ADVERTISEMENT

ಉಪ ವಿಭಾಗಾಧಿಕಾರಿ ಕಚೇರಿ ಚರ ಸ್ವತ್ತು ಜಪ್ತಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 11:15 IST
Last Updated 18 ಜನವರಿ 2011, 11:15 IST

ಸಾಗರ: ಮುಖ್ಯಮಂತ್ರಿ ಕ್ಷೇತ್ರವಾದ ಶಿಕಾರಿಪುರ ತಾಲ್ಲೂಕಿನ 20ಕ್ಕೂ ಹೆಚ್ಚು ರೈತರಿಗೆ ಭೂಮಿ ಮುಳುಗಡೆಯಾದ ಪರಿಹಾರ ದೊರಕದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿಯ ಚರ ಸ್ವತ್ತನ್ನು ಕೋರ್ಟ್ ಸಿಬ್ಬಂದಿ ಸೋಮವಾರ ಜಪ್ತಿ ಮಾಡಿದರು.

ಶಿಕಾರಿಪುರ ತಾಲ್ಲೂಕಿನ ಹೊಸೂರು ಹೋಬಳಿಯ ಹುಲಿಗನಕಟ್ಟೆ ಗ್ರಾಮದ ಮುರುಗಣ್ಣನ ಕೆರೆ ಅಭಿವೃದ್ಧಿಗಾಗಿ 1962ನೇ ಸಾಲಿನಲ್ಲಿ ಸರ್ಕಾರ ಸುಮಾರು 40 ಎಕರೆ ಪ್ರದೇಶವನ್ನು ಭೂಸ್ವಾಧೀನ ಪ್ರಕ್ರಿಯೆ ಮೂಲಕ ತನ್ನ ವಶಕ್ಕೆ ಪಡೆದಿತ್ತು.1972ರಲ್ಲಿ ಹೀಗೆ ವಶಪಡಿಸಿಕೊಂಡ ಭೂಮಿಗೆ ಪರಿಹಾರ ನೀಡುವ ಬಗ್ಗೆ ಐತೀರ್ಪು ಪ್ರಕಟವಾಗಿತ್ತು.

ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಂತೆ ಆದೇಶಿಸಿ 38 ವರ್ಷ ಕಳೆದರೂ ಸರ್ಕಾರ ಸಂತ್ರಸ್ತ ರೈತರಿಗೆ ಪೂರ್ತಿಯಾಗಿ ಪರಿಹಾರದ ಹಣವನ್ನು ಪಾವತಿಸಿಲ್ಲ. ಒಂದು ಅಂದಾಜಿನ ಪ್ರಕಾರ ಸುಮಾರು 20 ರೈತರಿಗೆ ಈ ಪ್ರಕರಣದಲ್ಲಿ `ರೂ15 ಕೋಟಿ ಪರಿಹಾರದ ಹಣ ಸಂದಾಯವಾಗಬೇಕಿದೆ.ಕಾಳಾಚಾರ್ ಎಂಬ ರೈತನಿಗೆ `ರೂ,87 ಲಕ್ಷ ಸಂದಾಯವಾಗಬೇಕಿದ್ದು, ಈ ಬಗ್ಗೆ ಅವರು ಶಿಕಾರಿಪುರದ ನ್ಯಾಯಾಲಯದಲ್ಲಿ 2008ನೇ ಸಾಲಿನಲ್ಲಿ ಅಮಲ್ಜಾರಿ ಅರ್ಜಿಯನ್ನು ದಾಖಲಿಸಿದ್ದರು.

ಈ ಅರ್ಜಿ ಸಾಗರದ ಹಿರಿಯ ವಿಭಾಗದ ವ್ಯವಹಾರ ನ್ಯಾಯಾಧೀಶರ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದ್ದು, ಇಲ್ಲಿನ ನ್ಯಾಯಾಲಯ ಜಪ್ತಿ ಆದೇಶವನ್ನು ಹೊರಡಿಸಿದ ಕಾರಣ ಉಪ ವಿಭಾಗಾಧಿಕಾರಿ ಕಚೇರಿಯ ಕುರ್ಚಿ, ಮೇಜು, ಕಂಪ್ಯೂಟರ್, ಅಲ್ಮೆರಾ ಇನ್ನಿತರ ಚರ ಸ್ವತ್ತುಗಳನ್ನು ಜಪ್ತುಗೊಳಿಸಲಾಗಿದೆ.

ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಉಪ ವಿಭಾಗಾಧಿಕಾರಿ ಡಾ.ಜಿ.ಎಲ್. ಪ್ರವೀಣ್‌ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಸಲ್ಲಿಸುವ ಪರಿಹಾರದ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿರುವುದರಿಂದ ಅದು ಇತ್ಯರ್ಥವಾಗುವವರೆಗೆ ಹಣ ಸಂದಾಯ ಸಾಧ್ಯವಿಲ್ಲ ಎಂದು ತಿಳಿಸಿದರು.ಅಮಲ್ಜಾರಿ ಅರ್ಜಿಗೆ ಜಿಲ್ಲಾ ನ್ಯಾಯಾಲಯತಡೆಯಾಜ್ಞೆ ನೀಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.