ADVERTISEMENT

ಅನಂತಕುಮಾರ್ ಹೆಗಡೆ ವಜಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 6:04 IST
Last Updated 29 ಡಿಸೆಂಬರ್ 2017, 6:04 IST

ಶಿವಮೊಗ್ಗ: ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಜಾಕ್ಕೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು. ಪಕ್ಷದ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸಚಿವರಾಗಿರುವ ಅವರು ಸಂವಿಧಾನ ಮೌಲ್ಯಗಳನ್ನು ಎತ್ತಿ ಹಿಡಿಯುವುದಾಗಿ ಪ್ರಮಾಣ ವಚನ ಸ್ವೀಕರಿಸಿ, ಇತ್ತೀಚೆಗೆ ಪದೇ ಪದೇ ಸಂವಿಧಾನವನ್ನು ಅಗೌರವಿಸುವ ಮಾತುಗಳನ್ನಾಡುತ್ತಿದ್ದಾರೆ. ಇಂತಹವರನ್ನು ಮಂತ್ರಿ ಸ್ಥಾನದಿಂದ ಶೀಘ್ರವೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಎಲ್ಲ ಜನತೆಗೆ ಸಾಮಾಜಿಕ ನ್ಯಾಯ ಕೊಟ್ಟಿದೆ. ದೇಶದ ಏಕತೆ, ಸಮಗ್ರತೆ, ಜಾತ್ಯತೀತತೆ, ಸಮಾನತೆ ಸಂವಿಧಾನ ಮೂಲ ಮಂತ್ರಗಳಾಗಿವೆ. ದೇಶದ ಪ್ರತಿಯೊಬ್ಬ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಬದ್ಧರಾಗಬೇಕಿದೆ.

ADVERTISEMENT

ಆದರೆ, ಅನಂತಕುಮಾರ್‌ ಹೆಗಡೆ ‘ಸಂವಿಧಾನವನ್ನು ಬದಲಾಯಿಸುತ್ತೇವೆ. ಜಾತ್ಯತೀತವಾದಿಗಳು ಅಪ್ಪ, ಅಮ್ಮ ಇಲ್ಲದವರು ಎಂದು ಹೇಳಿಕೆ ನೀಡಿರುವುದು ಖಂಡನೀಯ’ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಕೆಲವರು ಕೇಂದ್ರ ಸರ್ಕಾರ ಅನಂತಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕವಾದುದು ಎಂದು ಹೇಳಿದರೆ, ಕೆಲವು ಸಚಿವರು ಅವರ ಹೇಳಿಕೆ ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇಂತಹ ಹೇಳಿಕೆಯಿಂದ ಜಾತ್ಯತೀತ ವ್ಯವಸ್ಥೆಗೆ ತೀವ್ರ ಧಕ್ಕೆಯಾಗಿದೆ. ಸಮಾಜದಲ್ಲಿ ಅಶಾಂತಿ ಹರಡುತ್ತಿದೆ. ಇದು ಮತ್ತಷ್ಟು ತೀವ್ರಗೊಳ್ಳುವ ಮುನ್ನ ಸಂವಿಧಾನಕ್ಕೆ ಅಪಚಾರ ಮಾಡುವಂತಹ ಹೇಳಿಕೆ ನೀಡಿರುವ ಅನಂತ್ ಕುಮಾರ್ ಹೆಗಡೆ ಅವರನ್ನು ವಜಾಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮುಖಂಡರಾದ ಎಸ್.ಪಿ.ಶೇಷಾದ್ರಿ, ಜಿ.ಪಲ್ಲವಿ, ಸುಂದರೇಶ್, ಎಚ್.ಎಂ.ಚಂದ್ರಶೇಖರಪ್ಪ, ಕೆ.ರಂಗನಾಥ್, ದೇವೆಂದ್ರಪ್ಪ, ಮಂಗಳಮ್ಮ, ವಿಜಯಲಕ್ಷ್ಮೀ ಪಾಟೀಲ್, ನಾಗರಾಜ್, ಕಾಶಿ ವಿಶ್ವನಾಥ್, ವೈ.ಎಚ್‌.ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.