ADVERTISEMENT

ಇಂದಿರಾ ಕ್ಯಾಂಟೀನ್‌ಗೆ ಕಾಗೋಡು ಚಾಲನೆ

ಮೊದಲ ದಿನ ಮೊಸರನ್ನ, ಚಿತ್ರಾನ್ನ ಸವಿದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 9:11 IST
Last Updated 14 ಮಾರ್ಚ್ 2018, 9:11 IST
ಇಂದಿರಾ ಕ್ಯಾಂಟೀನ್‌ನಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಆಹಾರ ಸೇವಿಸಿದರು.
ಇಂದಿರಾ ಕ್ಯಾಂಟೀನ್‌ನಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಆಹಾರ ಸೇವಿಸಿದರು.   

ಶಿವಮೊಗ್ಗ: ಇಂದಿರಾ ಕ್ಯಾಂಟೀನ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಮಂಗಳವಾರ ಚಾಲನೆ ನೀಡಿದರು.

ವಿನೋಬನಗರದಲ್ಲಿ ಸ್ಥಾಪಿಸಿರುವ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಕಾರ್ಯಕ್ರಮಕ್ಕೆ ನಗರದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಅಧಿಕಾರಿವರ್ಗ, ಜನಪ್ರತಿನಿಧಿಗಳು ಬಂದಿದ್ದರು. ಇದರಿಂದ ಕೆಲಕಾಲ ನೂಕು ನುಗ್ಗಲು ಉಂಟಾಯಿತು.

ಉಚಿತ ಊಟ: ಕ್ಯಾಂಟೀನ್‌ ಆರಂಭ ದಿನವಾದ ಮಂಗಳವಾರ ಉಚಿತವಾಗಿ ಜನರಿಗೆ ಊಟ ನೀಡಲಾಯಿತು. ಸರದಿ ಸಾಲಿನಲ್ಲಿ ನಿಂತು ಜನ ಆಹಾರ ಸವಿದರು. ಮೊದಲ ದಿನ ಮೊಸರನ್ನ, ಚಿತ್ರಾನ್ನ, ಅನ್ನ, ಸಾಂಬರ್‌ ಸವಿದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಕ್ಯಾಂಟೀನ್‌ಗೆ ಚಾಲನೆ ಚಾಲನೆ ನೀಡಿ ಮಾತನಾಡಿ, ‘ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆರಂಭದಲ್ಲಿ ಬೆಂಗಳೂರು ನಗರಕ್ಕೆ ಮಾತ್ರವೇ ಸೀಮಿತವಾಗಿದ್ದ ಈ ಯೋಜನೆಯನ್ನು ಹಂತ ಹಂತವಾಗಿ ಜಿಲ್ಲೆ, ತಾಲ್ಲೂಕು, ನಗರ ಪ್ರದೇಶಗಳಿಗೆ ವಿಸ್ತರಿಸಲಾಗುತ್ತಿದೆ. ಈ ಮೂಲಕ ಜನರು ಸರ್ಕಾರದ ಮೇಲೆ ಇಟ್ಟಿದ್ದ ಭರವಸೆ ಉಳಿಸಿಕೊಂಡಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.

ಜಿಲ್ಲಾಧಿಕಾರಿ ಲೋಕೇಶ್‌, ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್‌, ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್‌, ಆರ್‌.ಪ್ರಸನ್ನಕುಮಾರ್‌, ಮೇಯರ್‌ ನಾಗರಾಜ ಕಂಕಾರಿ ಅವರೂ ಇದ್ದರು.

*
ಆಹಾರ ರುಚಿಯಾಗಿತ್ತು. ಸರ್ಕಾರದ ಯೋಜನೆಯಿಂದ ನಮ್ಮಂಥ ನೂರಾರು ಬಡವರಿಗೆ ಅನುಕೂಲವಾಗಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ.
–ಪಾರ್ವತಮ್ಮ, ಸಾರ್ವಜನಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.