೊನೆಯಿಂದ ಉದುರುತ್ತಿದೆ. ಇದು ಅಡಿಕೆ ಬೆಳೆಗಾರರಿಗೆ ಸಮಸ್ಯೆಯಾಗಿ ಕಾಡುತ್ತಿದ್ದು, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಅಧಿಕ ಬಿಸಿಲಿನ ವಾತಾವರಣದಿಂದ ಅಡಿಕೆ ಮರದ ಗರಿಗಳು ಒಣಗುವುದರ ಜತೆಗೆ ಹಿಂಗಾರಕ್ಕೂ ಕುತ್ತು ಬಂದು ಅಡಿಕೆ ಫಸಲು ಕ್ಷೀಣಿಸಿತ್ತು. ಕಳೆದ ಮೇನಲ್ಲಿ ಸುರಿದ ಅಲ್ಪ ಮಳೆಗೆ ಬೆಳೆಗಾರರಿಗೆ ಒಂದಿಷ್ಟು ನೆಮ್ಮದಿ ತಂದಿತ್ತು. ಆದರೆ, ಕಳೆದ 15 ದಿನಗಳಿಂದ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಡಿಕೆ ಬೆಳೆಗಾರರನ್ನೇ ಚಿಂತಿಸುವಂತೆ ಮಾಡಿದೆ. ಅಲ್ಲದೇ,  ಸರ್ಕಾರ ಗುಟ್ಕಾ ನಿಷೇಧ ಮಾಡಿರುವುದು  ರೈತರ ಬದುಕಿಗೆ ಬರೆ ಎಳೆದಂತಾಗಿದೆ.

ತಾಲ್ಲೂಕಿನಲ್ಲಿ ಮಳೆ-ಬಿಸಿಲಿನ ವಾತಾವರಣವಿದ್ದು, ಅಡಿಕೆ ಕೊಳೆ  ರೋಗ ಬರುವ ಸಂಭವ ಹೆಚ್ಚಾಗಿರುತ್ತದೆ. ರೈತರು ಮುನ್ನೆಚ್ಚರಿಕೆ ಕ್ರಮವಾಗಿ ಬೋರ್ಡ್ ದ್ರಾವಣವನ್ನು ಪ್ರತಿಯೊಂದು ಗಿಡದ ಹಿಂಗಾರ, ಕಾಯಿ, ಎಲೆ ಸುಳಿಭಾಗ ಸಂಪೂರ್ಣ ತೊಯ್ಯವ ಹಾಗೆ ಸಿಂಪರಣೆ ಮಾಡಬೇಕು.

ನಂತರ ಹವಾಮಾನ ಆಧರಿಸಿ 40-45 ದಿನಗಳ ಅಂತರದಲ್ಲಿ ಸಿಂಪರಣೆಯನ್ನು ಪುನಾರಾವರ್ತಿ ಸಬೇಕು. ಇದರಿಂದ ಅಡಿಕೆ ಬೆಳೆಗೆ ತಗುಲುವ ಕೊಳೆ ಬಾಧೆಯನ್ನು ತಡೆಗಟ್ಟಬಹುದು ಎಂದು ಸೊರಬ ತೋಟಗಾರಿಕಾ ಸಹಾಯಕ ನಿರ್ದೇಶಕ ಡಾ. ರಾಮಚಂದ್ರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.