ADVERTISEMENT

ಆರ್ಥಿಕ ಸಬಲತೆ ಸಾಧಿಸಲು ಸಲಹೆ

ಕುಂಚಿಟಿಗರ ಸಂಘದ ಸಮುದಾಯ ಭವನ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 6:09 IST
Last Updated 2 ಡಿಸೆಂಬರ್ 2013, 6:09 IST

ಶಿವಮೊಗ್ಗ: ಪ್ರತಿಯೊಂದು ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಠವಾದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.

ಬಾಪೂಜಿನಗರದ ಜಿಲ್ಲಾ ಕುಂಚಿಟಿಗರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಜಿಲ್ಲಾ ಕುಂಚಿಟಿಗರ ಸಂಘದಿಂದ ಹಮ್ಮಿಕೊಂಡಿದ್ದ ನೂತನ ಸಮುದಾಯ ಭವನದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಸಮಾಜ ಮೊದಲು ಆರ್ಥಿಕವಾಗಿ ಸದೃಡಗೊಂಡಾಗ ಮಾತ್ರ ಅದು ತನ್ನನ್ನು ತಾನು ಗುರುತಿಸಿಕೊಳ್ಳಲು  ಸಾಧ್ಯ. ಅಂತಹ ಸಂಘಟನೆ ಕುಂಚಿಟಿಗ ಸಮಾಜದಲ್ಲಿದ್ದು, ಪ್ರತಿಯೊಬ್ಬರು ಅದರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

‘ಕುಂಚಿಟಿಗ ಸಮಾಜ ಶ್ರಮ ಸಂಸ್ಕೃತಿಯ ಪ್ರತೀಕ. ಶ್ರಮದ ಮೂಲಕವೇ ತಮ್ಮ ಗುರಿ ಸಾಧಿಸಿ, ನಾವು ಕೂಡಾ ಸಮಾಜದ ಒಂದು ಭಾಗವಾಗಿದ್ದೇವೆ ಎಂದು ಹಲವಾರು ಕ್ಷೇತ್ರಗಳಲ್ಲಿ ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.

ರಾಷ್ಟ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಸಾಲಿನಲ್ಲಿ ಶಿವಮೊಗ್ಗ ಹದಿನಾಲ್ಕನೇ ಸ್ಥಾನದಲ್ಲಿತ್ತು. ಆದರೆ ಇಂದು ಸ್ಥಾನದಲ್ಲಿ ಏರುಪೇರಾಗುವ ಮೂಲಕ ಅನೇಕ ಅಭಿವೃದ್ದಿ ಕಾಮಗಾರಿಗಳಲ್ಲಿ ಕುಂಠಿತವಾಗಿವೆ. ಈ ನಡುವೆ ವಿಮಾನ ನಿಲ್ದಾಣದ ಕಾಮಗಾರಿ ಸ್ಥಗಿತಗೊಂಡಿದೆ. ವಿಮಾನ ನಿಲ್ದಾಣ ಕಾರ್ಯಾರಂಭವಾದರೆ, ಜಿಲ್ಲೆ ಸಾಕಷ್ಟು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದಿರುವ ಶಾದಿ ಭಾಗ್ಯ ಯೋಜನೆ ಎಲ್ಲ ವರ್ಗಗಳಿಗೂ ವಿಸ್ತರಣೆ ಮಾಡಬೇಕು. ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸಿರುವ ಕ್ರಮ ಸರಿಯಾದುದಲ್ಲ ಎಂದ ಅವರು, ಎಲ್ಲ ಧರ್ಮ, ಜಾತಿಗಳಲ್ಲಿಯೂ ಬಡವರಿದ್ದು,  ಈ ಯೋಜನೆಯನ್ನು ಎಲ್ಲ ವರ್ಗಗಳ ಬಡ ಹೆಣ್ಣು ಮಕ್ಕಳಿಗೂ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಸಮಾರಂಭದ ನೇತೃತ್ವವನ್ನು ಹೊಸದುರ್ಗ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ವಹಿಸಿದ್ದರು. ಜಿಲ್ಲಾ ಕುಂಚಿಟಿಗರ ಸಂಘದ ಗೌರವಾಧ್ಯಕ್ಷ ಜಿ.ಪಿ.ಶ್ರೀನಿವಾಸಗೌಡ, ಅಧ್ಯಕ್ಷ ಜಿ.ಕೆ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಪಿ.ಸೋಮಶೇಖರಪ್ಪ, ಖಜಾಂಚಿ ಹಾಲಪ್ಪ, ಷಣ್ಮುಖಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.