ADVERTISEMENT

ಅಡಿಕೆ ಬೆಲೆ ಕುಸಿತ: ಬೆಂಬಲ ಬೆಲೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 9:20 IST
Last Updated 13 ಫೆಬ್ರುವರಿ 2011, 9:20 IST

ಶಿವಮೊಗ್ಗ: ಗುಟ್ಕಾ ಪ್ಯಾಕೇಟ್‌ನ ಪ್ಲಾಸ್ಟಿಕ್ ಬದಲಿಸುವಂತೆ ಸುಪ್ರೀಂ ಕೋರ್ಟ್‌ನ ಸೂಚನೆ ಹಿನ್ನೆಲೆಯಲ್ಲಿ ಅಡಿಕೆ ಬೆಲೆಯಲ್ಲಿ ದಿಢೀರ್ ಕುಸಿತ ಕಾಣಿಸಿಕೊಂಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಪ್ರವೇಶಿಸಿ ಅಡಿಕೆಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಅಡಿಕೆ ಬೆಳೆಗಾರರು ಆಗ್ರಹಿಸಿದ್ದಾರೆ.

ಕೆಂಪು ಅಡಿಕೆಗೆ ` 14,800, ಚಾಲಿ ಅಡಿಕೆಗೆ ` 12,000 ಉತ್ಪಾದನಾ ವೆಚ್ಚ ನಿಗದಿಯಾಗಿದೆ. ಇದಕ್ಕಿಂತ ಹೆಚ್ಚಿನ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ತೀರ್ಥಹಳ್ಳಿ ಅಡಿಕೆ ಬೆಳೆಗಾರರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ಹಾಗೂ ಮ್ಯಾಮ್‌ಕೋಸ್ ಉಪಾಧ್ಯಕ್ಷ ನರಸಿಂಹನಾಯಕ ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಅಡಿಕೆ ಧಾರಣೆ ದಿಢೀರ್ ಕುಸಿತದ ಹಿನ್ನೆಲೆಯಲ್ಲಿ  ತಕ್ಷಣ ಅಡಿಕೆ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಮನವಿ ಮಾಡಲುಫೆ. 14ರಂದು ಮುಖ್ಯಮಂತ್ರಿ ಬಳಿ ಬೆಳೆಗಾರರ ನಿಯೋಗ  ಹೋಗಲಿದೆ  ಎಂದರು.

ಬೆಳೆಗಾರರು  ಆತಂಕಗೊಂಡು  ಆತುರದಲ್ಲಿ  ಮನೆಬಾಗಿಲಲ್ಲಿ ವ್ಯಾಪಾರ ಮಾಡುವುದು ಬೇಡ. ಮಾರುಕಟ್ಟೆಗೆ ಬಂದರೆ ಸಹಕಾರ ಸಂಘಗಳು ಅಡಿಕೆ ಇಟ್ಟುಕೊಂಡು ಮುಂಗಡ ನೀಡುತ್ತವೆ. ಈಗ ಬಂದಿರುವ ಅಡೆತಡೆ ಹೋಗುವವರೆಗೂ ಕಾಯುವುದು ಒಳ್ಳೆಯದು ಎಂದು ಮನವಿ ಮಾಡಿದರು.

ಜಿಲ್ಲೆಯ ಇಡೀ ಆರ್ಥಿಕತೆ ಅಡಿಕೆ ಮೇಲೆ ನಿಂತಿದೆ. ಈ ಉದ್ಯಮದಲ್ಲಿನ ಸಣ್ಣ ಬದಲಾವಣೆಯೂ ಪರಿಣಾಮ ಬೀರಲಿದೆ. ಕಳೆದ 20 ವರ್ಷಗಳಲ್ಲಿ ಈ ರೀತಿ ಕಳೆದ 7ತಿಂಗಳು ಧಾರಣೆ ಏರುಪೇರಾಗದೆ ನಿಂತಿರುವುದು ದಾಖಲೆಯಾಗಿದೆ. ಇನ್ನೆರಡು ತಿಂಗಳು ಇದೇ ರೀತಿ ಇದ್ದಿದ್ದರೆ ಅಡಿಕೆ ಬೆಳೆಗಾರರಿಗೆ ಅನುಕೂಲವಾಗುತ್ತಿತ್ತು. ಮಲೆನಾಡಿನಲ್ಲಿ ಇನ್ನು ಕೆಲವು ಕಡೆ ಅಡಿಕೆ ಕೊಯ್ಲಿ ಮತ್ತು ಅಡಿಕೆ ಸಂಸ್ಕರಣೆ ಕಾರ್ಯ ಭರದಿಂದ ಸಾಗಿದೆ ಎಂದರು.

ಈ ಹಿಂದೆ ಗುಟ್ಕಾ ಮಾರುಕಟ್ಟೆಗೆ ಬಂದಾಗ ಗುಟ್ಕಾ ತಿನ್ನುವಂತೆ ಯಾವ ರೈತರೂ ಒತ್ತಡ ಹೇರಿಲ್ಲ. ಈಗ ಸುಪ್ರೀಂಕೋರ್ಟ್ ಗುಟ್ಕಾ ಪ್ಯಾಕೇಟ್‌ನ ಪ್ಲಾಸ್ಟಿಕ್ ಬದಲಿಸುವಂತೆ ಆದೇಶಿಸಿದೆ. ಹೀಗಾಗಿ ಅಡಿಕೆ ಬೆಳೆ ಇಳಿದಿದೆ ಎಂದು ನರಸಿಂಹನಾಯಕರು ಹೇಳಿದರು.

ಅಡಿಕೆ ಧಾರಣೆ ಏರಿಳಿತಗಳ ಬಗ್ಗೆ ಸರ್ಕಾರ ನಿಗಾ ವಹಿಸಬೇಕು. ನ್ಯಾಯಾಲಯಗಳು ಬೆಳೆಗಾರರ ಹಿತ ಕಾಯಬೇಕು. ಈ ಕೂಡಲೇ ಸುಮಾರು 2 ಸಾವಿರ ರೈತರನ್ನು ಪ್ರಧಾನ ಮಂತ್ರಿ ಬಳಿ ಕರೆದುಕೊಂಡು ಹೋಗುವ ವ್ಯವಸ್ಥೆಯಾಗ ಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದರ ನೇತೃತ್ವ ವಹಿಸಬೇಕು. ರಾಜ್ಯದ ಸಂಸದರು ಇದಕ್ಕೆ ಕೈಜೋಡಿಸಬೇಕು ಎಂದು ಕೆ.ಟಿ. ಗಂಗಾಧರ್ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ, ಮುಖಂಡ ಶಿವಾಜಿರಾವ್ ಸಿಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.