ADVERTISEMENT

ಉಕ್ಕಿದ ಭದ್ರೆ.. ರಸ್ತೆ ಸಂಚಾರ ಬಂದ್

ಜಿಲ್ಲೆಯಲ್ಲಿ ಮುಂದುವರಿದ ಮಳೆ ಅಬ್ಬರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 10:15 IST
Last Updated 3 ಆಗಸ್ಟ್ 2013, 10:15 IST

ಭದ್ರಾವತಿ: ಇಲ್ಲಿನ ಹೊಸ ಸೇತುವೆ ರಸ್ತೆ ಮೇಲೆ ಶುಕ್ರವಾರ ಬೆಳಗಿನ ಜಾವ ಭದ್ರೆ ತುಂಬಿ ಹರಿದ ಪರಿಣಾಮ ಅಲ್ಲಿ ಅಕ್ಷರಶಃ ಪ್ರವಾಹವೇ ಹರಿದು ಬಂದ ವಾತಾವರಣ ಸೃಷ್ಟಿಯಾಗಿತ್ತು.

ಕಳೆದ ವರ್ಷ ಈ ಸೇತುವೆ ಮೇಲೆ ನೀರು ಹರಿದಿರಲಿಲ್ಲ. 

8 ವರ್ಷಗಳ ನಂತರ ನೀರು ಉಕ್ಕಿ ಹರಿಯುತ್ತಿದ್ದ ದೃಶ್ಯ ನೋಡುಗರ ಮನ ಸೆಳೆಯಿತು.  1996ರಲ್ಲಿ ಒಮ್ಮೆ ಮಾತ್ರ ನೀರು ಸೇತುವೆ ಮೇಲೆ ಹರಿದಿತ್ತು ಎಂದು ನೆನೆಯುತ್ತಾರೆ ಸ್ಥಳೀಯರಾದ ಅರ್ಮುಗಂ.

ಹೊಸ ಸೇತುವೆ ಬಂದ್ ಆದ ಕಾರಣ ಹಳೇ ಸೇತುವೆ ಮೇಲಿನ ಸಂಚಾರ ದಟ್ಟಣೆ ಹೆಚ್ಚಾಯಿತು. ಇದರ ಪರಿಣಾಮ ಟ್ರಾಫಿಕ್‌ಜಾಮ್ ತೊಂದರೆ ಎದುರಾಯಿತು. ಅದನ್ನು ನಿಭಾಯಿಸಲು ಸಂಚಾರಿ ನಿಯಂತ್ರಣ ಪೊಲೀಸರು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು.
ಜಿಲ್ಲಾಧಿಕಾರಿಗೂ ಟ್ರಾಫಿಕ್ ಬಿಸಿ: ತಾಲ್ಲೂಕಿನ ಕನ್ನೇಕೊಪ್ಪ, ಹೊಳೆಭೈರನಹಳ್ಳಿ ಭಾಗದ ಪ್ರದೇಶಗಳಿಗೆ ಭೇಟಿ ನೀಡಿ ನಗರಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವಿಪುಲ್‌ಬನ್ಸಲ್ ಹಾಗೂ  ಅಧಿಕಾರಿಗಳಿಗೆ ಟ್ರಾಫಿಕ್ ಬಿಸಿ ತಟ್ಟಿತು.

ಹಳೇ ಸೇತುವೆ ಮೇಲಿನ ಸಂಚಾರ ದಟ್ಟಣೆ ಹೆಚ್ಚಾದ ಕಾರಣ ಅವರು ಬೈಪಾಸ್ ಮೂಲಕ ಕೆಲವು ಸ್ಥಳಗಳನ್ನು ಭೇಟಿ ಮಾಡಿ ಶಿವಮೊಗ್ಗಕ್ಕೆ ಹೋಗುವ ಸ್ಥಿತಿ ಎದುರಾಯಿತು.

ಮಳೆಯಿಂದಾಗಿ ನವುಲೆ ಬಸವಾಪುರ ಗ್ರಾಮದ ಚಾನಲ್, ಹಾಗಲಮನೆ ಕೆರೆ ಒಡೆದಿದೆ. 100ಕ್ಕೂ ಅಧಿಕ ಮನೆಗಳಿಗ ಹಾನಿಯಾಗಿದೆ, ಕೆಲವೆಡೆ ರಸ್ತೆ ಸಂಚಾರ ಬಂದ್ ಆಗಿದೆ.

ನವುಲೆ-ಬಸವಾಪುರ ಚಾನಲ್ ಕೋಡಿ ಒಡೆದು ನೀರು ಹೊರಗೆ ನುಗ್ಗುತ್ತಿದೆ. ಹಾಗಲಮನೆ ಕೆರೆ ನೀರು ಕಾಲುವೆಗಳ ಹಾದಿ ಹಿಡಿದಿದೆ. ಭದ್ರೆಯ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಮಳೆಯೂ ಸಹ ತನ್ನ ಆರ್ಭಟ ಮುಂದುವರೆಸಿದೆ.

ಕವಲಗುಂದಿ, ಕೋಡಿಹಳ್ಳಿ, ಮಾವಿನಕೆರೆ, ಹೊಳೆಹೊನ್ನೂರು ರಸ್ತೆ ಕಡೆ ನೀರು ನುಗ್ಗಿದ ಕಾರಣ ಸಂಚಾರ ದುಸ್ತರವಾಗಿದೆ. ಪರಿಸ್ಥಿತಿ ಸುಧಾರಿಸಲು ಕೆಲವೆಡೆ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.

ಅಪಾರ ನಷ್ಟ
ಮೂರು ಲಕ್ಷಕ್ಕಿಂತ ಅಧಿಕ ಮೌಲ್ಯದ ಆಸ್ತಿಪಾಸ್ತಿಗೆ ನಷ್ಟವಾಗಿದೆ ಎಂದು ತಹಶೀಲ್ದಾರ್ ಸಿದ್ದಮಲ್ಲಪ್ಪ ತಿಳಿಸಿದ್ದಾರೆ.

ಕವಲಗುಂದಿ ಭಾಗದಲ್ಲಿ 29, ಗುಂಡೂರಾವ್ ಶೆಡ್ ಪ್ರದೇಶದಲ್ಲಿ ಐದಾರು, ಏಕಿನ್‌ಷಾ ಕಾಲೊನಿ ಭಾಗದಲ್ಲಿ 15, ಅಂಬೇಡ್ಕರ್ ನಗರದಲ್ಲಿ 50 ಮನೆಗಳು ಜಲಾವೃತ ವಾಗಿವೆ. ಇಲ್ಲಿಯ ತನಕ ಜಲಾಶಯದಿಂದ 61,000 ಕ್ಯೂಸೆಕ್ಸ್ ನೀರು ಹೊರಬರುತ್ತಿದೆ ಎಂದು ತಹಶೀಲ್ದಾರ್ ತಿಳಿಸಿದರು.

ಅಧಿಕಾರಿಗಳ ಹರಸಾಹಸ:  ಗಂಜಿ ಕೇಂದ್ರ, ತೆರವು ಕಾರ್ಯ ಹಾಗೂ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಕಂದಾಯ ಇಲಾಖೆ, ಪೊಲೀಸ್, ನಗರಸಭೆ ಸೇರಿದಂತೆ  ಹೀಗೆ ವಿವಿಧ ಇಲಾಖೆ ಸಿಬ್ಬಂದಿ ಜನರ ರಕ್ಷಣೆಗಾಗಿ ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಮನೆ ಬಿಡಲೊಪ್ಪದ ಕವಲಗುಂದಿ ಭಾಗದ ಒಂದು ಕುಟುಂಬವನ್ನು ಹುಡುಕಿ ಮಧ್ಯಾಹ್ನ ನಂತರ ತೆಪ್ಪದ ಮೂಲಕ ಗಂಜಿ ಕೇಂದ್ರಕ್ಕೆ ತರುವಲ್ಲಿ ತಹಶೀಲ್ದಾರ್ ನೇತೃತ್ವದ ತಂಡ ಐದಾರು ಗಂಟೆ ಪ್ರಯತ್ನಪಟ್ಟ ಘಟನೆ ನಡೆದಿದೆ.

ರಸ್ತೆ ಸಂಪರ್ಕ ಕಡಿತ
ಶಿಕಾರಿಪುರ: ತಾಲ್ಲೂಕಿನಲ್ಲಿ ಸುರಿದ ಸತತ ಮಳೆಯಿಂದ ಗೌರಿ ಹಳ್ಳ ಭರ್ತಿಯಾಗಿ ನೀರು ಹರಿದ ಪರಿಣಾಮ ರಸ್ತೆ ಸಂಪರ್ಕ ಕಡಿತವಾಗಿದ್ದು, ಸ್ಥಳಕ್ಕೆ ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಭೇಟಿ ನೀಡಿ ವೀಕ್ಷಣೆ ನಡೆಸಿದರು.

ಎರಡು ದಿನಗಳ ಕಾಲ ಸುರಿದ ಅಧಿಕ ಮಳೆಯಿಂದ ಕುಮುದ್ವತಿ ಹೊಳೆ ತುಂಬಿ ಹರಿದ ಪರಿಣಾಮ ಶುಕ್ರವಾರ ಶಿಕಾರಿಪುರದದಿಂದ ಶಿರಾಳಕೊಪ್ಪ ಪಟ್ಟಣಕ್ಕೆ ಚಲಿಸುವ ಮಾರ್ಗದಲ್ಲಿರುವ ಗೌರಿಹಳ್ಳ ಭರ್ತಿಯಾಗಿ ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಶಿರಾಳಕೊಪ್ಪ ಚಲಿಸುವ ಹಾಗೂ ಶಿಕಾರಿಪುರ ಆಗಮಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅನಾಹುತ ತಪ್ಪಿಸಲು ಮುಂಜಾಗೃತ ಕ್ರಮವಾಗಿ ವಾಹನಗಳು ಹಾಗೂ ಸಾರ್ವಜನಿಕರಿಗೆ ಚಲಿಸದಂತೆ ರಕ್ಷಣಾ ಇಲಾಖೆ ಸೂಚನೆ ನೀಡಿದ್ದು, ಶಿಕ್ಷಣ ಇಲಾಖೆ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.

ಶುಕ್ರವಾರ ಮುಂಜಾನೆ ರಕ್ಷಣಾ ಇಲಾಖೆ ಸಿಬ್ಬಂದಿ ಸೂಚನೆ ನೀಡಿದರೂ ಈ ಮಾರ್ಗದಲ್ಲಿ ಚಲಿಸಲು ಯತ್ನಿಸಿದ ಲಾರಿಯೊಂದು ನೀರಿನಲ್ಲಿ ತೇಲಿಕೊಂಡು ಹೋಗಿ ರಸ್ತೆ ಪಕ್ಕದಲ್ಲಿನ ನೀರಿನ ಮಧ್ಯೆ ಸಿಕ್ಕಿ ಹಾಕಿಕೊಂಡಿತ್ತು. ನಂತರ ಲಾರಿಯನ್ನು ಕ್ರೇನ್ ಮೂಲಕ ಸ್ಥಳೀಯ ಯುವಕರ ಸಹಾಯದಿಂದ ನೀರಿನಿಂದ ಹೊರ ತೆಗೆಯಲಾಗಿದೆ.

ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ  ಮಾತನಾಡಿ, ಪ್ರಸ್ತುತ ಈ ರಸ್ತೆಯನ್ನು ತಡಸದಿಂದ ಶಿವಮೊಗ್ಗದವರೆಗೂ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮ ರಾಜ್ಯ ಹೆದ್ದಾರಿಯಾಗಿ ನಿರ್ಮಿಸಲಿದ್ದು, ಈಗಾಗಲೇ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದರು.

ವೀಕ್ಷಣೆಗೆ ಜನ ಸಮೂಹ :ಗೌರಿ ಹಳ್ಳ ಪಟ್ಟಣಕ್ಕೆ ಸಮೀಪವಿರುವುದರಿಂದ ಹಳ್ಳ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿರುವ ದೃಶ್ಯವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಪಟ್ಟಣದ ಹಾಗೂ ಸಮೀಪವಿರುವ ಗ್ರಾಮಗಳ ಜನರು ನೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.