ಶಿವಮೊಗ್ಗ: ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದ ಅಡಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸದ ಅನುದಾನ ರಹಿತ ಶಾಲೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ ಎಚ್ಚರಿಕೆ ನೀಡಿದರು.
ಆ. 1ರಿಂದ ಆರಂಭವಾಗುವ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಅಭಿಯಾನ ಕುರಿತು ಮಂಗಳವಾರ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳು, ಅನುದಾನಿತ, ಅನುದಾನರಹಿತ ಶಾಲೆಗಳು ಹಾಗೂ ವಸತಿ ಶಾಲೆಗಳಲ್ಲಿ ಪ್ರತಿವರ್ಷ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.
ಆದರೆ, ಕೆಲವು ಖಾಸಗಿ ಅನುದಾನ ರಹಿತ ಶಾಲೆಗಳು ಯೋಜನೆಯ ನಿಯಮದಂತೆ ಕ್ರಮ ಜರುಗಿಸುತ್ತಿಲ್ಲ. ಯಾವುದೋ ತಿಂಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆಸುತ್ತಿರುವ ಮಾಹಿತಿ ಇರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಅಂತಹ ಶಾಲೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಆ. 1ರಿಂದ 31ರವರೆಗೆ ಒಂದು ತಿಂಗಳ ಕಾಲ ವಿವಿಧ ಶಾಲೆಗಳಲ್ಲಿ ತಜ್ಞವೈದ್ಯರು ಮಕ್ಕಳ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಶಾಲೆಗಳು, ಶಿಕ್ಷಕರು, ಆರೋಗ್ಯ ಇಲಾಖೆ ಅಧಿಕಾರಿಗಳು ವೈದ್ಯರು ಭಾಗವಹಿಸಿ ಯೋಜನೆಯನ್ನು ಸಮರ್ಪಕ ಆಗಿ ಅನುಷ್ಠಾನಗೊಳಿಸಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ವಸತಿಶಾಲೆಗಳು ಸೇರಿದಂತೆ ಒಂದರಿಂದ 10ನೇ ತರಗತಿಯವರೆಗೆ ಒಟ್ಟು 2,72,113 ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ.
ತಪಾಸಣೆ ವೇಳೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಂಡು ಬಂದರೆ ಸೂಕ್ತ ಚಿಕಿತ್ಸೆಯನ್ನು ತಜ್ಞವೈದ್ಯರು ನೀಡಲಿದ್ದಾರೆ. ಒಂದೊಮ್ಮೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೆ ಅಂತಹ ಮಕ್ಕಳನ್ನು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ಶುಚಿತ್ವಕ್ಕೆ ಆದ್ಯತೆ: ಈ ಅಭಿಯಾನ ಕೇವಲ ಆರೋಗ್ಯ ತಪಾಸಣೆಯಾಗಿರದೆ ಶಾಲಾ ಆವರಣಲ್ಲಿನ ಶುಚಿತ್ವ ಹಾಗೂ ಗ್ರಾಮದ ಪರಿಸರ ಸಂಬಂಧಿಸಿದಂತೆಯೂ ಜಾಗೃತಿ ಮೂಡಿಸುವುದಾಗಿದೆ. ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದರು.
ಪ್ರತಿದಿನ ವರದಿ: ಆಗಸ್ಟ್ ಒಂದರಿಂದ ಒಂದು ತಿಂಗಳು ನಡೆಯುವ ಈ ಅಭಿಯಾನದ ಬಗ್ಗೆ ಪ್ರತಿ ಶಾಲೆಗಳು ತಮಗೆ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅವರಿಗೆ ಪ್ರತಿದಿನದ ವರದಿ ಸಲ್ಲಿಸಬೇಕು, ಆರೋಗ್ಯ ತಪಾಸಣೆ ವರದಿ ಕೊಡದವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಎಸ್. ಕುಮಾರ್ ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲ ತಾಲ್ಲೂಕು ಆರೋಗ್ಯಾಧಿಕಾರಿ,ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.