ADVERTISEMENT

ಅತಿವೃಷ್ಟಿ; ನೆರವಾಗದಿದ್ದರೆ ಸತ್ಯಾಗ್ರಹ- ಶಾಸಕ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 9:40 IST
Last Updated 17 ಆಗಸ್ಟ್ 2012, 9:40 IST

ತೀರ್ಥಹಳ್ಳಿ: ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು.

ಗುರುವಾರ ತೀರ್ಥಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇವಲ ಚುನಾವಣೆಗಾಗಿ ನಾನು ರಾಜಕೀಯ ಮಾಡುತ್ತಿಲ್ಲ. ಮುಂದಿನ ಚುನಾವಣೆ ಕೂಡ ನನ್ನ ಗುರಿಯಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂಬುದನ್ನು ಪಕ್ಷ ನಿರ್ಧರಿಸುತ್ತದೆ. ಶಾಸಕನಾಗಿ ಇರುವವರೆಗೆ ಕ್ಷೇತ್ರದ ಜನರ ಹಿತ ಕಾಪಾಡುವುದು ನನ್ನ ಗುರಿ ಎಂದರು.

ಮಲೆನಾಡಿನ ಭಾಗದ ಜನರಿಗೆ ಇಂದಿಗೂ ಹಕ್ಕುಪತ್ರ ಸಿಗುತ್ತಿಲ್ಲ. 25 ಸಾವಿರ ದಿನಗೂಲಿ ನೌಕರರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಅವರ ಬದುಕು ಹೀನಾಯ ಸ್ಥಿತಿಯಲ್ಲಿದೆ. ಸೊಸೈಟಿ ನೌಕರರು ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ಅವರ ಉದ್ಯೋಗ ಖಾತ್ರಿಯಾಗಬೇಕು. ಅದಕ್ಕೆ ಪ್ರತ್ಯೇಕ ಕಾನೂನು ತರಬೇಕು. ಸರ್ಕಾರ ಬಂದು ಮೂರೂವರೆ ವರ್ಷ ಕಳೆದರೂ ಬಗರ್ ಹುಕುಂ ಸಮಿತಿ ಮಾಡಲು ಸಾಧ್ಯವಾಗಿರಲ್ಲಿ. ಇವೆಲ್ಲ ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ನಿದರ್ಶನಗಳಾಗಿವೆ ಎಂದರು.

ADVERTISEMENT

ತಾಲ್ಲೂಕಿನಲ್ಲಿ ಚಂಗಾರು, ಮಹಿಷಿ ಸೇತುವೆಗಳು ಹಣದ ಲಭ್ಯತೆ ಇಲ್ಲದೇ ಮಾಡಿರುವ ಯೋಜನೆಗಳು. ಅಲ್ಲಿ ಗುದ್ದಲಿ ಪೂಜೆ ಮಾಡಿ ಪೋಟೋ ತೆಗೆಸಿಕೊಳ್ಳಲಾಗಿದೆ. ಕೊಳಚೆ ನಿರ್ಮೂಲನಾ ಮಂಡಳಿಯಿಂದ ನೆರವು ಸಿಗಲು ಕಾರಣರಾಗಿದ್ದವರು ಯಾರೆಂಬುದು ಜನರಿಗೆ ತಿಳಿದಿದೆ. ನಾನು ಆಯ್ಕೆಯಾದರೆ ಶಾಸನಸಭೆಯಲ್ಲಿ ಕುರ್ಚಿ ಹುಡುಕಲೂ ಸಾಧ್ಯವಿಲ್ಲ ಎಂದು ಅಪಹಾಸ್ಯ ಮಾಡುತ್ತಿದ್ದವರಿಗೆ ಶಾಸನ ಸಭೆಯಲ್ಲಿ ಸಮರ್ಥವಾಗಿ ಭಾಗವಹಿಸುವ ಮೂಲಕ ಉತ್ತರ ನೀಡಿದ್ದೇನೆ ಎಂದು ಅವರು ಹೇಳಿದರು.

ಪಟ್ಟಣ ಪಂಚಾಯ್ತಿ ಈಚೆಗೆ ನಡೆಸಿದ ನಿವೇಶನದ ಹರಾಜಿನಿಂದ ಹೆಚ್ಚು ಆದಾಯ ಬಂದಿದೆ ಎಂದು ಬೀಗುತ್ತಿದೆ. ಕೇವಲ ಹಣ ಗಳಿಸುವುದಷ್ಟೆ ಪಟ್ಟಣ ಪಂಚಾಯ್ತಿಯ ಗುರಿಯಾಗಬಾರದು. ಬಡವರ, ಮಧ್ಯಮ ವರ್ಗದ ಜನರ ಹಿತ ಕಾಪಾಡುವ ಕೆಲಸ ಆಗಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪಟಮಕ್ಕಿ ಮಹಾಬಲೇಶ್, ಟಿ.ಎಲ್. ಸುಂದರೇಶ್, ಜಿ.ಎಸ್. ನಾರಾಯಣರಾವ್, ಜಫ್ರುಲ್ಲಾ ಖಾನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.