ADVERTISEMENT

ಅರಣ್ಯ ವಾಸಿಗಳೊಂದಿಗೆ ಕಾಗೋಡು ಕುಶಲೋಪರಿ

ಕುಗ್ರಾಮದ 50ಮನೆಗಳಿಗೆ ಸೋಲಾರ್ ಗ್ರಿಡ್ ಯೂನಿಟ್

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 6:16 IST
Last Updated 6 ಮಾರ್ಚ್ 2014, 6:16 IST

ಕಾರ್ಗಲ್: ‘ಏಯ್ ಕರಿಯಮ್ಮ ಏನ್ ಕೆಲಸ ಮಾಡ್ತಾ ಇದ್ದೀಯಾ? ನಾಗೀ ಅಡುಗೆ ಕೆಲಸ ಮುಗಿಸಿದೆಯಾ? ಸೊಸೈಟಿಯಾಗೆ ರೇಷನ್ ತೊಗೊಂಡ್ಯಾ? ಉದ್ಯೋಗ ಖಾತ್ರಿ ಕೆಲಸ ಮಾಡ್ತೀಯಾ. ಹೆಣ್ಣು ಮಕ್ಕಳೆಲ್ಲಾ ಓದ್ತಾ ಇದ್ದಾರ. ಬೀರಾ ಈ ಸಾರಿ ಕಾರ್ ಬೆಳೆ ಬೆಳೆದಿದ್ಯಾ. ಯಾರ ಮಗೂ ಇದು, ಊರಿಗೆ ಅಂಗನವಾಡಿ ಕೊಡಿಸ್ಲಾ, ಗುಡಿ ಕೈಗಾರಿಕೆ ಕಲೀತೀರಾ? ಸ್ತೀಶಕ್ತಿ ಸಂಘದವರು ಇದ್ದಾರ?’ ಹೀಗೇ ಸಾಗಿತ್ತು ಅರಣ್ಯವಾಸಿಗಳೊಂದಿಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಕುಶಲೋಪರಿ.

  ಅತ್ಯಂತ ದುರ್ಗಮ ಅರಣ್ಯ ವಾಸಿಗಳಿರುವ ಕಾನೂರು ಕೋಟೆ, ಉರುಳುಗಲ್ಲು, ಹೆಬ್ಬಯ್ಯನ ಕೇರಿ ಗ್ರಾಮ ನಿವಾಸಿಗಳನ್ನು ಭೇಟಿಯಾದ ಅವರು ಪ್ರೀತಿಯಿಂದ ಇಲ್ಲಿನ ಅರಣ್ಯ ವಾಸಿಗಳ ಕಷ್ಟ ಸುಖ ವಿಚಾರಿಸಿದರು.

  ಕಾರ್ಗಲ್ ಭಟ್ಕಳ ರಸ್ತೆಯಲ್ಲಿ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸಾಗಿ ಬಿಳಿಗಾರು ಗ್ರಾಮದಿಂದ 15ಕಿಮೀ ಕಾಡು ದಾರಿ ಯಲ್ಲಿ ದಟ್ಟ ಅರಣ್ಯದ ನಡುವೆ, ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವ ಕಾನೂರು ಕೋಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಅರಣ್ಯ ವಾಸಿಗಳಿಗೆ ರಸ್ತೆ, ಕುಡಿಯುವ ನೀರು ಮತ್ತು ವಿದ್ಯುದ್ಧೀಕರಣದ ವ್ಯವಸ್ಥೆ ಕೊಡಿಸುವ ಸಂಕಲ್ಪ ತೊಟ್ಟು ಮಂಗಳವಾರ ಹೊರಟ ಕಾಗೋಡು ತಿಮ್ಮಪ್ಪ ಅವರ ಪಯಣ ನೋಡುಗರಿಗೆ ಸಾಹಸಭರಿತವಾಗಿ ಕಂಡು ಬಂದಿತ್ತು.

ವಿದ್ಯುತ್ ತಂತಿಗಳನ್ನು ಸಾಗಿಸಲು ತಡೆ ಒಡ್ಡುತ್ತಿರುವ ಇಲ್ಲಿನ ದಟ್ಟ ಅರಣ್ಯದ ನಡುವೆ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯ ಅಡಿಯಲ್ಲಿ  ಸುಮಾರು 50ಮನೆಗಳಿಗೆ ಸೋಲಾರ್ ಗ್ರಿಡ್ ಯೂನಿಟ್ ಅಳವಡಿಸಿ ವಿದ್ಯುತ್ ಪೂರೈಸುವ ನೂತನ ಆವಿಷ್ಕಾರದ ಯೋಜನೆಯೊಂದಿಗೆ ಬಂದ ಕಾಗೋಡು ಅಧಿಕಾರಿ ಗಳೊಂದಿಗೆ ಸೂಕ್ತ ಸ್ಥಳ ಗುರುತಿಸಿ ಸರ್ವೇ ಕಾರ್ಯ ಮುಗಿಸಿದರು.

ಕುಗ್ರಾಮಗಳ ದಟ್ಟ ಅಡವಿಯ ನಡುವೆ ಜೀವನ ನಡೆಸುತ್ತಿರುವ ನಿವಾಸಿಗಳಿಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ತಕ್ಷಣದಿಂದಲೇ ಒದಗಿಸಲು ಕಾರ್ಯ ಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು. ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು, ಗ್ರಾಮದ ಯುವಕರ ತಂಡಕ್ಕೆ ಮೇಲ್ವಿಚಾರಣೆ ನಡೆಸುವಂತೆ ಸಲಹೆ ನೀಡಿದರು.
 
ಹೆಣ್ಣು ಮಕ್ಕಳಿಗೆ ಅಗತ್ಯವಾದ ಹಾಸ್ಟೆಲ್ ವ್ಯವಸ್ಥೆಯನ್ನು ಸಮೀಪದ ಬಿಳಿಗಾರು ಗ್ರಾಮದಲ್ಲಿ ಆರಂಭಿಸಲು ಚಿಂತನೆ ನಡೆಸುತ್ತಿರುವುದಾಗಿ ಭೇಟಿಯಾದ ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದರು.

ಸ್ತ್ರೀ ಶಕ್ತಿ ಸಂಘಗಳಿಗೆ ಅಗತ್ಯವಾದ ಸಭಾಭವನ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸುವಂತೆ ಜಿಲ್ಲಾ ಪಂಚಾಯ್ತಿ ಎಂಜಿನಿಯರ್ ಗಳಿಗೆ ಸೂಚಿಸಿದರು.

  ಕಾನೂರಿನಿಂದ ಪ್ರಸಿದ್ಧ ಪ್ರವಾಸಿತಾಣ ಮತ್ತು ಧಾರ್ಮಿಕ ತಾಣವಾದ ಮುರ್ಡೇಶ್ವರಕ್ಕೆ ಸುಲಭವಾಗಿ ಸಂಪರ್ಕಿಸಲು ಮಾರ್ಗದ ಸುಳಿವು ಅರಿತ ಕಾಗೋಡು, ಕಾನೂರು, ಚೀಕನಹಳ್ಳಿ, ಉತ್ತರಕೊಪ್ಪ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ಉತ್ತರಕೊಪ್ಪದಿಂದ ಕೇವಲ 18ಕಿ.ಮೀ ದೂರವಿರುವ ಮುರ್ಡೇಶ್ವರ ಯಾತ್ರಾ ಸ್ಥಳಕ್ಕೆ ಸಾರಿಗೆ ವ್ಯವಸ್ಥೆ ಇದ್ದು ಇದನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಸುವುದಾಗಿ ಅವರು ತಿಳಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಾ ನಾರಾಯಣ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಯಶೋಧ ನಾರಾಯಣಪ್ಪ, ಬಿ.ಸಿ.ಲಕ್ಷ್ಮೀ ನಾರಾಯಣಭಟ್ ಮತ್ತಿತರರು ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.