ADVERTISEMENT

ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 6:05 IST
Last Updated 15 ಫೆಬ್ರುವರಿ 2012, 6:05 IST

ಶಿವಮೊಗ್ಗ: ಹೈಕೋರ್ಟ್ ಆದೇಶದನ್ವಯ ಆಟೋಗಳಿಗೆ ಮೀಟರ್ ಅಳವಡಿಸುವುದು ಕಡ್ಡಾಯವಾಗಿದ್ದು, ಏಪ್ರಿಲ್ 2ರಿಂದ ಜಿಲ್ಲೆಯಲ್ಲಿ ಎಲ್ಲಾ ಆಟೋಗಳಿಗೂ ತಪ್ಪದೆ ಡಿಜಿಟಲ್ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಟೋಗಳಿಗೆ ಮೀಟರ್  ಅಳವಡಿಸುವ ಸಂಬಂಧ ಆಟೋಚಾಲಕರ ಸಂಘದ ಪದಾಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಚರ್ಚಾ ಸಭೆಯಲ್ಲಿ ಅವರು ಮಾತನಾಡಿದರು.

ಆಟೋಚಾಲಕರು ಹೆಚ್ಚಿನ ಪ್ರಯಾಣ ದರ ವಸೂಲಿ ಹಾಗೂ ಅನುಚಿತವಾಗಿ ವರ್ತಿಸುವುದು ಸೇರಿದಂತೆ ಪ್ರತಿನಿತ್ಯ ನಡೆಯಬಹುದಾದ ಸಂಘರ್ಷ ತಪ್ಪಿಸಲು ನ್ಯಾಯಾಲಯ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿದ್ದು, ಆಟೋಗಳಿಗೆ ಬೇಕಾಗುವ ಡಿಜಿಟಲ್ ಮೀಟರ್‌ಗಳು ದೊರೆಯುವ ಕಂಪೆನಿ ವಿಳಾಸವನ್ನು ಕಾನೂನು ಮಾಪನಶಾಸ್ತ್ರ ಇಲಾಖೆ ನೀಡಲಿದ್ದು, ಆಟೋಚಾಲಕರ ಸಂಘದವರೆ ಕಂಪೆನಿಯವರನ್ನು ನೇರವಾಗಿ ಸಂಪರ್ಕಿಸಿ ಹೋಲ್‌ಸೇಲ್ ದರದಲ್ಲಿ ಖರೀದಿಸಿ, ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಆಟೋಚಾಲಕರ ಸಂಘದ ಪದಾಧಿಕಾರಿಗಳು ಮಾತನಾಡಿ, ಡಿಜಿಟಲ್ ಮೀಟರ್ ಹಾಗೂ ಅದಕ್ಕೆ ಪೂರಕ ಬ್ಯಾಟರಿ ಖರೀದಿಸಬೇಕಾಗುವುದರಿಂದ 5 ಸಾವಿರಕ್ಕಿಂತ ಹೆಚ್ಚು ಖರ್ಚು ಬರಲಿದೆ. ಕೂಡಲೇ ಇಷ್ಟು ಹಣ ವೆಚ್ಚ ಮಾಡಲು ಬಡ ಆಟೋ ಚಾಲಕರಿಗೆ ಸಾಧ್ಯವಾಗದು. ಆದ್ದರಿಂದ ಬ್ಯಾಂಕ್‌ಗಳಿಂದ ಸಾಲ ಕೊಡಿಸಿ ಎಂದು ಮನವಿ ಮಾಡಿದ ಪದಾಧಿಕಾರಿಗಳು, ಈಗಾಗಲೆ 2,500ಕ್ಕೂ ಹೆಚ್ಚು ಆಟೋಗಳಿದ್ದು, ಇದರ ಜತೆಗೆ ಎಸ್‌ಸಿ., ಎಸ್‌ಟಿ., ಬಿಸಿಎಂ ಇಲಾಖೆ ಮೂಲಕ ಪ್ರತಿವರ್ಷ ಆಟೋ ಕೊಡಿಸುವುದರಿಂದ ಆಟೋಗಳ ಸಂಖ್ಯೆ ಹೆಚ್ಚಾಗಿ ದುಡಿಮೆಯೇ ಆಗುತ್ತಿಲ್ಲ ಎಂದು ದೂರಿದರು.
 
ಅಲ್ಲದೇ, ನಗರ ಸಾರಿಗೆ ಬಸ್ಸುಗಳಿಗೆ ಹೆಚ್ಚು ಪರವಾನಗಿ ಕೊಡುತ್ತಿರುವುದರಿಂದ ಆಟೋ ಹತ್ತಲು ಪ್ರಯಾಣಿಕರು ಬರುತ್ತಿಲ್ಲ. ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಮೀಟರ್‌ಗಳು ಆರಂಭಿಕ ಕನಿಷ್ಠ  ್ಙ 20  ನಂತರ ಪ್ರತಿ ಕಿ.ಮೀ.ಗೆ ್ಙ 10 ರಂತೆ ನಿಗದಿಪಡಿಸಿಕೊಡಿ ಎಂಬ ಹಲವಾರು ಬೇಡಿಕೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಬ್ಯಾಂಕುಗಳ ಮೂಲಕ ಸಾಲಸೌಲಭ್ಯ ಹಾಗೂ ಇನ್ನುಳಿದ ಬೇಡಿಕೆಗಳನ್ನು ಸಹ ಪರಿಶೀಲಿಸುವುದಾಗಿ ತಿಳಿಸಿದರು.

 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್‌ಗುಪ್ತಾ ಮಾತನಾಡಿ, ನಿಗದಿಪಡಿಸಿರುವ ಅವಧಿಯೊಳಗೆ ಮೀಟರ್ ಅಳವಡಿಸಿಕೊಳ್ಳಲು ಸನ್ನದ್ಧರಾಗಬೇಕು. ಸಂಘದ ಬೇಡಿಕೆಯಂತೆ ಪರವಾನಗಿ ಇಲ್ಲದೆ ಆಟೋ ಓಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ  ಎಂ.ಎಸ್. ರಾಮಯ್ಯ, ಪ್ರಾದೇಶಿಕ  ಸಾರಿಗೆ ಅಧಿಕಾರಿ ಕುಬೇರಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT