ADVERTISEMENT

ಅರಣ್ಯ ವಾಸಿಗರ ಸೌಲಭ್ಯಕ್ಕೆ ಅಡ್ಡಿ ಬೇಡ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 5:55 IST
Last Updated 4 ಏಪ್ರಿಲ್ 2012, 5:55 IST

ಕಾರ್ಗಲ್: ಅರಣ್ಯ ಭೂಮಿಯಲ್ಲಿ ತಲೆತಲಾಂತರಗಳಿಂದ ವಾಸ ಮಾಡುತ್ತಿರುವ ರೈತರಿಗೆ ದೊರೆಯಬೇಕಾದ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆ, ಸೇತುವೆ ಇನ್ನಿತರ ಕಾರ್ಯಗಳಿಗೆ ಅಧಿಕಾರಿಗಳು ಅಡ್ಡಿಪಡಿಸಬಾರದು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಗ್ರಹಿಸಿದರು.

ಜೋಗದ ಬ್ರಿಡ್ಜ್ ಕ್ಯಾಂಪಿನಿಂದ ಸುತ್ತಮುತ್ತಲ ಗ್ರಾಮಗಳಿಗೆ ಅನುಕೂಲ ಆಗುವಂತೆ ನಿರ್ಮಿಸಲು ಉದ್ದೇಶಿಸಿದ್ದ ಸೇತುವೆ ಕಾಮಗಾರಿಗೆ ಅರಣ್ಯಾಧಿಕಾರಿಗಳು ತಡೆಯೊಡ್ಡಿರುವ ಕಾರಣ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿ ವತಿಯಿಂದ ಹಮ್ಮಿಕೊಂಡಿರುವ ಹಲವಾರು ಪ್ರಗತಿ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ತಡೆಯೊಡ್ಡಿರುವುದರಿಂದ, ಸುಮಾರ‌್ಙು 4 ಕೋಟಿಗಳಷ್ಟು ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳ ಜತೆ ತಾವು ಮಾತುಕತೆ ನಡೆಸಿ ಅಭಿವೃದ್ಧಿ ಕಾಮಗಾರಿಗಳಿಗಿರುವ ಅಡ್ಡಿ-ಆತಂಕ ನಿವಾರಿಸಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು.

ಜೋಗದ ಕೆಪಿಸಿ ಮುಖ್ಯ ಎಂಜಿನಿಯರ್ ಕಚೇರಿಗೆ ಭೇಟಿ ನೀಡಿದ ಕಾಗೋಡು ತಿಮ್ಮಪ್ಪ, ಮುಖ್ಯ ಎಂಜಿನಿಯರ್ ಜಿ. ಹನುಮಂತಪ್ಪ ಅವರೊಂದಿಗೆ ಚರ್ಚೆ ನಡೆಸಿ ಕೆಪಿಸಿ ನಿಗಮ ಕೇವಲ ವಿದ್ಯುತ್ ಉತ್ಪಾದನೆಗೆ ಮಾತ್ರ ಸೀಮಿತವಾಗದೆ, ಶರಾವತಿ ಕಣಿವೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಜೋಗದ ಯೂತ್ ಹಾಸ್ಟೆಲ್‌ನಿಂದ ಬಜಾರ್ ಲೈನ್ ಮೂಲಕವಾಗಿ ಎಸ್‌ವಿಪಿ ಕಾಲೊನಿಗೆ ಸಂಪರ್ಕವಿರುವ ರಸ್ತೆ ತೀರಾ ಹದಗೆಟ್ಟಿರುವುದನ್ನು ಗಮನಿಸಿದ ಕಾಗೋಡು, ಈ ರಸ್ತೆಯಲ್ಲಿ  ಸಾವಿರಾರು ಪ್ರವಾಸಿಗರು ದಿನನಿತ್ಯ ಓಡಾಡುವದರಿಂದ ಕೂಡಲೇ, ಸದರಿ ರಸ್ತೆಗಳನ್ನು ದುರಸ್ತಿ ಪಡಿಸುವಂತೆ ಕೆಪಿಸಿ ಅಧಿಕಾರಿಗಳನ್ನು ಆಗ್ರಹಿಸಿದರು.

ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಖಾಸಗಿ ನಿವಾಸಿಗಳ ವಾಸದ ಮನೆಗಳನ್ನು ಗುರುತಿಸಿ ಹಕ್ಕುಪತ್ರ ನೀಡುವ ಪ್ರಕ್ರಿಯೆಗೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಪಟ್ಟಣ ಪಂಚಾಯ್ತಿ ಸದಸ್ಯರಿಗೆ ಸೂಚನೆ ನೀಡಿದರು.

ಕೆಪಿಸಿ, ಅರಣ್ಯ, ಕಂದಾಯ ಇಲಾಖೆಗಳ ಜಂಟಿ ಸರ್ವೇ ಕಾರ್ಯಾಚರಣೆಯನ್ನು ನಡೆಸಿ, ಗಡಿ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ತೀನಾ ಶ್ರೀನಿವಾಸ್, ಪಂಚಾಯ್ತಿ ಸದಸ್ಯರಾದ ರವಿ ಜೋಗ, ಎಲಿಜಾ ಮ್ಯಾಥ್ಯೂ, ರವಿ ಲಿಂಗನಮಕ್ಕಿ, ಪ್ರಮುಖರಾದ ಪಿ.ಕೆ. ಉಮ್ಮರ್, ಬಿ. ಉಮೇಶ್, ಪಳನಿ, ಪಿ. ಮಂಜುನಾಥ, ಭೀಮರಾಜ್, ಜಗನ್ನಾಥ್, ಮಂಜುನಾಥ ಬಿಳಗಲ್ಲೂರು ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.