ADVERTISEMENT

ಅಡಿಕೆ ನಿಷೇಧ ಪ್ರಸ್ತಾವ ಎಲ್ಲಿಂದ ಬಂತು?

ವಿಷಯ ಬಹಿರಂಗಕ್ಕೆ ‘ಮ್ಯಾಮ್‌ಕೋಸ್‌’ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 6:58 IST
Last Updated 20 ಡಿಸೆಂಬರ್ 2013, 6:58 IST

ಶಿವಮೊಗ್ಗ: ಅಡಿಕೆ ನಿಷೇಧ ಪ್ರಸ್ತಾವವನ್ನು ಸುಪ್ರೀಂಕೋರ್ಟ್‌ ಎದುರು ಮಂಡಿಸಿದ ಕಾರಣವನ್ನು ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕು ಎಂದು ‘ಮ್ಯಾಮ್‌ಕೋಸ್‌’ ಉಪಾಧ್ಯಕ್ಷ ಕೆ.ನರಸಿಂಹ ನಾಯಕ್‌ ಆಗ್ರಹಿಸಿದರು.

ಅಡಿಕೆ ನಿಷೇಧಿಸುವುದಿಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ. ಆದರೆ, ಈ ಪ್ರಸ್ತಾವ ಏಕೆ ಬಂತು? ಎಲ್ಲಿಂದ ಬಂತು? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ರಾಜ್ಯ ಹೈಕೋರ್ಟ್ ಅಡಿಕೆ ಹಾನಿಕಾರವಲ್ಲ ಎಂದು ತೀರ್ಪು ನೀಡಿದೆ. ಇದರ ವಿರುದ್ಧ ಯಾರೂ ಮೇಲ್ಮನವಿ ಸಲ್ಲಿಸಿರಲಿಲ್ಲ. ಆದರೆ, ಕೇಂದ್ರ ಸರ್ಕಾರವೇ ಮುಂದಾಗಿ, ತನ್ನ ವಕೀಲರ ಮೂಲಕ ಅಡಿಕೆ ಕ್ಯಾನ್ಸರ್‌ಕಾರಕ ಎಂದು ಸುಪ್ರೀಂಕೋರ್ಟ್‌ ಮುಂದೆ ಹೇಳಿಕೆ ನೀಡಿರುವುದು ಅಘಾತಕಾರಿ ಸಂಗತಿ.. ಈ ಮೂಲಕ ಲಕ್ಷಾಂತರ ಅಡಿಕೆ ಬೆಳೆಗಾರರ ಮತ್ತು ಕೃಷಿ ಕಾರ್ಮಿಕರ ಜೀವನಕ್ಕೆ ಮರಣ ಶಾಸನ ಬರೆಯಲು ಹೊರಟಂತಿದೆ ಎಂದು ದೂರಿದರು.

ಈ ಕುರಿತು ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಜ.6 ರಂದು ನಡೆಯಲಿದೆ. ಈ ಪ್ರಕರಣದಲ್ಲಿ ಅಡಿಕೆ ಬೆಳೆಗಾರರ ಪರ ವಾದ ಮಂಡಿಸಲು ವಕೀಲರಾದ ಸೋಲಿ ಸೊರಾಬ್ಜಿ, ರಾಮ್ ಜೇಠ್ಮಲಾನಿ, ಬೀನಾ ಮಾಧವನ್‌ ಅವರನ್ನು ನಿಯೋಜಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಈ ಹಿಂದೆ ಸರ್ಕಾರದ ಮತ್ತು ಅಡಿಕೆ ಬೆಳೆಗಾರರ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಲು ನೇಮಿಸಿದ್ದ ವಕೀಲ ಕೆ.ಎಂ.ಭಟ್ ಅವರನ್ನು ಹಿಂದಕ್ಕೆ ಪಡೆದುಕೊಂಡಿದೆ. ಇದರ ಅರ್ಥವೇನು? ಎಂದು ನರಸಿಂಹ ನಾಯಕ್ ಪ್ರಶ್ನಿಸಿದರು.

ತೀರ್ಥಹಳ್ಳಿ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಆರಗ ಜ್ಞಾನೇಂದ್ರ ಮಾತನಾಡಿ, ಅಡಿಕೆ ನಿಷೇಧದ ಹಿಂದೆ ಅಂತರರಾಷ್ಟ್ರಿಯ ಪಿತೂರಿ ಇದೆ. ಅಡಿಕೆ ಉಪ ಉತ್ಪನ್ನಗಳಿಂದ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿರುವ ಸಿಗರೇಟ್ ಕಂಪೆನಿಗಳು ಮಾರುಕಟ್ಟೆ ವಿಸ್ತರಣೆ ವಿಫಲವಾಗುತ್ತಿದ್ದು, ಅಡಿಕೆ ನಿಷೇಧಕ್ಕೆ ಸಂಚು ನಡೆಸಿವೆ ಎಂದು ದೂರಿದರು.

ಕೇಂದ್ರ ಸರ್ಕಾರ ಕೂಡಲೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರವನ್ನು ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಮ್ಯಾಮ್‌ಕೋಸ್‌ ನಿರ್ದೇಶಕ ಅಶೋಕ್‌ ನಾಯಕ, ದೇವಾನಂದ, ಯಡಿಗೆರೆ, ತಿಮ್ಮಪ್ಪ, ನರೇಂದ್ರ, ಸುಬ್ರಹ್ಮಣ್ಯ, ರಾಘವೇಂದ್ರ, ಶಶಿಧರ್, ದೇವಪ್ಪ, ಗಿರಿ, ಸೂರ್ಯ ನಾರಾಯಣ್, ರತ್ನಕರಗೌಡ, ಸುರೇಂದ್ರ, ನಾಗೇಶ್‌ ಡೋಂಗ್ರೆ ಉಪಸ್ಥಿತರಿದ್ದರು.

ಗೋರಖ್‌ ಸಿಂಗ್ ಭೇಟಿಯೇ ನಿಷೇಧಕ್ಕೆ ವೇದಿಕೆ
ಮಲೆನಾಡಿನ ಪ್ರದೇಶಗಳಿಗೆ ಅಡಿಕೆ ತೋಟಗಳ ಅಧ್ಯಯನಕ್ಕೆ ಹಿರಿಯ ತೋಟಗಾರಿಕಾ ವಿಜ್ಞಾನಿ ಗೋರಖ್‌ ಸಿಂಗ್‌ ಬಂದಾಗಲೇ ಅಡಿಕೆ ನಿಷೇಧಕ್ಕೆ ವೇದಿಕೆ ಸಜ್ಜುಗೊಳಿಸಿದ್ದರು ಎಂದು ಮ್ಯಾಮ್‌ಕೋಸ್‌ ಉಪಾಧ್ಯಕ್ಷ ನರಸಿಂಹನಾಯಕ್‌ ಆರೋಪಿಸಿದರು.

  ಸತ್ತ ಅಡಿಕೆ ಮರದ ಬದಲಿಗೆ ಬೇರೆ ಅಡಿಕೆ ಗಿಡ ನೆಡುವುದಕ್ಕಿಂತ ಪರ್ಯಾಯ ತೋಟಗಾರಿಕೆ ಬೆಳೆಗಳನ್ನು ಹಾಕಿ ಎಂದು ಸಲಹೆ ಮಾಡಿದ್ದರು. ಅಲ್ಲದೇ, ಅಡಿಕೆ ಒಂದನ್ನೇ ನೆಚ್ಚಿಕೊಳ್ಳಬಾರದು ಎಂದು ಕೂಡ ಹೇಳಿದ್ದರು. ಅಡಿಕೆ ಬೆಳೆ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ಅವರು ನೀಡಿರಲಿಲ್ಲ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT