ADVERTISEMENT

‘ಅಬ್ಬರದ ಪ್ರಚಾರ ಇಲ್ಲ; ಯುಪಿಎ ಸಾಧನೆ ಶ್ರೀರಕ್ಷೆ’

ಮಾಧ್ಯಮ ಸಂವಾದದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಭಂಡಾರಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 13:21 IST
Last Updated 18 ಜೂನ್ 2018, 13:21 IST

ಶಿವಮೊಗ್ಗ: ಅಬ್ಬರದ ಪ್ರಚಾರದ ಬದಲಾಗಿ, ಯುಪಿಎ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಬಳಿಗೆ ಕೊಂಡೊಯ್ದು ಪ್ರಚಾರ ಮಾಡಲಾಗುವುದು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ತಿಳಿಸಿದರು.

‘ಹಣ, ಹೆಂಡದ ಹೊಳೆ ಹರಿಸದೆ, ಪಕ್ಷದ ಸಾಧನೆಗಳನ್ನು ಆಧಾರವಾಗಿಟ್ಟು ಕೊಂಡು ನ್ಯಾಯಯುತವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತೇನೆ’ ಎಂದು ಅವರು ನಗರದಲ್ಲಿ ಶನಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಹೇಳಿದರು.

‘ನಾನು ಲೋಕಸಭಾ ಚುನಾವಣಾ ಪರೀಕ್ಷೆಗೆ ಪೂರ್ಣ ತಯಾರಿ ನಡೆಸಿಯೇ ಪರೀಕ್ಷೆ ಬರೆಯಲು ಹೊರಟಿದ್ದೇನೆ. ಯಾವ ಪ್ರಶ್ನೆ ಬಂದರೂ ಚಿಂತೆಯಿಲ್ಲ’ ಎಂದ ಅವರು, ಪ್ರತಿಸ್ಪರ್ಧಿಗಳು ಯಾರಾಗಿದ್ದಾರೆ ಎಂಬ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂಬಂತೆ ಕಾರ್ಯನಿರ್ವಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನನಗೆ ಅಧಿಕಾರಕ್ಕಿಂತ ಪಕ್ಷ ಮುಖ್ಯ. ಪಕ್ಷ ನನಗೆ ಏನು ಮಾಡಿದೆ ಎಂಬುದಕ್ಕಿಂತ, ನಾನು, ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂಬುದರ ಕುರಿತು ಆಲೋಚನೆ ಮಾಡುತ್ತೇನೆ’  ಎಂದರು.

‘60 ತಿಂಗಳ ಒಳಗಾಗಿ ಸಮಸ್ಯೆಗಳಿಂದ ಮುಕ್ತವಾದ ದೇಶವಾಗಿ ಭಾರತವನ್ನು ನಿರ್ಮಾಣ ಮಾಡುತ್ತೇನೆ ’ ಎಂದು ಹೇಳಿರುವ ಮೋದಿ, 60ತಿಂಗಳಲ್ಲಿ ದೇಶದಲ್ಲಿ ಧರ್ಮ–ಧರ್ಮಗಳ ನಡುವೆ ವೈಮನಸ್ಸು ಉಂಟು ಮಾಡಬಹುದೇ ಹೊರತು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ಯಾವುದೇ ಒಂದು ದೇಶ ಅಭಿವೃದ್ಧಿಯಾಗಬೇಕಾದರೆ, ನಿರ್ದಿಷ್ಟ ಕಾಲಾವಕಾಶಬೇಕು. ಆದರೆ, ಮೋದಿಯಂತಹ ವ್ಯಕ್ತಿಯಿಂದ ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ 60ತಿಂಗಳ ಒಳಗಾಗಿ ಸಮಾಜ ಒಡೆಯುವಂತಹ ಕೆಲಸ ಮಾಡಬಹುದು ಎಂದು ದೂರಿದರು. 

ಯುವಕರನ್ನು ರಾಜಕೀಯದಲ್ಲಿ ಮುಂದೆ ತರಬೇಕು. ರಾಜಕೀಯ ಪ್ರಜ್ಞೆ ಬೆಳೆಸಬೇಕು. ಮಂಜುನಾಥ ಭಂಡಾರಿ, ಅಂತಹ ನೂರಾರು ಯುವಕರ ಪಡೆ ಕಟ್ಟಿ, ಸಮಾಜದ ಸುಧಾರಣೆಗೆ ಪ್ರಯತ್ನಿಸುವುದೇ ತಮ್ಮ ಮೂಲ ಗುರಿ ಎಂದು ತಿಳಿಸಿದರು. ತಾನು ಶಿವಮೊಗ್ಗ ಜಿಲ್ಲೆಯ ಮಗನಲ್ಲ ಎಂದು ಪದೇ ಪದೇ ಟೀಕಿಸುತ್ತಿರುವ ಆಯನೂರು ಮಂಜುನಾಥ್ ಆತ್ಮಾವಲೋಕನ ಮಾಡಿಕೊಳ್ಳಲಿ. ಬೇರೆಯವರನ್ನು ಟೀಕಿಸುವ ಬದಲು, ತಾವು ಏನು ಎಂದು ಮೊದಲು ತಿಳಿದುಕೊಳ್ಳಬೇಕು ಎಂದರು.

ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಜಾತಿ, ಧರ್ಮಗಳ ಆಧಾರಿತವಾದ ರಾಜಕಾರಣ ಮುಖ್ಯ ಅಲ್ಲ. ಅದರಲ್ಲಿ ತಮಗೆ ನಂಬಿಕೆಯೂ ಇಲ್ಲ. ಜನರು ಪ್ರಜ್ಞಾವಂತರಾಗಿದ್ದು, ಸಾಮಾಜಿಕ ಕೆಲಸ ಮಾಡುವವರಿಗೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶೃಂಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂವಾದದಲ್ಲಿ ರಾಜ್ಯ ಕಾರ್ಯದರ್ಶಿ ಎನ್.ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ಕೆ. ಸೂರ್ಯನಾರಾಯಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.